ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಗಬ್ಬೆದ್ದು ನಾರುತ್ತಿವೆ ಸಾರ್ವಜನಿಕ ಶೌಚಾಲಯಗಳು!

ಜಗನ್ಮೋಹನ ಅರಮನೆ, ಕೆ.ಆರ್.ವೃತ್ತ, ಲ್ಯಾನ್ಸ್‌ಡೌನ್‌ ಕಟ್ಟಡದ ಬಳಿ ಹೋಗಲಾರದಂಥ ಪರಿಸ್ಥಿತಿ
Last Updated 31 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಇಲ್ಲಿ ಮೂಗು ಮುಚ್ಚಿದರೂ ತಡೆಯಲಾಗದ ದುರ್ನಾತ, ರಸ್ತೆಬದಿಯ ಎಲ್ಲೆಂದರಲ್ಲೇ ಮೂತ್ರ ವಿಸರ್ಜನೆ, ಪಕ್ಕದಲ್ಲೇ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ರಾಶಿ ರಾಶಿ ಕಸ..!

ಇದು ಮೈಸೂರಿನ ಹೃದಯ ಭಾಗದ ಚಿತ್ರಣ. ಒಂದೆಡೆ ಜಗನ್ಮೋಹನ ಅರಮನೆ, ಅದರ ಮುಂದೆ ಪಾರಂಪರಿಕ ಲ್ಯಾನ್ಸ್‌ಡೌನ್ ಕಟ್ಟಡ. ಅದರ ಎದುರು ಮೈಸೂರು ಅರಮನೆ. ಇಲ್ಲಿ ಸಾರ್ವಜನಿಕರ ಬಳಕೆಗೆಂದು ನಗರಪಾಲಿಕೆ ನಿರ್ಮಿಸಿರುವುದು ಎರಡೇ ಶೌಚಾಲಯಗಳು. ಅವೂ ಗಬ್ಬೆದ್ದು ನಾರುತ್ತಿವೆ. ಹಲವು ತಿಂಗಳುಗಳಿಂದ ನಾಗರಿಕರು ನಿರ್ವಹಣೆ ಸರಿಯಾಗಿ ಮಾಡಿರೆಂದು ಪಾಲಿಕೆಗೆ ದೂರು ಸಲ್ಲಿಸುತ್ತಿದ್ದರೂ, ಸನಿಹದಲ್ಲೇ ಇರುವ ಪಾಲಿಕೆ ಅಧಿಕಾರಿಗಳು ಗಮನ ನೀಡದೇ ನಿರ್ಲಕ್ಷ್ಯ ತೋರಿದ್ದಾರೆ.

ನಗರದ ಪ್ರಮುಖ ತಾಣಗಳಲ್ಲಿ ಒಂದಾಗಿರುವ ಲ್ಯಾನ್ಸ್‌ಡೌನ್ ಕಟ್ಟಡದ ಹಿಂಭಾಗ ನಗರಪಾಲಿಕೆಯು ಎರಡು ಸಾರ್ವಜನಿಕ ಶೌಚಾಲಗಳನ್ನು ಕಟ್ಟಿಸಿದೆ. ಈ ಶೌಚಾಲಯಗಳು ನಿರ್ವಹಣೆ ಇಲ್ಲದೇ ಗಬ್ಬೆದ್ದು ನಾರುತ್ತಿವೆ. ಶೌಚಗೃಹಗಳ ಸುತ್ತಲೂ ಕಸದ ರಾಶಿ ಬಿದ್ದಿದ್ದು, ಉಪಯೋಗಿಸಲಾಗದ ಸ್ಥಿತಿಗೆ ತಲುಪಿವೆ. ಇದರಿಂದಾಗಿ ಕಟ್ಟಡ ಹಿಂಭಾಗದ ಇಡೀ ಜಾಗವೇ ಶೌಚಗೃಹವಾಗಿ ಮಾರ್ಪಟ್ಟಿದ್ದು ದುರ್ನಾತ ದೂರದವರೆಗೂ ಮೂಗಿಗೆ ರಾಚುವಂತಿದೆ.

ಸಾಂಕ್ರಾಮಿಕ ರೋಗಕ್ಕೆ ದಾರಿ: ಅಲ್ಲದೇ, ಸಾಂಕ್ರಾಮಿಕ ರೋಗಗಳು ಹರಡಲು ಇದು ಹೇಳಿ ಮಾಡಿಸಿದ ಜಾಗದಂತಾಗಿದೆ. ಸಾರ್ವಜನಿಕರು ಶೌಚಾಲಯ ಇದ್ದೂ ಇಲ್ಲದಂತಾಗಿರುವ ಕಾರಣ ರಸ್ತೆಯಲ್ಲೇ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಅಲ್ಲದೇ, ಪ್ಲಾಸ್ಟಿಕ್‌, ಆಹಾರ ತ್ಯಾಜ್ಯವನ್ನು ಮುಕ್ತವಾಗಿ
ಬಿಸಾಡುತ್ತಿದ್ದಾರೆ. ಇದರಿಂದ ಕ್ರಿಮಿಕೀಟಗಳು ಹೆಚ್ಚಿವೆ. ಬೀದಿನಾಯಿಗಳು ರಾಜಾರೋಷವಾಗಿ
ಅಡ್ಡಾಡುತ್ತಿವೆ. ಕೆಲವರು ರಾತ್ರಿಹೊತ್ತು ಮಲ ವಿಸರ್ಜನೆಯನ್ನೂ ಮಾಡುತ್ತಾರೆ. ಇದೇ ಪರಿಸ್ಥಿತಿ ಮುಂದುವರೆದರೆ ರೋಗ ರುಜಿನಗಳು ಬರುವುದು ಶತಸಿದ್ಧ ಎಂದು ಸ್ಥಳೀಯ ನಾಗರಿಕರು ಆತಂಕದಿಂದ ‘ಪ್ರಜಾವಾಣಿ’ಗೆ ತಿಳಿಸಿದರು.

ಸಂಖ್ಯೆ ಸಾಲದು: ಲ್ಯಾನ್ಸ್‌ಡೌನ್ ಕಟ್ಟಡ, ದೇವರಾಜ ಅರಸು ರಸ್ತೆಯ ಕೆಳಭಾಗ, ಜಗನ್ಮೋಹನ ಅರಮನೆಯ ಅಕ್ಕಪಕ್ಕದ ರಸ್ತೆಗಳು, ಕೆ.ಆರ್.ವೃತ್ತದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾವಿರಾರು ಜನರು ಬಟ್ಟೆ ಅಂಗಡಿ, ವಿವಿಧ ಬಗೆಯ ಸಾಮಗ್ರಿಗಳ ಅಂಗಡಿ, ಗೊಬ್ಬರದ ಅಂಗಡಿ, ಸ್ಟೇಷನರೀಸ್, ಜೆರಾಕ್ಸ್ ಸೆಂಟರ್, ಡಿಟಿಪಿ ಸೆಂಟರ್, ಪುಸ್ತಕ ಮಳಿಗೆ, ಹಣ್ಣಿನ ಅಂಗಡಿ ಸೇರಿದಂತೆ ನಾನಾ ಬಗೆಯ ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ.

ದಿನನಿತ್ಯ ಇಲ್ಲಿ ಸಾವಿರಾರು ಗ್ರಾಹಕರು, ಸಾರ್ವಜನಿಕರು ಬರುತ್ತಾರೆ. ಈ ದೊಡ್ಡ ಸಂಖ್ಯೆಯ ಜನರಿಗೆ ಲ್ಯಾನ್ಸ್‌ಡೌನ್ ಕಟ್ಟಡದ ಹಿಂಭಾಗದಲ್ಲಿ ಎರಡು ಶೌಚಾಲಯಗಳು ಸಾಲದಾಗಿವೆ. ಅಲ್ಲದೇ, ನಿರ್ವಹಣೆ ಇಲ್ಲದೇ ಗಬ್ಬೆದ್ದಿರುವುದು ನಾಗರಿಕರು ಅನಿವಾರ್ಯವಾಗಿ ರಸ್ತೆಯಲ್ಲೇ ಶೌಚಾಲಯ ಮಾಡಿಕೊಂಡಿದ್ದಾರೆ.

ಒಂದು ಕಡೆ ವಿಲೇವಾರಿಯಾಗದೆ ಕೊಳೆಯುತ್ತಿರುವ ರಾಶಿ ಕಸ, ಮತ್ತೊಂದು ಕಡೆ ಮೂತ್ರ ವಿಸರ್ಜನೆಯಿಂದ ಸ್ಥಳ ಸಂಪೂರ್ಣ ಕೊಳಚೆ ಗುಂಡಿಯಾಗಿ ಮಾರ್ಪಟ್ಟಿರುವುದು, ಸಾಂಸ್ಕೃತಿಕ ನಗರಿಯ ಹೃದಯಭಾಗಕ್ಕೇ ಕಪ್ಪು ಚುಕ್ಕೆ ಇಟ್ಟಂತಾಗಿದೆ. ಅಲ್ಲದೇ, ಇಲ್ಲಿನ ಘನತ್ಯಾಜ್ಯದಲ್ಲಿ ಶೇ 53ರಷ್ಟು ಸುತ್ತಮುತ್ತಲಿನ ಹೋಟೆಲ್ ಮತ್ತು ಬಾರ್‌ಗಳಿಂದಲೇ ಸೇರುತ್ತಿದೆ. ಕತ್ತರಿಸಿದ ತರಕಾರಿ ಸಿಪ್ಪೆ ಮತ್ತು ಕೊಳೆತ ತರಕಾರಿಗಳನ್ನು ರಸ್ತೆಬದಿಯಲ್ಲಿ ಸುರಿಯುತ್ತಾರೆ. ಸಣ್ಣ ಪುಟ್ಟ ವ್ಯಾಪಾರಿಗಳೂ ತ್ಯಾಜ್ಯವನ್ನು ಇಲ್ಲೇ ತಂದು ಸುರಿಯುತ್ತಿದ್ದಾರೆ ಎಂದು ಇಲ್ಲಿನ ವ್ಯಾಪಾರಿ ಆಸಿಫ್‌ ಹುಸೇನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT