ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ್ಟಿ ಪ್ರಕಟಿಸಿದರೆ ನ್ಯಾಯಾಂಗ ನಿಂದನೆ: ಜೆಡಿಎಸ್ ಶಾಸಕ ಸಾ.ರಾ.ಮಹೇಶ್‌

ಮೈಮುಲ್‌ ನೇಮಕಾತಿ: ಜೆಡಿಎಸ್ ಶಾಸಕ ಸಾ.ರಾ.ಮಹೇಶ್‌ ಹೇಳಿಕೆ
Last Updated 17 ಆಗಸ್ಟ್ 2020, 17:08 IST
ಅಕ್ಷರ ಗಾತ್ರ

ಮೈಸೂರು: ‘ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಒಕ್ಕೂಟದಲ್ಲಿ (ಮೈಮುಲ್‌) ನಡೆದಿರುವ ನೇಮಕಾತಿ ಪ್ರಕ್ರಿಯೆಯ ಅಂತಿಮ ಪಟ್ಟಿ ಪ್ರಕಟಿಸಬಾರದು ಎಂದು ಹೈಕೋರ್ಟ್‌ ಆ.13ರಂದು ಮಧ್ಯಂತರ ತೀರ್ಪು ನೀಡಿದೆ’ ಎಂದು ಶಾಸಕ ಸಾ.ರಾ.ಮಹೇಶ್‌ ಸೋಮವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಹೈಕೋರ್ಟ್‌ನ ಮಧ್ಯಂತರ ತೀರ್ಪು ಉಲ್ಲಂಘಿಸಿ ಮೈಮುಲ್ ಆಡಳಿತ ಮಂಡಳಿ ಸಭೆ ನಡೆಸಲಿದೆ. ಈ ಸಭೆಯ ಅಜೆಂಡಾದಲ್ಲಿ ನೇಮಕಾತಿ ವಿಷಯವನ್ನು ಅಡಕಗೊಳಿಸಿದೆ. ಒಂದು ವೇಳೆ ಅಂತಿಮ ಪಟ್ಟಿ ಪ್ರಕಟಿಸಿದ್ದಾದರೆ, ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುತ್ತೇವೆ’ ಎಂದು ಅವರು ಹೇಳಿದರು.

‘ಸೆ.13ಕ್ಕೆ ಈಗಿನ ಆಡಳಿತ ಮಂಡಳಿಯ ಅಧಿಕಾರದ ಅವಧಿ ಮುಗಿಯಲಿದೆ. ಆಡಳಿತಾಧಿಕಾರಿ ನೇಮಕ ಪ್ರಕ್ರಿಯೆ ನಡೆದಿದೆ. ಈಗಲೂ ನಿಮಗೆ ಅನ್ಯಾಯ ಆಗಬಾರದು ಎಂದೇ ಮನವಿ ಮಾಡಿಕೊಳ್ಳುತ್ತಿರೊದು. ಯಾವ ಕಾರಣಕ್ಕೂ ನೇಮಕಾತಿಗಾಗಿ ನಿಮ್ಮೊಳಗಿನ ಮಾತುಕತೆಯಂತೆ ಹಣ ಕೊಡಬೇಡಿ’ ಎಂದು ಶಾಸಕ ಸಾ.ರಾ.ಮಹೇಶ್‌ ಉದ್ಯೋಗಾಕಾಂಕ್ಷಿಗಳಲ್ಲಿ ಮನವಿ ಮಾಡಿದರು.

‘ಶಾಸಕರಿಬ್ಬರು ದೂರು ನೀಡಿದ್ದೇವೆ. ಹೈಕೋರ್ಟ್‌ನಲ್ಲಿ ಪಿಐಎಲ್ ದಾಖಲಿಸಿದ್ದೇವೆ. ಆದರೂ ಯಾರ ಒತ್ತಡಕ್ಕೆ ಮಣಿದು ನೇಮಕಾತಿ ಪ್ರಕ್ರಿಯೆ ಅಂತಿಮಗೊಳಿಸಲಾಗುತ್ತಿದೆ ಎಂಬುದನ್ನು ಸಹಕಾರ ಸಚಿವರು ಬಹಿರಂಗಪಡಿಸಬೇಕು. ಇಡೀ ಪ್ರಕ್ರಿಯೆಯನ್ನು ರದ್ದುಗೊಳಿಸಿ, ಹೊಸದಾಗಿ ನೇಮಕಾತಿ ಮಾಡಿಕೊಳ್ಳಬೇಕು’ ಎಂದು ಆಗ್ರಹಿಸಿದರು.

‘ರಾಜ್ಯಪಾಲರು, ಮುಖ್ಯಮಂತ್ರಿ, ಸಹಕಾರ ಸಚಿವರಿಗೆ ಶಾಸಕರೇ ಖುದ್ದು ದೂರು ಸಲ್ಲಿಸಿದ್ದೇವೆ. ಅಕ್ರಮದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವ ಬದಲು ನೇಮಕಾತಿಗೆ ಸಾಥ್ ನೀಡಲಾಗುತ್ತಿದೆ. ಇದನ್ನು ಗಮನಿಸಿದರೆ ಮೈಮುಲ್‌ನ ನೇಮಕಾತಿ ಅಕ್ರಮದಲ್ಲಿ ಸರ್ಕಾರದ ಪ್ರತಿನಿಧಿಗಳ ಪಾಲುದಾರಿಕೆಯೂ ಸಾಬೀತಾದಂತಾಗಿದೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT