ಸೋಮವಾರ, ಸೆಪ್ಟೆಂಬರ್ 20, 2021
22 °C
ಲಾಕ್‌ಡೌನ್‌ ಅವಧಿಯಲ್ಲಿ ಜರ್ಝರಿತರಾಗಿದ್ದ ಬೆಳೆಗಾರರಿಗೆ ಶುಕ್ರದೆಸೆ

ಸಿಹಿಗುಂಬಳದ ಬೆಲೆ ಹೆಚ್ಚಳ, ರೈತರಿಗೆ ಹರ್ಷ

ಕೆ.ಎಸ್.ಗಿರೀಶ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಲಾಕ್‌ಡೌನ್‌ ಅವಧಿಯಲ್ಲಿ ಸಗಟು ಬೆಲೆ ಕೆ.ಜಿಗೆ ₹2ಕ್ಕೆ ಕುಸಿದು ಅತೀವ ನಷ್ಟಕ್ಕೆ ಒಳಗಾಗಿದ್ದ ಸಿಹಿಗುಂಬಳ ಬೆಳೆಗಾರರಿಗೆ ಈಗ ಒಂದಿಷ್ಟು ಲಾಭವಾಗುವಂತಹ ಬೆಲೆ ಬರಲಾರಂಭಿಸಿದೆ. ಸೋಮವಾರ ಇಲ್ಲಿನ ಎಪಿಎಂಸಿಯಲ್ಲಿ ಕೆ.ಜಿ.ಗೆ ₹9ಕ್ಕೆ ಜಿಗಿದಿರುವ ಇದರ ಬೆಲೆಯು ನಿರೀಕ್ಷೆಗಳನ್ನು ಗರಿಗೆದರಿಸಿದೆ.

ಜನವರಿಯಲ್ಲಿ ಕೆ.ಜಿ.ಗೆ ₹11ಕ್ಕೆ ಏರಿಕೆಯಾಗಿದ್ದು ಬಿಟ್ಟರೆ, ಅಲ್ಲಿಂದ ಇಲ್ಲಿಯವರೆಗೆ ಸಿಹಿಗುಂಬಳಕ್ಕೆ ರೈತರಿಗೆ ಸಿಕ್ಕ ಅತಿ ಹೆಚ್ಚಿನ ಬೆಲೆ ಇದಾಗಿದೆ.

ಮಾರ್ಚ್, ಏಪ್ರಿಲ್, ಮೇ ತಿಂಗಳಿನಾದ್ಯಂತ ಇದರ ಬೆಲೆ ₹2ರಲ್ಲೇ ಇತ್ತು. ನಂತರ ₹4, ₹5ಕ್ಕೆ ಹೆಚ್ಚಾಗಿತ್ತು. ಈಗ ₹9ಕ್ಕೆ ಹೆಚ್ಚಾಗಿದೆ.

‘ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಬೆಲೆ ಇದಕ್ಕೂ ಹೆಚ್ಚಿರುತ್ತಿತ್ತು. ಆದರೆ, ಈ ಬಾರಿ ಅಷ್ಟು ಬೆಲೆ ಸಿಗುತ್ತಿಲ್ಲ. ಹಿಂದೆ ಆಗಿರುವ ನಷ್ಟಕ್ಕೆ ಹೋಲಿಸಿದರೆ ಈಗ ಸಿಗುತ್ತಿರುವ ಬೆಲೆ ಅಂತಹ ಹೆಚ್ಚೇನೂ ಅಲ್ಲ’ ಎಂದು ಶಿರಮಹಳ್ಳಿಯ ಯುವ ರೈತ ಕಾರ್ತೀಕ ತಿಳಿಸಿದರು.

ಹೋಟೆಲ್ ಉದ್ಯಮ ಆರಂಭ ಆಗಿರುವುದರಿಂದ ಸಿಹಿಗುಂಬಳಕ್ಕೆ ಬೇಡಿಕೆ ಬಂದಿದೆ. ಕೇರಳ ಭಾಗದ ವರ್ತಕರಿಂದಲೂ ಉತ್ತಮ ಬೇಡಿಕೆ ವ್ಯಕ್ತವಾಗಿದೆ. ಹೀಗಾಗಿ, ಸೋಮವಾರ ಮಾರುಕಟ್ಟೆಗೆ 596 ಕ್ವಿಂಟಲ್‌ನಷ್ಟು ಸಿಹಿಗಂಬಳ ಆವಕವಾಗಿದ್ದರೂ ಬೆಲೆ ಮಾತ್ರ ಏರುಗತಿಯಲ್ಲೇ ಇದೆ. ಹಾಪ್‌ಕಾಮ್ಸ್‌ನಲ್ಲಿ ಇದರ ಬೆಲೆ ಕೆ.ಜಿ.ಗೆ ₹15 ಇದೆ.

ತಮಿಳುನಾಡಿನಿಂದ ಬರುತ್ತಿರುವ ಕ್ಯಾರೆಟ್ ಆವಕ ಕಡಿಮೆಯಾಗಿದೆ. ಕಳೆದ ತಿಂಗಳು ದಿನವೊಂದಕ್ಕೆ 70ರಿಂದ 75 ಕ್ವಿಂಟಲ್‌ನಷ್ಟು ಕ್ಯಾರೆಟ್ ಬರುತ್ತಿತ್ತು. ಇದರ ಆವಕ 65 ಕ್ವಿಂಟಲ್‌ಗೆ ಕುಸಿದಿದೆ. ಇದರಿಂದ ಸಗಟು ಬೆಲೆಯು ಕೆ.ಜಿ.ಗೆ ₹30 ಇದೆ. ಹಾಪ್‌ಕಾಮ್ಸ್‌ನಲ್ಲಿ ಇದರ ಬೆಲೆ ಕೆ.ಜಿ.ಗೆ ₹47 ಇದೆ.

ಟೊಮೆಟೊ ಸಗಟು ಬೆಲೆ ಕೆ.ಜಿ.ಗೆ ₹10, ಬೀನ್ಸ್ ₹22, ಹಸಿಮೆಣಸಿನಕಾಯಿ ₹28, ದಪ್ಪಮೆಣಸಿನಕಾಯಿ ₹55ರಲ್ಲಿದೆ.

ಕೋಳಿ ಮೊಟ್ಟೆ ಬೆಲೆ ಚೇತರಿಕೆ‌: ಕೋಳಿ ಮೊಟ್ಟೆ ಬೆಲೆ ಇದೇ ಮೊದಲ ಬಾರಿ ಶ್ರಾವಣ ಮಾಸದಲ್ಲಿ ಚೇತರಿಕೆ ಕಾಣುವ ಮೂಲಕ ಮೊಟ್ಟೆ ಉತ್ಪಾದಕರಲ್ಲಿ ಮಂದಹಾಸ ಮೂಡಿಸಿದೆ. ಕಳೆದ ವಾರ ₹3.40ಕ್ಕೆ ಕುಸಿದು ನಿರಾಸೆ ತರಿಸಿತ್ತು. ಆದರೆ, ಈಗ ₹3.73ಕ್ಕೆ ಹೆಚ್ಚಾಗಿದೆ. ಈ ಬೆಲೆಯು ಎಷ್ಟು ದಿನ ಇರಬಹುದು ಎಂಬುದು ಮಾತ್ರ ಅನಿಶ್ಚಿತವಾಗಿಯೇ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು