ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ‘ಶಕ್ತಿಧಾಮ’ಕ್ಕೆ ಶೋನಲ್ಲಿ ಗೆದ್ದಿದ್ದ 18 ಲಕ್ಷ ಕೊಟ್ಟಿದ್ದರು ಪುನೀತ್

ಕನ್ನಡದ ಕೋಟ್ಯಾಧಿಪತಿ ಸರಣಿ l ಮೈಸೂರು ಶಕ್ತಿಧಾಮದಲ್ಲಿ ನೀರವ ಮೌನ
Last Updated 29 ಅಕ್ಟೋಬರ್ 2021, 20:54 IST
ಅಕ್ಷರ ಗಾತ್ರ

ಮೈಸೂರು: ಡಾ.ರಾಜ್‌ಕುಮಾರ್‌ ಕುಟುಂಬ ಎರಡು ದಶಕದಿಂದ ಇಲ್ಲಿ ನಡೆಸುತ್ತಿರುವ ಮಹಿಳೆಯರ ಪುನರ್ವಸತಿ ಮತ್ತು ಅಭಿವೃದ್ಧಿ ಕೇಂದ್ರ ‘ಶಕ್ತಿಧಾಮ’ಕ್ಕೆ ಪುನೀತ್‌ ರಾಜ್‌ಕುಮಾರ್‌, ಕನ್ನಡದ ಕೋಟ್ಯಾಧಿಪತಿಯ ಮೊದಲ ಸರಣಿಯಲ್ಲಿ ತಾವು ಗೆದ್ದ ₹ 18 ಲಕ್ಷ ಹಣವನ್ನು ಒಮ್ಮೆಗೆ ನೀಡಿ ಅಚ್ಚರಿ ಮೂಡಿಸಿದ್ದರು.

ಊಟಿ ರಸ್ತೆಯಲ್ಲಿರುವ ‘ಶಕ್ತಿಧಾಮ’ವನ್ನು ನಟ ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ರಾಜ್‌ಕುಮಾರ್ 1998ರಲ್ಲಿ ಸ್ಥಾಪಿಸಿದ್ದರು. 2000ರಿಂದ ಚಟುವಟಿಕೆ ಆರಂಭಿಸಿದ ‘ಶಕ್ತಿಧಾಮ’ದಲ್ಲಿ ಅನಾಥ ಮತ್ತು ಬಡವರಾದ 150 ಹೆಣ್ಣುಮಕ್ಕಳು ಪ್ರಾಥಮಿಕ ಹಂತದಿಂದ ಎಂಜಿನಿಯರಿಂಗ್‌ವರೆಗೂ ಶಿಕ್ಷಣ ಪಡೆಯುತ್ತಿದ್ದಾರೆ.

ಸಂತ್ರಸ್ತ ಮಹಿಳೆಯರಿಗೆ ಆಶ್ರಯದ ಜೊತೆಗೆ ಕೌಶಲ ತರಬೇತಿಗಳನ್ನೂ ನೀಡಲಾಗುತ್ತಿದೆ. ಕೌಟುಂಬಿಕ ಸಲಹಾ ಕೇಂದ್ರವೂ ಇಲ್ಲಿದೆ. ಗೀತಾ ಶಿವರಾಜ್‌ಕುಮಾರ್ ಅಧ್ಯಕ್ಷರಾಗಿದ್ದಾರೆ.

ದೇವರೂ ಕಿವುಡನಾದ: ‘ಪುನೀತಣ್ಣ ಬದುಕಲಿ ಎಂದು ಪದೇ ಪದೇ ಪ್ರಾರ್ಥಿಸಿದ್ದು ದೇವರಿಗೆ ತಲುಪಲಿಲ್ಲ. ದೇವರೂ ಕಿವುಡನಾಗಿಬಿಟ್ಟ’ ಎಂದು ‘ಶಕ್ತಿಧಾಮ’ದ ನಿವಾಸಿ, ಪ್ರಥಮ ಪಿಯು ವಿದ್ಯಾರ್ಥಿನಿ ಸುಷ್ಮಾ ಗದ್ಗದ್ಗಿತರಾದರು. ಉಳಿದವರು ಆಕೆಯಷ್ಟೇ ಶೋಕತಪ್ತರಾಗಿದ್ದರು. ಪುನೀತ್‌ ರಾಜ್‌ಕುಮಾರ್‌ ನಿಧನ ನೀರವ ಮೌನವನ್ನು ಸೃಷ್ಟಿಸಿತ್ತು.

‘ನಾಲ್ಕು ತಿಂಗಳ ಹಿಂದೆಯಷ್ಟೇ ನಂಜನಗೂಡಿಗೆ ಹೋಗುವಾಗ ಪುನೀತಣ್ಣ ಬಂದು ಉಪಾಹಾರ ಸೇವಿಸಿದ್ದರು. ಇನ್ನೊಂದು ತಿಂಗಳಿಗೆ ಊಟದ ಮನೆ, ಗ್ರಂಥಾಲಯಗಳಿರುವ ಕಟ್ಟಡ ಉದ್ಘಾಟಿಸಲು ಬರುತ್ತಾರೆಂದು ಕಾತರದಿಂದ ಕಾಯುತ್ತಿದ್ದೆವು. ಈಗ ಅವರಿಲ್ಲ ಎಂಬುದನ್ನು ನಂಬುವುದಕ್ಕೆ ಆಗುತ್ತಿಲ್ಲ’ ಎಂದು ಸುಷ್ಮಾ ಭಾವುಕರಾದರು.

‘ಅವರು ಬಂದರೆ ನಮಗೆ ಖುಷಿಯೋ ಖುಷಿ. ನಮ್ಮೊಡನೆ ಕುಳಿತು ಬಹಳ ಹೊತ್ತು ಮಾತನಾಡುತ್ತಿದ್ದರು. ಅವರಿಗಾಗಿ ನಾವು ಕಾತರಿಂದ ಕಾಯುತ್ತಿದ್ದೆವು’ ಎಂದು ಸ್ಮರಿಸಿದರು.‘ಇಲ್ಲಿ ಕೌಶಲ ಕೇಂದ್ರ ಉದ್ಘಾಟನೆಯಾದಾಗ ನಮ್ಮೊಂದಿಗೇ ಊಟ ಮಾಡಿದ್ದರು. ಫೋಟೊ ತೆಗೆಸಿಕೊಂಡು ಸಂಭ್ರಮಿಸಿದ್ದೆವು’ ಎಂದು ಸಿಬ್ಬಂದಿಯೂ ಕಣ್ಣೀರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT