ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುರುವಾಗದ ಭತ್ತ ಖರೀದಿ: ಬೆಲೆ ಕುಸಿತ, ಸಿಕ್ಕಷ್ಟು ದರಕ್ಕೆ ಕಣದಲ್ಲೇ ಮಾರಾಟ

ಕಂಗಾಲಾದ ಭತ್ತದ ಬೆಳೆಗಾರ
Last Updated 23 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯಲ್ಲಿ ಭತ್ತದ ಕೊಯ್ಲು ಭರದಿಂದ ನಡೆದಿದೆ. ಆದರೆ ಇದಕ್ಕೆ ಪೂರಕವಾಗಿ, ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳಲ್ಲಿ ಭತ್ತದ ಖರೀದಿ ಇನ್ನೂ ಶುರುವಾಗದಿರುವುದರಿಂದ, ಮುಕ್ತ ಮಾರುಕಟ್ಟೆಯಲ್ಲಿ ಭತ್ತದ ಬೆಲೆ ಪಾತಾಳಕ್ಕೆ ಕುಸಿದಿದೆ.

ಬೆಳೆಗಾರರಿಂದ ಭತ್ತ ಖರೀದಿಸಲಿಕ್ಕಾಗಿ ಜಿಲ್ಲೆಯ 11 ಕಡೆ ಜಿಲ್ಲಾಡಳಿತ ಖರೀದಿ ಕೇಂದ್ರ ಆರಂಭಿಸಿದೆ. ಆದರೆ ಈ ಕೇಂದ್ರಗಳಲ್ಲಿ ಇನ್ನೂ ರೈತರ ನೋಂದಣಿ ಪ್ರಕ್ರಿಯೆಯೇ ನಡೆದಿದೆ. ಯಾವಾಗಿನಿಂದ ಖರೀದಿ ಆರಂಭವಾಗಲಿದೆ? ಎಂಬ ನಿಖರ ಮಾಹಿತಿಯೇ ಕೃಷಿಕರಿಗೆ ಸಿಗದಿರುವುದರಿಂದ; ಒಕ್ಕಣೆಯ ಕಣಗಳಲ್ಲೇ ಮಧ್ಯವರ್ತಿಗಳಿಗೆ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿರುವ ಚಿತ್ರಣ ಗೋಚರಿಸುತ್ತಿದೆ.

ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಎ ಗ್ರೇಡ್‌ ಭತ್ತಕ್ಕೆ ಒಂದು ಕ್ವಿಂಟಲ್‌ಗೆ ₹ 1888 ಇದೆ. ಸಾಮಾನ್ಯ ಭತ್ತದ ಧಾರಣೆ ₹ 1868 ಇದೆ. ಆದರೆ ಒಂದು ಕ್ವಿಂಟಲ್‌ಗೆ ₹ 1200–₹ 1300ರ ದರದಲ್ಲಿ ದಲ್ಲಾಳಿಗಳು ರೈತರಿಂದ ಗದ್ದೆಗಳಲ್ಲೇ ಭತ್ತ ಖರೀದಿ ಮಾಡುತ್ತಿದ್ದಾರೆ. ಕಣಗಳಿಂದಲೇ ಲಾರಿಗಳಲ್ಲಿ ತುಂಬಿಕೊಂಡು ತಮ್ಮ ಗೋದಾಮಿಗೆ ಕೊಂಡೊಯ್ದು ಸಂಗ್ರಹಿಸುತ್ತಿದ್ದಾರೆ. ಮುಕ್ತ ಮಾರುಕಟ್ಟೆಯಲ್ಲಿ ಭತ್ತಕ್ಕೆ ಸೂಕ್ತ ಧಾರಣೆ ಸಿಗದಿರುವುದು ಬಹುತೇಕ ಕೃಷಿಕರನ್ನು ಕಂಗಾಲಾಗಿಸಿದೆ.

ಸೂಕ್ತ ಬೆಲೆಯೇ ಸಿಗ್ತಿಲ್ಲ: ‘ಕೊಯ್ಲು ಮುಗಿದಿದೆ. ರಾಶಿಯೂ ನಡೆದಿದೆ. ಆದರೆ ಭತ್ತಕ್ಕೆ ಮಾತ್ರ ಸೂಕ್ತ ಬೆಲೆಯೇ ಸಿಗದಾಗಿದೆ. ಮಧ್ಯವರ್ತಿಗಳು ₹ 1,300ರ ದರದಲ್ಲಿ ಖರೀದಿ ಮಾಡುತ್ತಿದ್ದಾರೆ. ವಿಧಿಯಿಲ್ಲದೇ ಮಾರಾಟ ಮಾಡಬೇಕಿದೆ. ಒಂದು ಎಕರೆಯಲ್ಲಿ ಭತ್ತದ ಕೃಷಿ ನಡೆಸಲು ಕನಿಷ್ಠ ₹ 25 ಸಾವಿರ ವೆಚ್ಚವಾಗಲಿದೆ. ಮಾಡಿದ ಖರ್ಚು ಕೈಗೆ ಮರಳದ ಪರಿಸ್ಥಿತಿಯಿದೆ’ ಎನ್ನುತ್ತಾರೆ ಕಂಚುಗಾರಕೊಪ್ಪಲಿನ ಭತ್ತದ ಬೆಳೆಗಾರ ಅರುಣ್‌.

‘ಖರೀದಿ ಕೇಂದ್ರದಲ್ಲಿ ಭತ್ತ ಖರೀದಿಸುವ ತನಕವೂ ಸಂಗ್ರಹಿಸಿಟ್ಟುಕೊಳ್ಳಲು ಗೋದಾಮಿನ ಸಮಸ್ಯೆ ಕಾಡುತ್ತದೆ. ನ.15ರಿಂದಲೇ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಿದರೆ, ಬೆಳೆಗಾರರಿಗೆ ಕೊಂಚವಾದರೂ ಅನುಕೂಲವಾಗಲಿದೆ. ಈಗಿನ ಪ್ರಕ್ರಿಯೆ ದಲ್ಲಾಳಿಗಳಿಗೆ ಮಾತ್ರ ಪೂರಕವಾದುದು. ಮಾರಿದ 15 ದಿನದೊಳಗೆ ರೈತರ ಖಾತೆಗೆ ಹಣ ಜಮೆಯಾಗುವುದಾದರೆ, ಬೆಳೆಗಾರರಿಗೆ ಸಹಕಾರಿಯಾಗಲಿದೆ’ ಎಂದು ಕೆ.ಆರ್.ನಗರದ ಎಚ್‌.ಸಿ.ಚೆಲುವರಾಜು ಹೇಳಿದರು.

‘ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿದರೆ ಕಾಸು ನೋಡಲು ಕನಿಷ್ಠ 3 ತಿಂಗಳು ಕಾಯಬೇಕು. ಬೆಳೆಗಾಗಿ ಸಾಲ ಮಾಡಿರುತ್ತೇವೆ. ಕೂಲಿ ಕೊಡಬೇಕಿರುತ್ತದೆ. ದಿನ ಕಳೆದಂತೆ ಹೊರೆ ಹೆಚ್ಚುವುದರಿಂದ, ವಿಧಿಯಿಲ್ಲದೆ ದಲ್ಲಾಳಿಗಳಿಗೆ ಕಣದಲ್ಲೇ ಮಾರುತ್ತೇವೆ’ ಎಂದು ಕೆ.ಎನ್.ನಟರಾಜು ತಿಳಿಸಿದರು.

ಶೀಘ್ರದಲ್ಲೇ ಭತ್ತ ಖರೀದಿಗೆ ಚಾಲನೆ

‘ಡಿ.22ರವರೆಗೂ ಜಿಲ್ಲೆಯಲ್ಲಿ 6,128 ರೈತರು ಭತ್ತ ಮಾರಾಟಕ್ಕಾಗಿ ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ನೋಂದಣಿ ಪ್ರಕ್ರಿಯೆ ಮುಂದುವರೆಯಲಿದೆ. ಶೀಘ್ರದಲ್ಲೇ ಭತ್ತ ಖರೀದಿ ಆರಂಭಿಸುತ್ತೇವೆ’ ಎಂದು ಸಹಕಾರ ಮಾರಾಟ ಮಂಡಲದ ಶಾಖಾ ವ್ಯವಸ್ಥಾಪಕ ನಾರಾಯಣಪ್ಪ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಒಂದು ಎಕರೆ ಭೂಮಿಯಿರುವ ರೈತರಿಂದ 25 ಕ್ವಿಂಟಲ್ ಭತ್ತ ಖರೀದಿಸುತ್ತೇವೆ. ಒಬ್ಬ ರೈತ ಗರಿಷ್ಠ 75 ಕ್ವಿಂಟಲ್ ಭತ್ತವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮಾರಾಟ ಮಾಡಬಹುದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT