ಗುರುವಾರ , ನವೆಂಬರ್ 26, 2020
22 °C
‘ದಸರಾ ಪ್ರಧಾನ ಕವಿಗೋಷ್ಠಿ’ಯಲ್ಲಿ ಜನಪದ ವಿದ್ವಾಂಸ ಪ್ರೊ.ಎಂ.ಕೃಷ್ಣೇಗೌಡ ಹೇಳಿಕೆ

ಬದಲಾಗುತ್ತಿರುವ ಸಾಹಿತ್ಯದ ಉದ್ದೇಶ: ಪ್ರೊ.ಎಂ.ಕೃಷ್ಣೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಸಾಹಿತ್ಯವು ಧರ್ಮ, ನೀತಿಯನ್ನು ಹೇಳುವ ಒಂದು ವಾಹಕವಾಗಿತ್ತು. ಆದರೆ ಇದೀಗ ಈ ಉದ್ದೇಶವೇ ಸಂಪೂರ್ಣ ಬದಲಾಗುತ್ತಿದೆ’ ಎಂದು ಜನಪದ ವಿದ್ವಾಂಸ ಪ್ರೊ.ಎಂ.ಕೃಷ್ಣೇಗೌಡ ಬೇಸರ ವ್ಯಕ್ತಪಡಿಸಿದರು.

ವಿಜಯನಗರದಲ್ಲಿನ ಕಸಾಪ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಶುಕ್ರವಾರವೂ ನಡೆಸಿದ ‘ದಸರಾ ಪ್ರಧಾನ ಕವಿಗೋಷ್ಠಿ’ ಉದ್ಘಾಟಿಸಿದ ಅವರು ಮಾತನಾಡಿ, ‘ಹೂವಿನ ಹಾರವಾಗಬೇಕಿದ್ದ ಕಾವ್ಯ ಖಡ್ಗವಾಗುತ್ತಿದೆ. ಸಿಂಹಾಸನ ಬದಲಿಸಬೇಕು. ಸರ್ಕಾರ, ರಾಜ್ಯವನ್ನು ಬದಲಾಯಿಸಬೇಕು ಎನ್ನುವುದು ಕಾವ್ಯದ ಆಸೆಯಾಗುತ್ತಿದೆ’ ಎಂದರು.

‘ಕೆಲವರಿಗಂತೂ ಕವಿತೆಯಿಂದ ಏನು ಬೇಕು ಎಂಬ ಬಗ್ಗೆ ಅವರಿಗೇನೇ ಸ್ಪಷ್ಟತೆ ಎಂಬುದೇ ಇಲ್ಲವಾಗಿದೆ. ಕಾವ್ಯವನ್ನು ಸಮಾಜ ಸುಧಾರಣೆಗಾಗಿ ಬರೆಯುತ್ತೇವಾ ಅಥವಾ ಆತ್ಮಸಂತೋಷಕ್ಕೆ ಬರೆಯುತ್ತೇವಾ ಎಂಬುದನ್ನು ಈ ನಿಟ್ಟಿನಲ್ಲಿ ಪ್ರಶ್ನಿಸಿಕೊಳ್ಳಬೇಕು’ ಎಂದು ಕೃಷ್ಣೇಗೌಡ ಚಾಟಿ ಬೀಸಿದರು.

‘ಜೋಗಿ ಸದಾ ಒಳಗೊಳಗೆ ಕುಣಿವ ಕೆಂಗರುವಿನ ಕಣ್ಣಲ್ಲಿ ನಿನ್ನ ಹೆಸರು, ತಾಯಿ ಮೊಲೆಯಲ್ಲಿ ಕರು ತುಟಿಯಿಟ್ಟು ಚೆಲ್ಲಿಸಿದ ಹಾಲಲ್ಲಿ ನಿನ್ನ ಹೆಸರು...’ ಹಾಡನ್ನು ಜನಪದ ಶೈಲಿಯಲ್ಲಿ ಕೃಷ್ಣೇಗೌಡ ಹಾಡಿದ ಪರಿಗೆ ನೆರೆದಿದ್ದವರಿಂದ ಕರತಾಡನದ ಮೆಚ್ಚುಗೆ ವ್ಯಕ್ತವಾಯಿತು.

ವಿದುಷಿ ಆರ್‌.ಸಿ.ರಾಜಲಕ್ಷ್ಮೀ ‘ನಾದ ವೈಭವ’ ಶೀರ್ಷಿಕೆಯಡಿ ಕವಿತೆ ಓದಿದರು.

ಮಾಜಿ ಶಾಸಕ ವಾಸು ಮಾತನಾಡಿ ‘ಪ್ರಸ್ತುತ ಪ್ರಾಮಾಣಿಕತೆಗೂ, ಭ್ರಷ್ಟಾಚಾರಕ್ಕೂ ಎಳೆಯಷ್ಟೇ ಅಂತರವಿದೆ. ಆ ಅಂತರದಲ್ಲಿ ಭ್ರಷ್ಟಾಚಾರ ನಿಗ್ರಹದಳ ಕುಳಿತಿದೆ. ಈ ಬಿರುಕನ್ನು ದೊಡ್ಡದು ಮಾಡುವ ನಿಟ್ಟಿನಲ್ಲಿ ಕವಿತೆಗಳು ಮೂಡಿ ಬರಬೇಕು. ಆರೋಗ್ಯಕರ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಉತ್ತಮ ವಿಷಯಗಳ ಚರ್ಚೆ ಆಗಬೇಕು’ ಎಂದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ವೈ.ಡಿ.ರಾಜಣ್ಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕವಯತ್ರಿ, ಪೊಲೀಸ್ ಅಧಿಕಾರಿ ಡಾ.ಧರಣಿದೇವಿ ಮಾಲಗತ್ತಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಕದಂಬ ರಂಗ ವೇದಿಕೆಯ ಅಧ್ಯಕ್ಷ ರಾಜಶೇಖರ ಕದಂಬ, ಮೂಗೂರು ನಂಜುಂಡಸ್ವಾಮಿ ಮತ್ತಿತರರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು