ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂತರಿಕ ಮೀಸಲಾತಿ ನೀಡಿ ಬದ್ಧತೆ ಪ್ರದರ್ಶಿಸಲಿ: ಪುಟ್ಟಸಿದ್ಧಶೆಟ್ಟಿ ಸವಾಲು

ಸ್ಥಳೀಯ ಸಂಸ್ಥೆ ಚುನಾವಣೆ: ಎಲ್ಲ ಪಕ್ಷಗಳಿಗೆ
Last Updated 11 ಮೇ 2022, 10:13 IST
ಅಕ್ಷರ ಗಾತ್ರ

ಮೈಸೂರು: ‘ಮೀಸಲಾತಿಗೆ ಕಾಯದೇ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್‌ ಹೇಳಿರುವುದು ಆಘಾತ ತಂದಿದೆ. ಆದರೆ, ರಾಜ್ಯದ ಎಲ್ಲ ಪಕ್ಷಗಳೂ ಹಿಂದುಳಿದ ವರ್ಗಗಳಿಗೆ ಆಂತರಿಕ ಮೀಸಲಾತಿ ನೀಡುವ ಬದ್ಧತೆಯನ್ನು ಪ್ರದರ್ಶಿಸಬೇಕು’ ಎಂದು ರಾಜ್ಯ ಕಾಯಕ ಸಮಾಜಗಳ ಒಕ್ಕೂಟಗಳ ಅಧ್ಯಕ್ಷ ಕೆ.ಸಿ.ಪುಟ್ಟಸಿದ್ದಶೆಟ್ಟಿ ಹೇಳಿದರು.

‘ಚುನಾವಣೆಯಲ್ಲಿ ಸಾಮಾನ್ಯ ವರ್ಗದವರಿಗೇ ಎಲ್ಲ ಪಕ್ಷಗಳು ಅವಕಾಶ ನೀಡಿದರೆ ಹಿಂದುಳಿದ ವರ್ಗಗಳಿಗಿರುವ ಶೇ 27 ಮೀಸಲಾತಿಯನ್ನು ಕಿತ್ತುಕೊಂಡಂತಾಗುತ್ತದೆ. ಹಿಂದುಳಿದ ಸಮುದಾಯದ ಬಗ್ಗೆ ಪಕ್ಷಗಳಿಗೆ ಕಾಳಜಿ ಇದ್ದರೆ ಆಂತರಿಕ ಮೀಸಲಾತಿ ನೀಡುತ್ತೇವೆಂದು ಘೋಷಿಸಲಿ’ ಎಂದು ಬುಧವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.

‘ಪ್ರವರ್ಗ 1, 2ರಲ್ಲಿ ಬರುವ 197 ಸಮುದಾಯಗಳಿಗೆ ವಿಧಾನಸಭೆ, ಲೋಕಸಭೆಯಲ್ಲಿ ಸೂಕ್ತ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ. ಮೀಸಲಾತಿ ಇಲ್ಲದೇ ಚುನಾವಣೆಯಾದರೆ ಅವರು ಸ್ಥಳೀಯ ಸಂಸ್ಥೆಗಳಿಂದಲೂ ದೂರವಾಗುತ್ತಾರೆ’ ಎಂದರು.

‘ಸರ್ಕಾರಗಳ ಉದಾಸೀನ ಧೋರಣೆಯಿಂದಾಗಿಯೇ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಹಂಚಿಕೆಯಾಗಲು ಮೂರುಹಂತದ ಪರಿಶೀಲನೆ ನಡೆದಿಲ್ಲ. ಹೀಗಾಗಿಯೇ ಸುಪ್ರೀಂ ಕೋರ್ಟ್‌ ಈ ನಿಲುವು ತಳೆದಿದೆ. 2010ರಲ್ಲೇ ಕೋರ್ಟ್‌ ಸೂಚನೆ ನೀಡಿದ್ದರೂ ಎಲ್ಲ ಸರ್ಕಾರಗಳು ನಿರ್ಲಕ್ಷ್ಯ ವಹಿಸಿದವು’ ಎಂದು ಕಿಡಿಕಾರಿದರು.

‘ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ಇದ್ದರೆ ಮೂರು ಹಂತದ ಪರಿಶೀಲನಾ ವರದಿಯನ್ನು ಕೋರ್ಟ್‌ಗೆ ಸಲ್ಲಿಸಬೇಕಿತ್ತು. ರಾಜಕೀಯ ಪಕ್ಷಗಳು ಹಿಂದುಳಿದ ಸಮುದಾಯಗಳ 2 ಕೋಟಿ ಜನರಿಗೆ ಅನ್ಯಾಯ ಮಾಡಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ವಾಮೀಜಿಗಳಲ್ಲೇ ಗೊಂದಲ: ‘ಲಿಂಗಾಯತ ಪಂಚಮಸಾಲಿ ಸಮುದಾಯವನ್ನು 2 ‘ಎ’ಗೆ ಸೇರಿಸಿ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೋರಾಟ ನಡೆಸಿದ್ದರೆ, ವಚನಾನಂದ ಸ್ವಾಮೀಜಿ ಅವರು ಮೀಸಲಾತಿ ಬಗ್ಗೆ ಆತುರ ಬೇಡ ಎಂದಿದ್ದಾರೆ. ಪಂಚಮಸಾಲಿ ಮಠಗಳಲ್ಲಿಯೇ ಗೊಂದಲವಿದೆ. ಮುಂದುವರಿದ ಸಮುದಾಯಗಳು ಹಿಂದುಳಿದವರ ಮೀಸಲಾತಿ ಕಿತ್ತುಕೊಳ್ಳಲು ನಾವು ಬಿಡುವುದಿಲ್ಲ’ ಎಂದು ಪುಟ್ಟಸಿದ್ದಶೆಟ್ಟಿ ಹೇಳಿದರು.

ಮೀಸಲಾತಿ ಕುರಿತು ಕಾಯಕ ಸಮುದಾಯಗಳಲ್ಲಿ ಅರಿವು ಮೂಡಿಸಲು ‘ಕಾಯಕ ಸಮಾಜದ ನಡಿಗೆ ಮನೆಮನೆ ಕಡೆಗೆ’ ಅಭಿಯಾನ ಹಮ್ಮಿಕೊಂಡಿದ್ದೇವೆ ಎಂದರು.

‘ಮೀಸಲಾತಿ ನುಂಗುತ್ತಿರುವ ನುಸುಳುಕೋರರು’: ‘ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ನೀಡಿ ಹಿಂದುಳಿದ ಶ್ರಮಿಕ ವರ್ಗಗಳ ಮೀಸಲಾತಿಯನ್ನು ನುಂಗುವ ನುಸುಳುಕೋರರ ಸಂಖ್ಯೆ ಹೆಚ್ಚಿದೆ. ಸರ್ಕಾರ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಪುಟ್ಟಸಿದ್ದಶೆಟ್ಟಿ ಆಗ್ರಹಿಸಿದರು.

‘ಲಿಂಗಾಯತ ಜಂಗಮರು ‘ಬೇಡ ಜಂಗಮ’, ಲಿಂಗಾಯಿತ ಬಣಜಿಗರು ‘ಬಣಜಿಗ’ ಸಮುದಾಯದ ಮೀಸಲಾತಿ ಪತ್ರ ಪಡೆಯುತ್ತಿದ್ದಾರೆ. ಕಾಡು ಕುರುಬರು, ಜೇನು ಕುರುಬರ ಮೂಲ ನೆಲೆ ಮೈಸೂರು. ಇಲ್ಲಿ 1859 ಕುಟುಂಬಗಳಿದ್ದರೆ, ಯಾದಗಿರಿಯಲ್ಲಿ 5,277 ಇವೆ. ನಕಲಿ ಜಾತಿ ಪ್ರಮಾಣ ಪತ್ರಗಳನ್ನು ಪ‍ಡೆಯಲಾಗುತ್ತಿದೆ ಎಂಬುದು ಇದರಿಂದ ಗೊತ್ತಾಗುತ್ತದೆ’ ಎಂದರು.

ಪದಾಧಿಕಾರಿಗಳಾದ ನಾಗೇಶ್‌, ಮಹದೇವ್‌ ಗಾಣಿಗ, ರಮೇಶ್‌, ಶ್ರೀನಿವಾಸಚಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT