ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರಿ ಗುಂಡಿಗೆ ಮಣ್ಣು– ಕಲ್ಲು ಭರ್ತಿ: ಅಕ್ರಮ ಗಣಿಗಾರಿಕೆ ಸ್ಥಗಿತ

ತಹಶೀಲ್ದಾರ್‌ ನೇತೃತ್ವದ ತಂಡ ದಾಳಿ
Last Updated 8 ಜೂನ್ 2019, 12:56 IST
ಅಕ್ಷರ ಗಾತ್ರ

ಹುಣಸೂರು: ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆದಿದ್ದ ತಾಲ್ಲೂಕಿನ ನೇರಳಕುಪ್ಪೆ ಪಂಚಾಯಿತಿ ಕಲ್ಲೂರಪ‍್ಪನಬೆಟ್ಟಕ್ಕೆ ಹೊಂದಿಕೊಂಡಿರುವ ಗೋಮಾಳಕ್ಕೆ ಶನಿವಾರ ತಹಶೀಲ್ದಾರ್ ಬಸವರಾಜ್ ನೇತೃತ್ವದ ತಂಡ ಶನಿವಾರ ದಾಳಿ ನಡೆಸಿ ಸ್ಥಗಿತಗೊಳಿಸಿತು.

ಪೊಲೀಸ್‌ ಮತ್ತು ಗಣಿ ಮತ್ತು ಭೂವಿಜ್ಞಾನಿಗಳ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಗಣಿ ನಡೆಸುತ್ತಿದ್ದ ಜಾಗವನ್ನು ಅಲ್ಲಿಯೇ ಲಭ್ಯವಿದ್ದ ಮಣ್ಣು ಮತ್ತು ಕಲ್ಲುಗಳಿಂದ ಕ್ವಾರಿಯನ್ನು ಭರ್ತಿ ಮಾಡಿಸಿದರು.

ಗಣಿಗಾರಿಕೆ ಹಿನ್ನೆಲೆ: ಕಲ್ಲೂರಪ್ಪನಬೆಟ್ಟ ದೇವಸ್ಥಾನದ ಜಾತ್ರೆ ಹಾಗೂ ಧಾರ್ಮಿಕ ಕಾರ್ಯಗಳಿಗೆ ಅನುಕೂಲವಾಗಲೆಂದು ಕಂದಾಯ ಇಲಾಖೆ ದೇವಸ್ಥಾನದ ಸಮಿತಿಗೆ 7 ಎಕರೆ ಗೋಮಾಳ ನೀಡಿತ್ತು. ಈ ಜಾಗದಲ್ಲಿ 10 ಕಡೆ, ಹತ್ತಾರು ವರ್ಷಗಳಿಂದ ಅಕ್ರಮ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿತ್ತು.

ಅಕ್ರಮ ಗಣಿಗಾರಿಕೆ ತಡೆಯಲು ತಾಲ್ಲೂಕು ಆಡಳಿತದ ನೇತೃತ್ವದಲ್ಲಿ 15 ದಿನದಲ್ಲಿ 5 ಬಾರಿ ದಾಳಿ ನಡೆಸಿ 2 ಟ್ರಾಕ್ಟರ್‌ ಸೇರಿದಂತೆ ಕಲ್ಲು ಒಡೆಯಲು ಬಳಸುವ ಪರಿಕರವನ್ನು ವಶಕ್ಕೆ ಪಡೆಯಲಾಗಿದೆ. ಟ್ರಾಕ್ಟರ್‌ ಮಾಲೀಕರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ.

ಕಲ್ಲಿನ ಕೋರೆ ಪ್ರದೇಶದಲ್ಲಿ ಮಣ್ಣು ಭರ್ತಿ ಮಾಡಲು ಕ್ರಮ ಜರುಗಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ತಹಶೀಲ್ದಾರ್ ಬಸವರಾಜ್‌, ‘ಈ ಸ್ಥಳದಲ್ಲಿ ಕಳೆದ 10ಕ್ಕೂ ಹೆಚ್ಚು ವರ್ಷಗಳಿಂದ ಕಲ್ಲು ಗಣಿಗಾರಿಕೆ ನಡೆದಿದ್ದು, ಈ ಸಂಬಂಧ ತಾಲ್ಲೂಕು ಆಡಳಿತದ ಗಮನಕ್ಕೆ ಮಾಧ್ಯಮದವರು ತಂದಿದ್ದರಿಂದ ಕಲ್ಲು ಗಣಿಗಾರಿಕೆ ನಡೆಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಹಕಾರಿ ಆಗಿದೆ ಎಂದರು.

ಸೂಕ್ಷ್ಮ ಪ್ರದೇಶ: ಕಲ್ಲೂರಪ್ಪನ ಬೆಟ್ಟ ನಾಗರಹೊಳೆ ಅರಣ್ಯಕ್ಕೆ ಹೊಂದಿಕೊಂಡಿದ್ದು, ಸೂಕ್ಷ್ಮ ಪ್ರದೇಶಕ್ಕೆ ಸೇರಿದೆ. ಗಣಿಗಾರಿಕೆ ನಡೆಯುತ್ತಿದ್ದ ಸ್ಥಳ ಅರಣ್ಯ ಇಲಾಖೆಯ ಬಫರ್‌ ಜೋನ್ ಅಡಿ ಬರಲಿದ್ದು, ಕೆಲ ಕಾನೂನು ತೊಡಕಿನಿಂದಾಗಿ ಈ ಪ್ರದೇಶ ಅರಣ್ಯ ಇಲಾಖೆಗೆ ಹಸ್ತಾಂತರವಾಗಿಲ್ಲ ಎಂದು ಹೇಳಿದರು.

ಈ ಪ್ರದೇಶದಲ್ಲಿ ಸ್ಫೋಟಕ ವಸ್ತು ಬಳಸಿ ಕಲ್ಲು ಸಿಡಿಸುವುದರಿಂದ ಅರಣ್ಯ ಜೀವಿಗಳಿಗೆ ತೊಂದರೆ ಆಗುತ್ತಿದೆ. ಈ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಧಿಕಾರಿಯವರ ಅನುಮತಿ ಮೇಲೆ ದಾಳಿ ನಡೆಸಿ ಅಕ್ರಮ ಗಣಿಗಾರಿಕೆ ಸ್ಥಗಿತಗೊಳಿಸಿ ಮಣ್ಣು ಭರ್ತಿ ಮಾಡುವ ಕ್ರಮವಹಿಸಲಾಗಿದೆ ಎಂದರು.

ದೇವಸ್ಥಾನಕ್ಕೆ ನೀಡಿದ್ದ ಜಾಗದಲ್ಲಿ ಕಳೆದ 10 ವರ್ಷದಿಂದ ಕಲ್ಲು ಗಣಿಗಾರಿಕೆ ನಡೆದಿದ್ದರೂ ಇಲಾಖೆ ಗಮನಕ್ಕೆ ಸಮಿತಿ ಸದಸ್ಯರು ತಂದಿಲ್ಲ. ಹೀಗಾಗಿ ಇಲಾಖೆ ಸಮಿತಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ನಡೆಸಲಿದೆ ಎಂದು ಪ್ರಶ್ನೆಯೊಂದಕ್ಕೆ ತಿಳಿಸಿದರು.

ದಾಳಿಯಲ್ಲಿ ಹುಣಸೂರು ಗ್ರಾಮಾಂತರ ಠಾಣೆ ಪಿಎಸ್ಐ ಶಿವಪ್ರಕಾಶ್‌, ಕಂದಾಯ ನಿರೀಕ್ಷಕ ರಾಜಕುಮಾರ್‌, ಗ್ರಾಮಲೆಕ್ಕಿಗ ಮಹದೇವ್‌ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

ಬೆಟ್ಟದಲ್ಲಿ ಸಸಿ ನೆಡಲು ಸಿದ್ಧತೆ
ಕಲ್ಲೂರಪ್ಪನ ಬೆಟ್ಟಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಅರಣ್ಯ ಇಲಾಖೆ ವತಿಯಿಂದ ಸಸಿ ನೆಟ್ಟು ಸಾಮಾಜಿಕ ಅರಣ್ಯ ನಿರ್ಮಿಸುವ ಕ್ರಮಕ್ಕೆ ಕಂದಾಯ ಇಲಾಖೆ ಮುಂದಾಗಿದೆ. ಈ ಮುಂಗಾರಿನಲ್ಲೇ ಸಸಿ ನೆಟ್ಟು ಸಾಮಾಜಿಕ ಅರಣ್ಯ ಇಲಾಖೆಗೆ ಈ ಪ್ರದೇಶ ಹಸ್ತಾಂತರಿಸಲು ಕ್ರಮ ವಹಿಸಲಾಗುವುದು ಎಂದರು.

***
ಕಲ್ಲು ಗಣಿ ಸ್ಥಗಿತಗೊಳಿಸಿದ ಬಳಿಕ ರಾಜಕೀಯ ಒತ್ತಡ ಎದುರಾಗಿದ್ದರೂ ಪ್ರಕೃತಿಗೆ ಹಾನಿ ಉಂಟು ಮಾಡುತ್ತಿದ್ದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ.
-ಬಸವರಾಜ್, ತಹಶೀಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT