ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಪ್ರೇರಿತ ದಾಳಿ: ಧ್ರುವನಾರಾಯಣ ಆರೋಪ

ತನಿಖಾ ಸಂಸ್ಥೆಗಳ ದುರ್ಬಳಕೆ
Last Updated 11 ಅಕ್ಟೋಬರ್ 2019, 10:10 IST
ಅಕ್ಷರ ಗಾತ್ರ

ಮೈಸೂರು: ಡಾ.ಜಿ.ಪರಮೇಶ್ವರ್ ಮತ್ತು ಆರ್.ಎಲ್.ಜಾಲಪ್ಪ ಅವರ ಒಡೆತನದ ಶಿಕ್ಷಣ ಟ್ರಸ್ಟ್‌ಗಳ ಮೇಲೆ ಆದಾಯ ತೆರಿಗೆ ಇಲಾಖೆ ನಡೆಸಿರುವ ದಾಳಿ ಸೇಡಿನ ರಾಜಕಾರಣದ ಭಾಗ ಎಂದು ಕಾಂಗ್ರೆಸ್‌ ಮುಖಂಡ ಆರ್.ಧ್ರುವನಾರಾಯಣ ಆರೋಪಿಸಿದರು.

ಕೇಂದ್ರ ಸರ್ಕಾರವು ತನ್ನ ಅಧೀನದಲ್ಲಿರುವ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಪ್ರತಿಪಕ್ಷಗಳನ್ನು ರಾಜಕೀಯವಾಗಿ ಮುಗಿಸಲು ಹುನ್ನಾರ ನಡೆಸಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಐಟಿ ದಾಳಿ ಮೂಲಕ ಭಯದ ವಾತಾವರಣ ಸೃಷ್ಟಿಸಿ ವಿರೋಧಪಕ್ಷಗಳ ನಾಯಕರನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಷಡ್ಯಂತ್ರ ನಡೆದಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

‘ಆಪರೇಷನ್ ಕಮಲ’ದ ವೇಳೆ ಕಪ್ಪು ಹಣ ವಹಿವಾಟು ದೊಡ್ಡಮಟ್ಟಿನಲ್ಲಿ ನಡೆದಿದೆ. ಇದು ಐಟಿ ಅಧಿಕಾರಿಗಳ ಕಣ್ಣಿಗೆ ಬಿದ್ದಿಲ್ಲವೇ. ಬಿಜೆಪಿ ಮುಖಂಡ ಗಾಲಿ ಜನಾರ್ದನ ರೆಡ್ಡಿ ತಮ್ಮ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಿದಾಗ ಈ ಅಧಿಕಾರಿಗಳೆಲ್ಲ ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದರು.

ಇಂತಹ ರಾಜಕೀಯಪ್ರೇರಿತ ದಾಳಿ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ದೇಶದ ವಿವಿಧೆಡೆ ವಿರೋಧ ಪಕ್ಷಗಳನ್ನು ಗುರಿಯಾಗಿಸಿ ದಾಳಿಗಳು ನಡೆಯುತ್ತಿವೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ವೇಳೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಮನೆ ದಾಳಿ ನಡೆದಿದೆ. ತನಿಖಾ ಸಂಸ್ಥೆಗಳು ಮಮತಾ ಬ್ಯಾನರ್ಜಿ, ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರನ್ನೂ ಬಿಟ್ಟಿಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯ ಸರ್ಕಾರದ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷದ ನಾಯಕರನ್ನು ದಮನ ಮಾಡುವ ಕೆಲಸ ಮಾಡಿದ್ದರು. ಇದೀಗ ಪ್ರಧಾನಿಯಾದ ಬಳಿಕ ಆ ಷಡ್ಯಂತ್ರವನ್ನು ಇಡೀ ದೇಶಕ್ಕೆ ವಿಸ್ತರಿಸಿದ್ದಾರೆ ಎಂದು ದೂರಿದರು.

ಸ್ವಾತಂತ್ರ್ಯ ಮೊಟಕು: ಬಿಜೆಪಿ ಸರ್ಕಾರವು ಸದನದ ಕಲಾಪಗಳ ಪ್ರಸಾರಕ್ಕೆ ನಿರ್ಬಂಧ ವಿಧಿಸುವ ಮೂಲಕ ಮಾಧ್ಯಮ ಸ್ವಾತಂತ್ರ್ಯ ಮೊಟಕುಗೊಳಿಸುವ ಕೆಲಸ ಮಾಡಿದೆ ಎಂದು ಟೀಕಿಸಿದರು.

ಮೋದಿ ಅವರು ಐದೂವರೆ ವರ್ಷಗಳಲ್ಲಿ ಒಂದೇ ಒಂದು ಸುದ್ದಿಗೋಷ್ಠಿ ನಡೆಸಿಲ್ಲ. ದೇಶದಲ್ಲಿ ಪ್ರಸಕ್ತ ನಡೆಯುತ್ತಿರುವ ವಿದ್ಯಮಾನಗಳನ್ನು ಮಾಧ್ಯಮದ ಮೂಲಕ ಜನರೊಂದಿಗೆ ಹಂಚಿಕೊಳ್ಳಲು ಪ್ರಧಾನಿ ಹಿಂದೇಟು ಹಾಕುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್‌, ಎಚ್‌.ಎ.ವೆಂಕಟೇಶ್‌ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT