ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1ರಿಂದ ರಾಗಿ ಖರೀದಿ ಆರಂಭ

ಜಿಲ್ಲೆಯ 12 ಖರೀದಿ ಕೇಂದ್ರಗಳಲ್ಲಿ ಕಾರ್ಯಾಚರಣೆ
Last Updated 29 ಡಿಸೆಂಬರ್ 2018, 14:59 IST
ಅಕ್ಷರ ಗಾತ್ರ

ಮೈಸೂರು: ರಾಗಿ ಬೆಳೆಗೆ ಸರ್ಕಾರವು ₹ 2,897 ಕನಿಷ್ಠ ಬೆಂಬಲ ಬೆಲೆ ನಿಗದಿಗೊಳಿಸಿದ್ದು, ಜಿಲ್ಲೆಯಲ್ಲಿ ಜ. 1 ರಿಂದ ಮಾರ್ಚ್ 31ರವರೆಗೆ ರೈತರಿಂದ ರಾಗಿ ಖರೀದಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಎಂ.ಶಿವಣ್ಣ ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು 30,989 ಹೆಕ್ಟೇರ್‌ ಪ್ರದೇಶದಲ್ಲಿ 70,369 ಮೆಟ್ರಿಕ್‌ ಟನ್‌ ರಾಗಿ ಉತ್ಪಾದನೆಯಾಗಿದೆ. ರೈತರಿಗೆ ನ್ಯಾಯಯುತವಾದ ಬೆಲೆ ಸಿಗಬೇಕು ಎಂಬ ಉದ್ದೇಶದಿಂದ ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ರೈತರು ಇದಕ್ಕಾಗಿ ತಮ್ಮ ಆಧಾರ್‌ ಕಾರ್ಡ್‌, ಪಹಣಿ ಪತ್ರ, ಇತ್ತೀಚಿಗೆ ರಾಷ್ಟ್ರೀಕೃತ, ಬ್ಯಾಂಕ್‌ನಲ್ಲಿ ತೆರೆದ ಬ್ಯಾಂಕ್ ಖಾತೆ ಸಂಖ್ಯೆ, ಫೋಟೋ ಮತ್ತು ಐಎಫ್‌ಎಸ್‌ಸಿ ಕೋಡ್ ಹೊಂದಿರುವ ಪಾಸ್ ಬುಕ್‌ನ ಪ್ರತಿ, ಮೊಬೈಲ್ ಸಂಖ್ಯೆಯೊಂದಿಗೆ ದಾಖಲೆಗಳನ್ನು ನೀಡಿ ಇದೇ ಕೇಂದ್ರಗಳಲ್ಲಿ ಆನ್‌ಲೈನ್ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಕಾರ್ಯವು ಜ. 1ರಿಂದ 15ರವರೆಗೆ ನಡೆಯಲಿದೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗುಣಮಟ್ಟದ ರಾಗಿಯನ್ನು ಸ್ವೀಕರಿಸಲಾಗುವುದು. ಅನ್ಯವಸ್ತುಗಳು ಶೇ 1, ಇತರೆ ಆಹಾರ ಧಾನ್ಯಗಳು ಶೇ 1, ವಿರೂಪಗೊಂಡ ಧಾನ್ಯಗಳು ಶೇ 1, ಸ್ವಲ್ಪವಿರೂಪಗೊಂಡ ಧಾನ್ಯಗಳು ಶೇ 2 ಮತ್ತು ಶೇ 12ರೊಳಗೆ ತೇವಾಂಶ ಇರುವ ರಾಗಿಯನ್ನುಖರೀದಿ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ನೋಂದಾಯಿಸಿಕೊಂಡ ರೈತರು ತಾವು ರಾಗಿ ಸರಬರಾಜು ಮಾಡುವ ದಿನಾಂಕದ ಬಗ್ಗೆ ಖರೀದಿ ಕೇಂದ್ರದಿಂದ ಸರಬರಾಜು ಚೀಟಿಯನ್ನು ನಮೂನೆ- 3ರಲ್ಲಿ ಪಡೆದು, ನಿಗದಿತ ದಿನಾಂಕದಂದು ತಮ್ಮ ಸ್ವಂತ ಖರ್ಚಿನಲ್ಲಿ ಸರಬರಾಜು ಮಾಡಬೇಕು. ರೈತರಿಂದ ಖರೀದಿಸುವ ರಾಗಿಯ ಸರಕಿನ ಮೌಲ್ಯವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ತಿಳಿಸಿದರು.

ನೋಂದಣಿ ವೇಳೆಯಲ್ಲಿ ರೈತರು ತಹಶೀಲ್ದಾರ್ ಅಥವಾ ಅವರಿಂದ ಅಧಿಕೃತರಾದ ಅಧಿಕಾರಿಯಿಂದ ನಮೂನೆ- 1ರಲ್ಲಿ ಬೆಳೆ ದೃಢೀಕರಣ ಪತ್ರ ಹಾಜರುಪಡಿಸಬೇಕು ಎಂದು ಮಾಹಿತಿ ನೀಡಿದರು.

ಎಲ್ಲೆಲ್ಲಿ ಖರೀದಿ ಕೇಂದ್ರ?

ಮೈಸೂರು ಬಂಡಿಪಾಳ್ಯದ ಎಪಿಎಂಸಿ ಯಾರ್ಡ್

ನಂಜನಗೂಡು ಬಿಳಿಗೆರೆ ಖರೀದಿ ಕೇಂದ್ರ, ಎಪಿಎಂಸಿ ಯಾರ್ಡ್

ತಿ.ನರಸೀಪುರ ತಿ.ನರಸೀಪುರ, ಬನ್ನೂರು ಎಪಿಎಂಸಿ ಯಾರ್ಡ್

ಹುಣಸೂರು ಹುಣಸೂರು, ರತ್ನಪುರಿ ಎಪಿಎಂಸಿ ಯಾರ್ಡ್

ಕೆ.ಆರ್.ನಗರ ಎಪಿಎಂಸಿ ಯಾರ್ಡ್, ಚುಂಚನಕಟ್ಟೆಯ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ

ಎಚ್.ಡಿ.ಕೋಟೆ ಸರಗೂರು ಎಪಿಎಂಸಿ ಯಾರ್ಡ್

ಪಿರಿಯಾಪಟ್ಟಣ ಪಿರಿಯಾಪಟ್ಟಣ, ಬೆಟ್ಟದಪುರ ಎಪಿಎಂಸಿ ಯಾರ್ಡ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT