ಬುಧವಾರ, ಸೆಪ್ಟೆಂಬರ್ 18, 2019
26 °C
ಸಿಎಫ್‌ಟಿಆರ್‌ಐ ನಿರ್ದೇಶಕ ಡಾ.ಕೆಎಸ್‌ಎಂಎಸ್‌ ರಾಘವರಾವ್ ಅಭಿಮತ

ಪಾಠ ಹೇಳುವುದು ಅತಿ ಶ್ರೇಷ್ಠ ವೃತ್ತಿ

Published:
Updated:
Prajavani

ಮೈಸೂರು: ಪಾಠ ಹೇಳುವುದು ವಿಶ್ವದ ಅತಿ ಶ್ರೇಷ್ಠ ವೃತ್ತಿ ಎಂದು ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಕೆಎಸ್‌ಎಂಎಸ್‌ ರಾಘವರಾವ್ ತಿಳಿಸಿದರು.

ಇಲ್ಲಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ನಡೆದ 59ನೇ ಎನ್‌ಸಿಇಆರ್‌ಟಿ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ದೇಶದ ಭವಿಷ್ಯದ ತಲೆಮಾರಿನ ಸಂಸ್ಕೃತಿಯನ್ನು ರೂಪಿಸುವ ಗುರುತರವಾದ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಇವರು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಬಿತ್ತುವ ಬೀಜಗಳು ಮುಂದೆ ಫಲ ಕೊಡುತ್ತವೆ. ಅವುಗಳನ್ನು ಸಮಾಜ ಸ್ವೀಕರಿಸಬೇಕಾಗುತ್ತದೆ. ಹಾಗಾಗಿ, ಶಿಕ್ಷಕ ವೃತ್ತಿ ಕೇವಲ ಶ್ರೇಷ್ಠವಾದ ವೃತ್ತಿ ಮಾತ್ರವಲ್ಲ ಉನ್ನತವಾದ ವೃತ್ತಿಯೂ ಹೌದು ಎಂದರು.

ವಿದ್ಯಾರ್ಥಿಗಳು ಶಿಕ್ಷಕರ ಮಹತ್ವ ಅರಿತು ಅವರಿಗೆ ಗೌರವ ಕೊಡಬೇಕು. ಇವರು ತಮ್ಮ ಮುಂದಿನ ಭವಿಷ್ಯವನ್ನು ನಿರ್ಧರಿಸುವವರು ಎಂಬುದನ್ನು ಮನಗಾಣಬೇಕು ಎಂದು ತಿಳಿ ಹೇಳಿದರು.

‘ವಾರಂಗಲ್‌ನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಬೋಧನಾ ವೃತ್ತಿಯ ಮೂಲಕ ವೃತ್ತಿ ಬದುಕನ್ನು ಪ್ರವೇಶಿಸಿದೆ. ಸಿಎಫ್‌ಟಿಆರ್‌ಐಗೆ ಬಂದ ಮೇಲೂ ನಾನು ಬೋಧನಾ ಪ್ರವೃತ್ತಿಯನ್ನೇ ಮುಂದುವರಿಸಿದೆ. ನನಗೆ ಈ ವೃತ್ತಿ ಕೊಟ್ಟಷ್ಟು ತೃಪ್ತಿಯನ್ನು ಮತ್ತಾವ ವೃತ್ತಿಯೂ ಕೊಟ್ಟಿಲ್ಲ’ ಎಂದರು.

ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ವೈ.ಶ್ರೀಕಾಂತ್ ಮಾತನಾಡಿ, ‘ಸಂಸ್ಥೆಯು ಶಿಕ್ಷಕರ ಬೋಧನಾ ಕೌಶಲದ ಉನ್ನತಿಗೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಇದರ ಶ್ರೇಯಸ್ಸು ಎಸ್‌.ಎಲ್‌.ಭೈರಪ್ಪ ಅವರಂತಹ ಸಾಹಿತಿಗಳಿಗೆ ಸಲ್ಲಬೇಕು’ ಎಂದು ಹೇಳಿದರು.

ಸಂಸ್ಥೆಯ ಡೀನ್‌ ಸಿ.ಜಿ.ವೆಂಕಟೇಶ್‌ಮುರ್ತಿ, ಪ್ರಾಧ್ಯಾಪಕ ಗೋಪಾಲ್, ವಿಜ್ಞಾನ ವಿಭಾಗದ ಮುಖ್ಯಸ್ಥ ಹರಿನಾಥ್, ಶಿಕ್ಷಣ ವಿಭಾಗದ ಮಂಜುಳಾ ಪಿ.ರಾವ್ ಇದ್ದರು.

Post Comments (+)