ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಧಾನ್ಯ ‘ರಾಗಿ’ ಬೆಳೆಯತ್ತ ರೈತರ ಚಿತ್ತ

ರೋಗ ನಿರೋಧಕ ಶಕ್ತಿ ಹೊಂದಿರುವ ತಳಿ ಬೆಳೆಯಲು ರೈತರ ಆಸಕ್ತಿ, ರಾಗಿಗೆ ಹೆಚ್ಚಿದ ಬೇಡಿಕೆ
Last Updated 9 ನವೆಂಬರ್ 2019, 10:21 IST
ಅಕ್ಷರ ಗಾತ್ರ

ಹುಣಸೂರು: ಬಡವರ, ಶ್ರಮಿಕರ ಆಹಾರ ಧಾನ್ಯವಾದ ‘ರಾಗಿ’ ಈಗ ಬಹುಜನರ ಪ್ರಿಯವಾದ ಧಾನ್ಯ. ರಾಗಿಯಿಂದ ತಯಾರಿಸುವ ಆಹಾರ ಪದಾರ್ಥಗಳು ಆರೋಗ್ಯಕರವಾದವು. ಇದೇ ಕಾರಣಕ್ಕೆ ರಾಗಿಗೆ ಬೇಡಿಕೆ ಹೆಚ್ಚುತ್ತಿದೆ.

ರಾಗಿ ಬೆಲೆಯೂ ಹೆಚ್ಚುತ್ತಿದ್ದು, ರಾಗಿ ಬೆಳೆಯಲು ರೈತರು ಆಸಕ್ತಿ ತೋರುತ್ತಿದ್ದಾರೆ. ರೋಗ ನಿರೋಧಕ ಶಕ್ತಿ ಹೊಂದಿರುವ ತಳಿಗಳನ್ನು ರೈತರಿಗೆ ತಲುಪಿಸುವ ಕೆಲಸವನ್ನು ಕೃಷಿ ಇಲಾಖೆ ಕೈಗೊಂಡಿದೆ.

ರಾಗಿಯು ದಕ್ಷಿಣ ಕರ್ನಾಟಕದ ಬಯಲು ಸೀಮೆಯ ಮಳೆಯಾಶ್ರಿತ ಬೆಳೆ. ಅರೆ ಮಲೆನಾಡು ಹುಣಸೂರು ಭಾಗದಲ್ಲಿ ಬಹುತೇಕ ರೈತರು ಮುಂಗಾರು, ಹಿಂಗಾರು ಮಳೆ ಮತ್ತು ಚಳಿಗಾಲದ ಆಶ್ರಯದಲ್ಲಿ ರಾಗಿ ಬೇಸಾಯ ಮಾಡುತ್ತಿದ್ದಾರೆ.

ರಾಗಿ ಬೇಸಾಯದಲ್ಲಿ ಕ್ರಾಂತಿಕಾರ ಬದಲಾವಣೆ ತರುವ ನಿಟ್ಟಿನಲ್ಲಿ ಕೃಷಿ ಸಂಶೋಧನಾ ವಿಭಾಗವು ಕೆಲಸ ಮಾಡುತ್ತಿದೆ. ಬೆಂಕಿ ರೋಗ, ಕುತ್ತಿಗೆ, ತೆನೆ ರೋಗಗಳಿಗೆ ತುತ್ತಾಗದ ತಳಿಯನ್ನು ಪ್ರಯೋಗಾಲಯದಲ್ಲಿ ಬೆಳೆಸಿದ್ದು, ರೈತರಿಗೆ ಈ ತಳಿಗಳನ್ನು ವಿತರಿಸಲು ಮುಂದಾಗಿದೆ.

ರೈತರು ಎಂಎಲ್‌ 365, ಎಂಆರ್‌ 1, ಎಂಆರ್‌ 6, ಎಲ್‌ 5 ಮತ್ತು ಜೆಪಿಯು 28 ತಳಿಗಳನ್ನು ಬೆಳೆಯುತ್ತಿದ್ದಾರೆ.

ತಾಲ್ಲೂಕಿನ ರಂಗಯ್ಯನ ಕೊಪ್ಪಲು ಗ್ರಾಮದ ‘ಪ್ರಗತಿಪರ ರೈತ ಮಹಿಳೆ ಪ್ರಶಸ್ತಿ ಪುರಸ್ಕೃತ’ರಾದ ಮಂಗಳಗೌರಿ ಅವರು 2011ರಿಂದ ವಿವಿಧ ತಳಿಗಳನ್ನು ಬೆಳೆಯುತ್ತಿದ್ದಾರೆ. ಈ ತಳಿಗಳಿಗೆ ವಿವಿಧ ರೋಗಗಳು ತಗುಲುತ್ತಿದ್ದವು. ರೋಗ ನಿವಾರಣೆಗಾಗಿ ಕೆಲ ಔಷಧಗಳನ್ನು ಸಿಂಪಡಿಸುತ್ತಿದ್ದರು. ಪ್ರಸಕ್ತ ಸಾಲಿನಲ್ಲಿ ಕೃಷಿ ಇಲಾಖೆ ಮತ್ತು ಮಹೇಂದ್ರ ಕಂಪನಿ ಅಭಿವೃದ್ಧಿ ಪಡಿಸಿರುವ ಎಂ.ಆರ್‌ 365 ತಳಿಯನ್ನು ಒಂದು ಎಕರೆ ಪ್ರದೇಶದಲ್ಲಿ ಬೆಳೆದಿದ್ದು, ಬೆಳೆ ಹುಲುಸಾಗಿ ಬಂದಿದೆ. ರೋಗಭೀತಿ ದೂರವಾಗಿದೆ.

ಭೂಮಿ ಹದ: ರಾಗಿ ಬೇಸಾಯಕ್ಕೆ ಅಚ್ಚುಕಟ್ಟು ಮಾಡಿಕೊಂಡು ಮಳೆ ಆರಂಭವಾಗುತ್ತಿದ್ದಂತೆ ಎರಚು ಪದ್ಧತಿ ಅಥವಾ ಪೈರು ನಾಟಿ ಪದ್ಧತಿಯಲ್ಲಿ ಸಾಲು ಹೊಡೆದು ನಾಟಿ ಮಾಡುತ್ತಾರೆ. ಫಸಲು ಬೆಳೆದಂತೆ ಎರಡು ಬಾರಿ ಕುಂಟೆ ಹೊಡೆದು ಕಳೆ ನಾಶ ಮಾಡುವುದರಿಂದ ಇಳುವರಿ ಹೆಚ್ಚಾಗಿ ಪಡೆಯಲು ಸಾಧ್ಯವಾಗಲಿದೆ.

7 ಸಾವಿರ ಹೆಕ್ಟೇರ್‌ನಲ್ಲಿ ರಾಗಿ

ಹುಣಸೂರು ವಾತಾವರಣಕ್ಕೆ ಬಹುತೇಕ ರೈತರು ಎಂ.ಎಲ್‌ 365, ಎಂ.ಆರ್‌ 1 ಎಂ.ಆರ್‌ 6, ಎಲ್‌ 5 ತಳಿ, ಜಿ.ಪಿ.ಯು 28 ಮತ್ತ ಇಂಡಾಫ್ 07 ಎಂಬ ತಳಿಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿದೆ. ಇವು ಎಲ್ಲಾ ವಾತಾವರಣದಲ್ಲೂ ಬೆಳೆಯುವ ಶಕ್ತಿ ಹೊಂದಿವೆ ಎಂದು ಕೃಷಿ ಸಹಾಯಕ ನಿರ್ದೇಶಕ ರಂಗಸ್ವಾಮಿ ತಿಳಿಸಿದರು.

ತಾಲ್ಲೂಕಿನಲ್ಲಿ ಮುಂಗಾರು ಮಳೆಗೆ 6 ಸಾವಿರದಿಂದ 7 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ, ಹಿಂಗಾರು ಮಳೆಗೆ 2,300 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯ ಲಾಗಿದೆ. ಚಳಿಗಾಲದಲ್ಲಿ ಅಲ್ಪ ಪ್ರಮಾಣದಲ್ಲಿ ರಾಗಿ ಬೆಳೆಯುತ್ತಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT