ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈತ್ರಿ ಬಲ ಹೆಚ್ಚಿಸಿದ ರಾಹುಲ್‌ ಪ್ರಚಾರ

ಪರಿವರ್ತನಾ ಸಮಾವೇಶ: ಕಾಂಗ್ರೆಸ್‌–ಜೆಡಿಎಸ್‌ ಶಕ್ತಿ ಪ್ರದರ್ಶನ
Last Updated 3 ಮೇ 2019, 18:08 IST
ಅಕ್ಷರ ಗಾತ್ರ

ಮೈಸೂರು: ಮತದಾನಕ್ಕೆ ಕೇವಲ ನಾಲ್ಕು ದಿನ ಬಾಕಿ ಉಳಿದಿರುವಂತೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅಬ್ಬರದ ಪ್ರಚಾರದ ಮೂಲಕ ಅಖಾಡವನ್ನು ಮತ್ತಷ್ಟು ರಂಗೇರಿಸಿದರು. ಈ ಕ್ಷೇತ್ರದ ಮೈತ್ರಿ ಅಭ್ಯರ್ಥಿಗೆ ಬಲ ತುಂಬಿದರು.

ಕೆ.ಆರ್‌.ನಗರದ ಜೂನಿಯರ್‌ ಕಾಲೇಜು ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಸಮಾವೇಶದಲ್ಲಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದರು. ರಾಹುಲ್‌ ಅವರಿಗೆ ಸಿದ್ದರಾಮಯ್ಯ, ಎಚ್‌.ಡಿ.ದೇವೇಗೌಡ ಸಾಥ್‌ ನೀಡಿದರು.

ತಮ್ಮ ಭಾಷಣದುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಿಚಾಯಿಸುತ್ತಲೇ ಸಾಗಿದರು. ಮೈತ್ರಿ ಸರ್ಕಾರದ ಸಾಲಮನ್ನಾ ವಿಚಾರವನ್ನು ಪದೇಪದೇ ಪ್ರಸ್ತಾಪಿಸಿದರು. ಭಿನ್ನಾಭಿಪ್ರಾಯ ಬದಿಗಿಟ್ಟು ಮುಖಂಡರು ಒಗ್ಗಟ್ಟಾಗಿ ಮಂಡ್ಯ, ಮೈಸೂರು, ಚಾಮರಾಜನಗರ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಕಿವಿಮಾತು ಹೇಳಿದರು.

‘ಕೇಂದ್ರದಲ್ಲಿ 22 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಆ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಪಂಚಾಯಿತಿಗಳಲ್ಲಿ 10 ಲಕ್ಷ ಹುದ್ದೆ ಕಲ್ಪಿಸಲಾಗುವುದು’ ಎಂದು ರಾಹುಲ್‌ ಘೋಷಿಸಿದರು.

‘ಕನಿಷ್ಠ ಆದಾಯ ಯೋಜನೆ (ನ್ಯಾಯ್‌) ಜಾರಿ ಮೂಲಕ ಬಡತನ ನೀಗಿಸಲಾಗುವುದು. ಇದೊಂದು ಬಡತನದ ಮೇಲಿನ ಸರ್ಜಿಕಲ್‌ ಸ್ಟ್ರೈಕ್‌. ಇದರಿಂದ ದೇಶದ ಅರ್ಥ ವ್ಯವಸ್ಥೆ ಸುಧಾರಿಸುವುದರ ಜೊತೆಗೆ ಕೋಟ್ಯಂತರ ಯುವಕರಿಗೆ ಉದ್ಯೋಗ ಸಿಗಲಿದೆ’ ಎಂದರು.

‘₹15 ಲಕ್ಷ ಹಣವನ್ನು ಖಾತೆಗೆ ಹಾಕುವುದಾಗಿ ಮೋದಿ ಸುಳ್ಳು ಹೇಳಿದರು. ಆದರೆ, ನಾನು ಸುಳ್ಳು ಹೇಳುವುದಿಲ್ಲ. ಬದಲಾಗಿ ಐದು ವರ್ಷಗಳಲ್ಲಿ ಪ್ರತಿ ಬಡ ಕುಟುಂಬದ ಖಾತೆಗೆ ₹ 3.60 ಲಕ್ಷ ಹಣ ಹಾಕುತ್ತೇವೆ’ ಎಂದು ಭರವಸೆ ನೀಡಿದರು.

‘ದೇಶದ ಸ್ವಘೋಷಿತ ಚೌಕಿದಾರನು ರೈತರು, ನಿರುದ್ಯೋಗಿಗಳ ಮನೆ ಮುಂದೆ ಹೋಗಲಿಲ್ಲ. ಬದಲಾಗಿ ಉದ್ಯಮಿಗಳು, ಶ್ರೀಮಂತರನ್ನು ಅಪ್ಪಿಕೊಂಡರು. ಒಬ್ಬ ಚೌಕಿದಾರ ದೇಶದ ಎಲ್ಲಾ ಚೌಕಿದಾರರನ್ನು ಹಾಳು ಮಾಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ರೈತರ ಬೆಳೆ ವಿಮೆ ಹಣವನ್ನು ಅನಿಲ್‌ ಅಂಬಾನಿ ಸೇರಿದಂತೆ ದೊಡ್ಡ ದೊಡ್ಡ ಉದ್ಯಮಿಗಳಿಗೆ ಕಳಿಸಿಕೊಟ್ಟರು. ಶ್ರೀಮಂತರನ್ನು ಉದ್ಧಾರ ಮಾಡಿದರು. ಉದ್ಯಮಿಗಳು ಕೋಟ್ಯಂತರ ಸಾಲ ಮಾಡಿ ದೇಶ ಬಿಟ್ಟು ಓಡಿ ಹೋದರು. ಆದರೆ, ಸಾಲ ಮರುಪಾವತಿಸದ ರೈತರ ಮೇಲೆ ಕ್ರಿಮಿನಲ್‌ ಮೊಕದ್ದಮೆ ಹಾಕಿ ಜೈಲಿಗೆ ಕಳಿಸಿದರು’ ಎಂದು ಟೀಕಿಸಿದರು.

‘ನಾವು ಈ ಬಾರಿ ಅಧಿಕಾರಕ್ಕೆ ಬಂದರೆ ಪ್ರತ್ಯೇಕವಾಗಿ ರೈತರ ಬಜೆಟ್‌ ಮಂಡಿಸಲಾಗುವುದು. ಮೊದಲೇ ಬೆಂಬಲ ಬೆಲೆ ಘೋಷಿಸಲಾಗುವುದು, ಮೊದಲೇ ಪರಿಹಾರ ಘೋಷಣೆ ಮಾಡಲಾಗುವುದು, ಎಲ್ಲೆಲ್ಲಿ ಆಹಾರ ಸಂಸ್ಕಾರ ಘಟಕ, ಉಗ್ರಾಣ ತೆರೆಯಲಾಗುವುದು ಎಂಬುದನ್ನು ಘೋಷಿಸುತ್ತೇವೆ. ರೈತರು ಸಾಲ ಮರುಪಾವತಿ ಮಾಡದಿದ್ದರೆ ನಾವು ಕ್ರಿಮಿನಲ್‌ ಪ್ರಕರಣ ದಾಖಲಿಸುವುದಿಲ್ಲ’ ಎಂದು ಭರವಸೆ ನೀಡಿದರು.

‘ಮೋದಿ ಜಾರಿ ಮಾಡಿರುವ ಗಬ್ಬರ್‌ ಸಿಂಗ್‌ ತೆರಿಗೆ (ಜಿಎಸ್‌ಟಿ), ನೋಟು ರದ್ಧತಿಯಿಂದ ದೇಶದ ಆರ್ಥಿಕ ವ್ಯವಸ್ಥೆ ಕುಸಿದು ಹೋಗಿದೆ. ವ್ಯಾಪಾರ ನಷ್ಟವಾದವರಿಗೆ, ಉದ್ಯೋಗ ಕಳೆದುಕೊಂಡವರಿಗೆ ನ್ಯಾಯ್‌ ವ್ಯವಸ್ಥೆ ಮೂಲಕ ನ್ಯಾಯ ಕೊಡಿಸಲಾಗುವುದು’ ಎಂದರು. ಜಿಎಸ್‌ಟಿ ಸ್ವರೂಪದಲ್ಲಿ ಬದಲಾವಣೆ ಮಾಡಲಾಗುವುದು. ಏಕರೂಪದ, ಸರಳ ತೆರಿಗೆ ವ್ಯವಸ್ಥೆ ಜಾರಿ ಮಾಡಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT