ವರ್ಷದ ಮೊದಲ ಮಳೆಗೆ ತಂಪಾದ ಇಳೆ

7
ಮಣ್ಣಿನಿಂದ ಹೊಮ್ಮಿದ ಸುವಾಸನೆ, ಆರ್ಭಟಿಸಿದ ಗುಡುಗು, ಸಿಡಿಲುಗಳು

ವರ್ಷದ ಮೊದಲ ಮಳೆಗೆ ತಂಪಾದ ಇಳೆ

Published:
Updated:
Prajavani

ಮೈಸೂರು: ಜಿಲ್ಲೆಯಲ್ಲಿ ಭಾನುವಾರ ವರ್ಷದ ಮೊದಲ ಮಳೆ ಗುಡುಗು, ಸಿಡಿಲುಗಳಿಂದ ಆರ್ಭಟಿಸುತ ಸುರಿಯಿತು. ಕಳೆದ ಕೆಲವು ದಿನಗಳಿಂದ ವಾತಾವರಣದಲ್ಲಿ ಏರಿಕೆಯಾಗಿದ್ದ ಉಷ್ಣಾಂಶವು ಹದವಾದ ಮಳೆಗೆ ತಂಪಾಯಿತು.

ನಾಗರಹೊಳೆ ಹುಲಿ ರಕ್ಷಿತಾರಣ್ಯದ ಕೆಲವು ಭಾಗಗಳಲ್ಲಿ ಮಳೆ ಸುರಿದಿರುವುದು ಕಾಳ್ಗಿಚ್ಚಿನ ಭೀತಿಯನ್ನು ದೂರ ಮಾಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬಿದ್ದಿರುವ ಮಳೆಯು ರೈತರಲ್ಲಿ ಹರ್ಷ ತರಿಸಿದೆ.

ಮುಂಗಾರುಪೂರ್ವದ ಮಳೆಯ ಆರ್ಭಟ ತುಸು ಜೋರಾಗಿಯೇ ಇತ್ತು. ಗುಡುಗು, ಮಿಂಚುಗಳ ಜತೆಗೆ ಆರ್ಭಟಿಸಿದ ಸಿಡಿಲುಗಳಿಂದ ಮಕ್ಕಳು ಬೆದರಿದರು. ರಸ್ತೆಯಲ್ಲಿ ಮಣ್ಣಿನ ಸುವಾಸನೆ ಮೂಗಿಗೆ ಅಡರಿ ಹೃನ್ಮಸುಗಳನ್ನು ಪುಳಕಗೊಳಿಸಿತು.

ಸದ್ಯ ಬಿದ್ದಿರುವ ಮಳೆಯು ಬತ್ತಿರುವ ಸಣ್ಣ ಹಳ್ಳಗಳಲ್ಲಿ ಒಂದಿಷ್ಟು ನೀರು ಸೇರುವಂತೆ ಮಾಡಿದೆ. ಕೆಲವೆಡೆ ಬತ್ತುತ್ತಿರುವ ಕೆರೆಗಳಿಗೆ ಜೀವ ಒದಗಿಸಿದೆ. ದನಕರುಗಳಿಗೆ ಮೇವಿನ ಸಮಸ್ಯೆ ನೀಗಿಸಿದೆ.

ಮತ್ತೆ ಇದೇ ರೀತಿ ಒಂದೆರಡು ದಿನಗಳವರೆಗೆ ಮಳೆ ಮುಂದುವರಿದರೆ ಬರದ ಬೇಗೆ ನಿಜಕ್ಕೂ ಪರಿಹಾರವಾಗಲಿದೆ ಎಂದು ರೈತರು ಹೇಳಿದ್ದಾರೆ.‌

ಕೆಲವೆಡೆ ಹಾನಿ:

ಕಾಳಿದಾಸರಸ್ತೆಯಲ್ಲಿ ತೆಂಗಿನಮರವೊಂದಕ್ಕೆ ಸಿಡಿಲು ಬಡಿದು ಹೊತ್ತಿ ಉರಿಯಿತು. ಅಗ್ನಿಶಾಮಕಪಡೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ನಂದಿಸಿದರು. ಅಗ್ರಹಾರದ ಶಂಕರಮಠದ ಬಳಿ ದೊಡ್ಡಮಾವಿನಮರ ಉರುಳಿ ಬಿದ್ದಿದ್ದರಿಂದ ವಿದ್ಯುತ್ ಪೂರೈಕೆ ಅಸ್ತವ್ಯಸ್ತಗೊಂಡಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !