ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಲದ ಅನಾಹುತ: ಬೇಕಿದೆ ಸಿದ್ಧತೆ

ಮಳೆನೀರು ಕಾಲುವೆ, ಚರಂಡಿಗಳ ಸ್ವಚ್ಛತೆಗೆ ಒತ್ತು ನೀಡಲಿ
Last Updated 23 ಜೂನ್ 2019, 20:10 IST
ಅಕ್ಷರ ಗಾತ್ರ

ರಾಜ್ಯಕ್ಕೆ ಮುಂಗಾರು ಪ್ರವೇಶವಾಗಿದ್ದು, ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಜನರು ನಿಟ್ಟುಸಿರು ಬಿಡುವಂತಾಗಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಕೆಲ ದಿನಗಳಿಂದ ಆಗಾಗ್ಗೆ ಮಳೆ ಬೀಳುತ್ತಿದೆ. ಮಳೆಗಾಲದ ಸಂದರ್ಭದಲ್ಲಿ ಉಂಟಾಗುವ ಅನಾಹುತಗಳನ್ನು ಎದುರಿಸಲು ಸಿದ್ಧತೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿದೆ. ಮಳೆನೀರು ಕಾಲುವೆ, ಚರಂಡಿ ಹಾಗೂ ಒಳಚರಂಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಇಲ್ಲದಿದ್ದರೆ ತಗ್ಗು ಪ್ರದೇಶಗಳ ಮನೆಗಳಿಗೆ ಮಳೆ ನೀರು ನುಗ್ಗುವ ಸಾಧ್ಯತೆ ಇದೆ. ಒಳಚರಂಡಿ ವ್ಯವಸ್ಥೆಗೂ ಧಕ್ಕೆ ಬರಲಿದೆ.

ನಗರದಲ್ಲಿ 127 ಕಿ.ಮೀ. ಉದ್ದ ಮಳೆನೀರು ಕಾಲುವೆ, 57 ಕಿ.ಮೀ ಉದ್ದದ ಉಪ ಕಾಲುವೆಗಳಿವೆ. ಈ ಕಾಲುವೆಗಳಲ್ಲಿ ಹೂಳು ತುಂಬಿಕೊಂಡಿದ್ದು, ಗಿಡಗಂಟಿಗಳು ಬೆಳೆದಿವೆ. ಕಸವೂ ಸೇರಿಕೊಂಡಿದೆ. ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯದೇ ತೊಂದರೆ ಉಂಟಾಗುವುದರಿಂದ ಎಚ್ಚೆತ್ತಿರುವ ಮಹಾನಗರ ಪಾಲಿಕೆಯು 33 ಕಿ.ಮೀ.ವರೆಗೆ ರಾಜಕಾಲುವೆಗಳಲ್ಲಿ ಹೂಳು ತೆಗೆಸಿದೆ. ಇದಕ್ಕಾಗಿ ಸುಮಾರು ₹ 80 ಕೋಟಿ ವೆಚ್ಚ ಮಾಡಿದೆ.

ಮಳೆಗಾಲದಲ್ಲಿ ಯಾವುದೇ ಅನಾಹುತ ಆಗದಂತೆ ನೋಡಿಕೊಳ್ಳಲು ಮೇಯರ್ ಪುಷ್ಪಲತಾ ಜಗನ್ನಾಥ್ ಹಾಗೂ ಆಯುಕ್ತರಾದ ಶಿಲ್ಪಾ ನಾಗ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಸೂಪರಿಂಟೆಂಡೆಂಟ್ ಎಂಜಿನಿಯರ್ (ಮಳೆನೀರು ಕಾಲುವೆ, ಒಳಚರಂಡಿ) ಜೆ.ಮಹೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಮಳೆ ಅನಾಹುತ ಉಂಟಾದಾಗ ಜನರ ರಕ್ಷಣೆಗೆ ಧಾವಿಸಲು ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದೊಂದು ಜಾಗೃತಿ ದಳವನ್ನು ರಚಿಸಲಾಗಿದೆ. ಈ ದಳದಲ್ಲಿ 17 ಸಿಬ್ಬಂದಿ ಇರುತ್ತಾರೆ. ಹಿಟಾಚಿ, ಜೆಸಿಬಿ, ಜಟ್ಟಿಂಗ್ ಯಂತ್ರಗಳನ್ನೂ ಒದಗಿಸಲಾಗಿದೆ. ಅಭಯ ತಂಡದ ಸಹಯೋಗದಲ್ಲಿ ರಕ್ಷಣಾ ಕಾರ್ಯ ಕೈಗೊಳ್ಳುತ್ತಾರೆ. ಮರ, ವಿದ್ಯುತ್ ಕಂಬ ಬಿದ್ದರೆ, ಮ್ಯಾನ್ ಹೋಲ್ ಗಳು ಕಟ್ಟಿಕೊಂಡರೆ, ಕೊಳಚೆ ನೀರು ಉಕ್ಕಿ ಹರಿಯುತ್ತಿದ್ದರೆ ಜಾಗೃತಿ ದಳದ ಗಮನಕ್ಕೆ ತರಬಹುದು. ಈ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸುತ್ತಾರೆ ಎಂದು ಹೇಳಿದರು.

ನಗರದ ಹೃದಯ ಭಾಗದಲ್ಲಿ ಒಳಚರಂಡಿ ವ್ಯವಸ್ಥೆ ಅಷ್ಟಾಗಿ ಹದಗೆಟ್ಟಿಲ್ಲ. ಕೆಲ ತಗ್ಗು ಪ್ರದೇಶಗಳು ಹಾಗೂ ಜನವಾಸ ಹೆಚ್ಚಾಗಿರುವ ಪ್ರದೇಶಗಳಲ್ಲಿ ಒತ್ತಡ ಹೆಚ್ಚಾಗಿ ಮ್ಯಾನ್‌ಹೋಲ್ ಗಳಲ್ಲಿ ಕೊಳಚೆ ನೀರು ಉಕ್ಕಿ ಹರಿಯುವುದು ಸಾಮಾನ್ಯ. ಕೆಲವೆಡೆ ಕಸ-ಕಡ್ಡಿ, ಮಣ್ಣು ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ಸೇರಿಕೊಳ್ಳುವುದರಿಂದ ಕೊಳಚೆ ನೀರು ಸರಾಗವಾಗಿ ಹರಿದು ಹೋಗುವುದಿಲ್ಲ. ಇದರಿಂದ ಕೊಳಚೆ ನೀರು ಉಕ್ಕಿ ಹರಿಯುತ್ತದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಅಭಿವೃದ್ಧಿ ಪಡಿಸಿದ ಕೆಲ ಬಡಾವಣೆಗಳು ಇನ್ನೂ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟಿಲ್ಲ. ಇಂತಹ ಬಡಾವಣೆಗಳಲ್ಲಿ ಒಳಚರಂಡಿ ವ್ಯವಸ್ಥೆ ಇದ್ದರೂ ಆ ನೀರು ಬೇರೆಡೆ ಹರಿದು ಹೋಗಲು ಸಂಪರ್ಕ ಕಲ್ಪಿಸಿಲ್ಲ. ಇದರಿಂದ ಆ ಭಾಗದ ಸ್ಥಳೀಯರಿಗೆ ತೊಂದರೆ ಉಂಟಾಗುತ್ತಿದೆ.

ಎನ್.ಆರ್. ಮೊಹಲ್ಲಾದ ಅನೇಕ ಕಡೆಗಳಲ್ಲಿ ಒಳಚರಂಡಿ ಸಮಸ್ಯೆ ಇದೆ. ಈ ಭಾಗದಲ್ಲಿರುವ ಮ್ಯಾನ್‌ಹೋಲ್ ಗಳಲ್ಲಿ ಆಗಾಗ್ಗೆ ಕೊಳಚೆ ನೀರು ಉಕ್ಕಿ ಹರಿಯುತ್ತದೆ. ತ್ಯಾಜ್ಯ ನೀರಿನ ದುರ್ವಾಸನೆಯಿಂದಾಗಿ ಆ ಭಾಗದ ನಿವಾಸಿಗಳು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ.

ಬೋಗಾದಿಯ ಬಾಪೂಜಿ ನಗರದ 5ನೇ ಹಂತ, ರೈಲ್ವೆ ಬಡಾವಣೆಯ ಮ್ಯಾನ್‌‌ಹೋಲ್ ಗಳಲ್ಲಿ ಕೊಳಚೆ ನೀರು ಹರಿದು ಉಪಕಾಲುವೆಗಳಿಗೆ ಹೋಗುತ್ತಿದೆ. ಇದರಿಂದ ಕೊಳಚೆ ನೀರು ಮಳೆನೀರಿನೊಂದಿಗೆ ಬೆರೆತು ಕಲುಷಿತಗೊಳ್ಳುತ್ತಿದೆ. ಅಲ್ಲದೆ, ಈ ನೀರು ಕೆಟ್ಟ ವಾಸನೆ ಬೀರುತ್ತಿರುವುದರಿಂದ ಸ್ಥಳೀಯ ನಿವಾಸಿಗಳು ವಾಸ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.

ಚರಂಡಿಗಳನ್ನು ಆವರಿಸಿದ ಗಿಡಗಂಟಿಗಳು
ಹೊರ ವರ್ತುಲ ರಸ್ತೆಯ ಅಕ್ಕಪಕ್ಕದ ಬಡಾವಣೆಗಳಲ್ಲಿರುವ ಚರಂಡಿಗಳನ್ನು ಸ್ವಚ್ಛಗೊಳಿಸಿಲ್ಲ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಗಿಡಗಳು ಬೆಳೆದುಕೊಂಡಿವೆ. ಚರಂಡಿ ಹಾಗೂ ಉಪಕಾಲುವೆಗಳು ಇರುವ ಕುರುಹು ಸಹ ಕಾಣದಂತೆ ಈ ಗಿಡಗಳು ಆವರಿಸಿವೆ. ದಟ್ಟಗಳ್ಳಿ 3ನೇ ಹಂತದ ಜಿ.ಜಿ.ಬಡಾವಣೆ, ಬೋಗಾದಿಯ ರಾಜರಾಜೇಶ್ವರಿನಗರ, ನಿಸರ್ಗ ಬಡಾವಣೆ, ಕೇರ್ಗಳ್ಳಿಯ ನ್ಯಾಯಾಂಗ ಬಡಾವಣೆ, ಐಶ್ವರ್ಯ ಬಡಾವಣೆ, ರೈಲ್ವೆ ಬಡಾವಣೆ, ಬಾಪೂಜಿ ನಗರ, ನಿವೇದಿತಾ ನಗರ ಸೇರಿದಂತೆ ಅನೇಕ ಕಡೆಗಳಲ್ಲಿ ಈ ಸಮಸ್ಯೆ ಇದೆ. ಇಂತಹ ಚರಂಡಿಗಳನ್ನು ಕೂಡಲೇ ಸ್ವಚ್ಛಗೊಳಿಸಬೇಕಿದೆ.

38 ಬಡಾವಣೆಗಳ ಸೇರ್ಪಡೆ
ಮುಡಾ ಅಭಿವೃದ್ಧಿ ಪಡಿಸಿರುವ ಸುಮಾರು 38 ಬಡಾವಣೆಗಳನ್ನು ಮಹಾನಗರ ಪಾಲಿಕೆಗೆ ಕಳೆದ ಒಂದು ವರ್ಷದಲ್ಲಿ ಹಸ್ತಾಂತರಿಸಿದೆ. ಈ ಬಡಾವಣೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ, ಒಳಚರಂಡಿ, ವಿದ್ಯುತ್ ಕಂಬ ಅಳವಡಿಕೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು. ಶೇ 80ರಷ್ಟು ಮನೆಗಳ ನಿರ್ಮಾಣವಾಗಿರಬೇಕು. ಈ ಎಲ್ಲವನ್ನೂ ಗಮನಿಸಿಯೇ ಪಾಲಿಕೆಯು ತಮ್ಮ ವ್ಯಾಪ್ತಿಗೆ ಸೇರಿಸಿಕೊಳ್ಳುತ್ತದೆ. ಆನಂತರ ಆ ಬಡಾವಣೆಗಳ ನಿರ್ವಹಣೆ ಮಾಡುತ್ತದೆ ಎಂದು ಜೆ.ಮಹೇಶ್ ತಿಳಿಸಿದರು.

**
ಚರಂಡಿಗಳಲ್ಲಿ ಗಿಡಗಳು ಬೆಳೆದಿರುವುದರಿಂದ ಮಳೆ ನೀರಿನ ಹರಿವಿಗೆ ತೊಡಕಾಗಿದೆ. ಈ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು.
-ಶ್ರೀನಿವಾಸ್, ನಿಸರ್ಗ ಬಡಾವಣೆ

ರಮಾಬಾಯಿ ನಗರದ ಆಶ್ರಯ ಮನೆಗಳಿಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಿಲ್ಲ. ಶೌಚಾಲಯಗಳಿಗೆ ಪಿಟ್ ಮಾಡಿಕೊಳ್ಳಲಾಗಿದೆ. ಚರಂಡಿ ನೀರು ಬಡಾವಣೆಯ ತಗ್ಗು ಪ್ರದೇಶಗಳಲ್ಲಿ ನಿಲ್ಲುತ್ತಿದೆ.
-ರವಿಕುಮಾರ್, ರಮಾಬಾಯಿನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT