ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನಲ್ಲಿ ಅಬ್ಬರಿಸಿದ ವರುಣ: ಹಲವೆಡೆ ಮನೆಗಳು ಕುಸಿತ, ಸಂಚಾರ ಅಸ್ತವ್ಯಸ್ತ

Last Updated 7 ಆಗಸ್ಟ್ 2019, 19:36 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯಾದ್ಯಂತ ಬುಧವಾರವೂ ಬಿರುಸಿನ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಒಂದೇ ದಿನ 120 ಮಿ.ಮೀನಷ್ಟು ಮಳೆಯಾಗಿದೆ.

ಎಚ್.ಡಿ.ಕೋಟೆ, ಹುಣಸೂರು ಹಾಗೂ ಪಿರಿಯಾಪಟ್ಟಣ ತಾಲ್ಲೂಕುಗಳಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಹುಣಸೂರು ತಾಲ್ಲೂಕಿನ ಹನಗೋಡು ಹೋಬಳಿಯಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಗುರುವಾರವೂ ರಜೆ ನೀಡಲಾಗಿದೆ. ಇನ್ನುಳಿದ ಕಡೆ ಪರಿಸ್ಥಿತಿ ಅವಲೋಕಿಸಿ ರಜೆ ನೀಡುವ ಅಧಿಕಾರವನ್ನು ಆಯಾ ತಾಲ್ಲೂಕುಗಳ ತಹಶೀಲ್ದಾರ್‌ಗಳಿಗೆ ಜಿಲ್ಲಾಧಿಕಾರಿ ನೀಡಿದ್ದಾರೆ.

ಎಚ್.ಡಿ.ಕೋಟೆ ತಾಲ್ಲೂಕಿನ ಮಗ್ಗೆ ಗ್ರಾಮದಲ್ಲಿ 4, ಸೊಗ್ಗೆಹಳ್ಳಿ, ನೇರಳೆ, ಬಿದರಹಳ್ಳಿ, ಚಾಮಲಾಪುರ, ನೆಂದನಹಳ್ಳಿ ಗ್ರಾಮಗಳಲ್ಲಿ ತಲಾ ಒಂದೊಂದು ಮನೆಗಳು ಕುಸಿದಿವೆ.

ಪಿರಿಯಾಪಟ್ಟಣದ ಚಿನಕಲ್‌ಕಾವಲು, ಚಪ್ಪರಹಳ್ಳಿ, ಕೂರ್ಗಲ್, ವಡ್ಡಹಳ್ಳಿ, ನೀಲಂಗಲ, ಹರಿನಹಳ್ಳಿ ಗ್ರಾಮಗಳಲ್ಲಿ ಮನೆಗಳು ಜಖಂಗೊಂಡಿವೆ. ಕೆ.ಆರ್.ನಗರ ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ 3, ಮಿರ್ಲೆ ಹೋಬಳಿಯಲ್ಲಿ 1 ಮನೆ ಭಾಗಶಃ ಹಾನಿಗೀಡಾಗಿವೆ.

ಹುಣಸೂರಿನ ಹನಗೋಡು, ಮದಗನೂರು, ಕುರುಬರ ಹೊಸಹಳ್ಳಿ ಗ್ರಾಮಗಳಲ್ಲೂ ಮನೆಗಳು ನೆಲಕಚ್ಚಿವೆ. ಮೈಸೂರು ತಾಲ್ಲೂಕಿನ ಜಯಪುರ ಹೋಬಳಿಯ ಸೋಲಿಗರ ಕಾಲೊನಿಯಲ್ಲಿ ಮನೆಯೊಂದು ಬಿದ್ದಿದೆ.

ಹುಣಸೂರು ವರದಿ:ತಾಲ್ಲೂಕಿನಲ್ಲಿ ಮಳೆಯಿಂದ 12 ಮನೆಗಳು ಕುಸಿದಿವೆ. ಹನಗೋಡು ಹಾಗೂ ಬಿಳಿಕೆರೆ ಭಾಗದಲ್ಲಿ ತಗ್ಗು ಪ್ರದೇಶದ ಕೃಷಿ ಭೂಮಿಗೆ ನೀರು ನುಗ್ಗಿ ಶುಂಠಿ ಮತ್ತು ತಂಬಾಕು ಫಸಲು ನಷ್ಟವಾಗಿದೆ.

ತಾಲ್ಲೂಕಿನಲ್ಲಿ ಆಗಸ್ಟ್ 4ರಿಂದ 7ರವರಗೆ ಒಟ್ಟು 72.16 ಮಿ.ಮೀ ಮಳೆ ಸುರಿದಿದೆ ಎಂದು ಕೇಂದ್ರ ತಂಬಾಕು ಸಂಶೋಧನಾ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ತಾಲ್ಲೂಕಿನ ನೇರಳಕುಪ್ಪೆ ಹಾಡಿ ಗ್ರಾಮದ ನಿವಾಸಿ ಸಣ್ಣ, ಕಚುವಿನಹಳ್ಳಿಯ ಶಿವಣ್ಣೇಗೌಡ, ಬಲ್ಲೇನಹಳ್ಳಿಯ ರಾಜಯ್ಯ ಅವರಿಗೆ ಸೇರಿದ ಮನೆಗಳು ಕುಸಿದಿದೆ. ‌‌

ಕೃಷಿಕ ಶಿವಕುಮಾರ್ ಮಾತನಾಡಿ, ‘ಶುಂಠಿ ಬೇಸಾಯಕ್ಕೆ ಈವರಗೆ ₹ 2 ಲಕ್ಷ ವೆಚ್ಚ ಮಾಡಿದ್ದು, ಉತ್ತಮವಾಗಿ ಫಸಲು ಬಂದಿತ್ತು, ಮಳೆಯಿಂದಾಗಿ ನೀರು ಶುಂಠಿ ಹೊಲಕ್ಕೆ ನುಗ್ಗಿ ನಷ್ಟವಾಗಿದೆ’ ಎಂದು ತಿಳಿಸಿದರು.

ಹೊಗೆಸೊಪ್ಪು ಬೆಳೆಗಾರ ರಾಮೇಗೌಡ ಪ್ರತಿಕ್ರಿಯಿಸಿ, ‘ಹೊಗೆಸೊಪ್ಪು ಬೆಳೆಯಲು ಆರಂಭದಲ್ಲಿ ಮಳೆ ಇಲ್ಲದೆ ಸಮಸ್ಯೆ ಎದುರಿಸಿದೆವು. ಈಗ ಕಟಾವು ಹಂತಕ್ಕೆ ಬಂದಿದ್ದು, ಮಳೆಯಿಂದಾಗಿ ಹೊಲದಲ್ಲಿ ನೀರು ನಿಂತು ತಂಬಾಕು ಹಳದಿ ಬಣ್ಣಕ್ಕೆ ತಿರುಗಿ ನಷ್ಟವಾಗಿದೆ’ ಎಂದರು.

ಬಿಳಿಕೆರೆ ಹೋಬಳಿ ಮಾರನಹಳ್ಳಿ ಗ್ರಾಮದಲ್ಲಿ ಮರವೊಂದು ವಿದ್ಯುತ್ ತಂತಿ ಮೇಲೆ ಉರುಳಿದ್ದು, ಮಗುವೊಂದು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದೆ ಎಂದು ಗ್ರಾಮದ ಪಾಪಣ್ಣ ತಿಳಿಸಿದರು. ತಹಶೀಲ್ದಾರ್ ಬಸವರಾಜ್ ಹಾನಿಗೊಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹನಗೋಡು ವರದಿ:ಹನಗೋಡು ಭಾಗದಲ್ಲಿ 5 ಮನೆಗಳ ಗೋಡೆಗಳಿಗೆ ಹಾನಿಯಾಗಿದೆ. ಲಕ್ಷ್ಮಣತೀರ್ಥ ನದಿಯಲ್ಲಿ ಪ್ರವಾಹ ಹೆಚ್ಚುತ್ತಲೇ ಇದ್ದು ಸಾಕಷ್ಟು ಕೃಷಿ ಭೂಮಿ ಮುಳುಗಡೆಯಾಗಿದೆ.

ಬಹುತೇಕ ಶುಂಠಿ ಬೆಳೆ ನೀರಿನಲ್ಲಿ ಮುಳುಗಿದ್ದು, ಕೊಳೆಯುವ ಭೀತಿಯುಂಟಾಗಿದೆ. ಮಳೆ ಹೀಗೆ ಮುಂದುವರೆದಲ್ಲಿ ನದಿಯ ಪ್ರವಾಹ ಹೆಚ್ಚಾಗಿ ಹನಗೋಡು ಅಣೆಕಟ್ಟೆ ಹಿನ್ನೀರು ಬೆಳೆಗಳನ್ನು ಆವರಿಸುವ ಸಂಭವವಿದ್ದು, ರೈತರು ಆತಂಕಗೊಂಡಿದ್ದಾರೆ. ಲಕ್ಷ್ಮಣತೀರ್ಥ ನದಿಯ ಪ್ರವಾಹದ ನೀರಿನಲ್ಲಿ ಜಾನುವಾರುವೊಂದು ಕೊಚ್ಚಿಕೊಂಡು ಹೋಗಿದೆ.

ಹಂಪಾಪುರ ವರದಿ:ಹಂಪಾಪುರ ಹೋಬಳಿಯಲ್ಲಿ ಕಳೆದೆರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಜನಜೀವನ ಭಾಗಶಃ ಅಸ್ತವ್ಯಸ್ತವಾಗಿದೆ. ಕೆರೆ ಕಟ್ಟೆಗಳು ತುಂಬುತ್ತಿವೆ. ಬೆಳೆಗಾರರು ಹತ್ತಿ ಹೂ ಉದುರುವ ಭೀತಿಯಲ್ಲಿದ್ದಾರೆ. ಜತೆಗೆ, ತಂಬಾಕಿನ ಎಲೆ ಕೊಳೆಯುವ ಚಿಂತೆಯೂ ಸೇರಿದೆ.

ಪಿರಿಯಾಪಟ್ಟಣ ವರದಿ :ತಾಲೂಕಿನಲ್ಲಿ ಮಂಗಳವಾರ ರಾತ್ರಿ ಮಳೆಯ ಆರ್ಭಟ ಜೋರಾಗಿತ್ತು. ಕೆಲವು ರಸ್ತೆಯಲ್ಲಿ ನೀರು ತುಂಬಿದ್ದರಿಂದ ವಾಹನ ಸಂಚಾರರು ಪರದಾಡಿದರು. ತಾಲ್ಲೂಕಿನ ಹಲವೆಡೆ ರಸ್ತೆಗಳು ಗುಂಡಿ ಬಿದ್ದಿರುವುದರಿಂದ ಸಂಚಾರ ದುಸ್ತರವಾಯಿತು. ಪಟ್ಟಣದ ಬಸ್‌ನಿಲ್ದಾಣದ ಆವರಣವು ಜೋರು ಮಳೆಯಿಂದಾಗಿ ನೀರು ನಿಂತು ಕೆರೆಯಂತಾಗಿ ಪಾದಚಾರಿಗಳು ಓಡಾಡಲು ಕಷ್ಟವಾಯಿತು. ಬಸ್ ನಿಲ್ದಾಣದ ಮುಖ್ಯದ್ವಾರದ ಬಳಿ ದೊಡ್ಡ ಗುಂಡಿ ನಿರ್ಮಾಣವಾಗಿದ್ದು ಬಸ್‍ ಚಾಲಕರು ಪರದಾಡುವಂತಾಯಿತು.

ನಂಜನಗೂಡು ವರದಿ:ತಾಲ್ಲೂಕಿನ ಹೆಡತಲೆ ಗ್ರಾಮದಲ್ಲಿ ಮಳೆಗೆ ಬುಧವಾರ ಗ್ರಾಮದ ಸಣ್ಣಮಾದಮ್ಮ ಅವರಿಗೆ ಸೇರಿದ ಮನೆ ಸಂಪೂರ್ಣವಾಗಿ ಕುಸಿದಿದೆ. ಇವರು ಮತ್ತು ಇವರ ಪುತ್ರಿ ಲಕ್ಷ್ಮಿ ಮನೆಯಿಂದ ಹೊರಗೆ ಓಡಿ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಾಲ್ಲೂಕಿನ ಹುಸ್ಕೂರಿನಲ್ಲಿ 2, ಮಲ್ಕುಂಡಿ ಹಾಗೂ ಮರಳೂರು ಗ್ರಾಮದಲ್ಲಿ ತಲಾ ಒಂದೊಂದು ಮನೆಗಳು ಕುಸಿದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT