ಶುಕ್ರವಾರ, ನವೆಂಬರ್ 15, 2019
22 °C
ರೈತರ ಮೊಗದಲ್ಲಿ ಮಂದಹಾಸ, ಬೆಳೆಗಳಿಗೆ ಜೀವಕಲೆ

ಚಿತ್ತಾ ಮಳೆಗೆ ತೋಯ್ದ ಮೈಸೂರಿನ ಇಳೆ

Published:
Updated:
Prajavani

ಮೈಸೂರು: ಜಿಲ್ಲೆಯಾದ್ಯಂತ ಮಂಗಳವಾರ ಸುರಿದ ಚಿತ್ತಾ ಮಳೆ ರೈತರ ಮೊಗದಲ್ಲಿ ಮಂದಹಾಸ ಮಿನುಗಿಸಿತು. ಎಲ್ಲ ತಾಲ್ಲೂಕುಗಳಲ್ಲೂ ಸಮೃದ್ಧವಾಗಿ ಮಳೆ ಸುರಿದು ಇಳೆಯನ್ನು ತಣಿಸಿತು. ಗುಡುಗು ಸಿಡಿಲಿನ ಆರ್ಭಟವೂ ಜೋರಾಗಿತ್ತು.

ಮುಸುಕಿನಜೋಳದ ಬೆಳೆಗೆ ಈ ಮಳೆ ಸಹಕಾರಿಯಾಗಿದೆ. ಇದರ ಜತೆಗೆ, ಇತರ ಬೆಳೆಗಳೂ ಜೀವಕಳೆ ಪಡೆದಂತಾಗಿದೆ. ಹಿಂಗಾರು ಮಳೆಯು ರೈತರಲ್ಲಿ ನಿರೀಕ್ಷೆಗಳನ್ನು ಗರಿಗೆದರಿಸಿದೆ.

ಅತ್ಯಧಿಕ ಮಳೆ ಹುಣಸೂರು ತಾಲ್ಲೂಕಿನ ನೇರಳಕುಪ್ಪೆಯಲ್ಲಿ 6 ಸೆಂಟಿ ಮೀಟರ್‌ಗೂ ಅಧಿಕ ಸುರಿದಿದೆ. ಎಚ್.ಡಿ.ಕೋಟೆ ತಾಲ್ಲೂಕಿನ ಆಲನಹಳ್ಳಿಯಲ್ಲಿ 3.2 ಸೆಂ.ಮೀ, ಮೈಸೂರು ತಾಲ್ಲೂಕಿನ ಬೀರಿಹುಂಡಿಯಲ್ಲಿ 3.6, ಪಿರಿಯಾಪಟ್ಟಣದ ಮಾಲಂಗಿಯಲ್ಲಿ 3.9, ನಂಜನಗೂಡಿನ ಹದಿನಾರು ಭಾಗದಲ್ಲಿ 2.3, ತಿ.ನರಸೀಪುರದ ಸೀಹಳ್ಳಿಯಲ್ಲಿ 1.3, ಕೆ.ಆರ್.ನಗರದ ಅಡಗೂರಿನಲ್ಲಿ 2.1 ಸೆಂ.ಮೀನಷ್ಟು ಮಳೆಯಾಗಿದೆ. ಇನ್ನು ಒಂದೆರಡು ದಿನಗಳ ಕಾಲ ಜಿಲ್ಲೆಯಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ.

ನಗರದಲ್ಲಿ ಮಳೆಯಿಂದ ಕಾರಂಜಿಕೆರೆಯ ಬಳಿ ಮರವೊಂದು ಉರುಳಿ ಬಿದ್ದಿದೆ. ಜೆ.ಪಿ.ನಗರದ ಧರ್ಮಸಿಂಗ್ ಕಾಲೊನಿಯಲ್ಲಿ ಕೆಲವು ಮಳೆಗಳಿಗೆ ನೀರು ನುಗ್ಗಿದೆ. ರಸ್ತೆಗಳಲ್ಲಿ ಹೆಚ್ಚಿನ ನೀರು ಹರಿಯಿತು. ವಾಹನ ಸವಾರರು ಪರದಾಡಿದರು.

ಪ್ರತಿಕ್ರಿಯಿಸಿ (+)