ಹಳ್ಳಿಯ ಸೊಬಗು ತೆರೆದಿಟ್ಟ ರೈತ ದಸರಾ

7
ಕೃಷಿ ವಸ್ತು ಪ್ರದರ್ಶನಕ್ಕೆ ಚಾಲನೆ; ಮೆರವಣಿಗೆಗೆ ಜೋಡೆತ್ತಿನ ಗಾಡಿ, ಜನಪದ ಕಲಾತಂಡಗಳ ಮೆರುಗು

ಹಳ್ಳಿಯ ಸೊಬಗು ತೆರೆದಿಟ್ಟ ರೈತ ದಸರಾ

Published:
Updated:
Deccan Herald

ಮೈಸೂರು: ವಾಹನಗಳ ಗೌಜು ಗದ್ದಲ, ಜನಸಂದಣಿಯಿಂದ ಕೂಡಿರುತ್ತಿದ್ದ ರಾಜಬೀದಿ ಕೆಲಹೊತ್ತು ಮೌನಕ್ಕೆ ಜಾರಿತ್ತು. ತಳಿರು ತೋರಣಗಳಿಂದ ಸಿಂಗರಿಸಿದ್ದ ಎತ್ತಿನ ಗಾಡಿಯಲ್ಲಿ ಕೂತು ಸಾಗುತ್ತಿದ್ದ ರೈತರಿಗೆ ಅದು ಭವ್ಯ ಸ್ವಾಗತ ಕೋರುತ್ತಿತ್ತು.

ಜನಪದ ಕಲಾತಂಡಗಳ ಕಣ್ಮನ ಸೆಳೆಯುವ ನೃತ್ಯ, ಎತ್ತುಗಳ ಕೊರಳಲ್ಲಿ ಹಾಕಿದ್ದ ಗೆಜ್ಜೆ ಸದ್ದಿನ ನಿನಾದ, ತಲೆಗೆ ಹಸಿರು ಟವೆಲ್‌ ಸುತ್ತಿಕೊಂಡು ಹೊರಟಿದ್ದ ರೈತರು... ಹೀಗೆ ಹಳ್ಳಿಯ ಸೊಬಗು ಅನಾವರಣಗೊಂಡಿತ್ತು.

ಇತ್ತ, ಜೆ.ಕೆ.ಮೈದಾನದಲ್ಲಿ ಹಮ್ಮಿಕೊಂಡಿದ್ದ ಕೃಷಿ ವಸ್ತು ಪ್ರದರ್ಶನವು ಕೃಷಿ ಕ್ಷೇತ್ರದ ವಿವಿಧ ಆಯಾಮಗಳನ್ನು ಪರಿಚಯ ಮಾಡಿಕೊಟ್ಟಿತು.

ನಾಡಹಬ್ಬ ದಸರಾ ಮಹೋತ್ಸವದ 3ನೇ ದಿನವಾದ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ರೈತರ ದಸರಾ ಹಾಗೂ ಮೆರವಣಿಗೆಯಲ್ಲಿ ಕಂಡುಬಂದ ದೃಶ್ಯಗಳಿವು.

ಅಂಬಾವಿಲಾಸ ಅರಮನೆ ಬಳಿಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ರೈತರ ಮೆರವಣಿಗೆಗೆ ಕೃಷಿ ಸಚಿವ ಎನ್‌.ಎಚ್‌.ಶಿವಶಂಕರ ರೆಡ್ಡಿ ಚಾಲನೆ ನೀಡಿದರು. ಬಳಿಕ, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಹಾಗೂ ಶಿವಶಂಕರ ರೆಡ್ಡಿ ಅವರು ಎತ್ತಿನ ಗಾಡಿಯಲ್ಲಿ ನಿಂತು ಸಾಗಿದರು. ಶಿವಶಂಕರ ರೆಡ್ಡಿ ಎತ್ತುಗಳ ಹಗ್ಗಗಳನ್ನು ಹಿಡಿದರೆ, ದೇವೇಗೌಡರು ಚಾಟಿ ಬೀಸುವ ಮೂಲಕ ಬಂಡಿಯನ್ನು ಓಡಿಸಿ ಖುಷಿಪಟ್ಟರು.

ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಜೆ.ಕೆ.ಮೈದಾನದವರೆಗೆ ನಡೆದ ಮೆರವಣಿಗೆಯಲ್ಲಿ ನಂದಿಧ್ವಜ ಹಿಡಿದ ಕಲಾವಿದರು ಮುಂದೆ ಸಾಗಿದರೆ ಪೂರ್ಣಕುಂಭ ಹೊತ್ತ ಮಹಿಳೆಯರು ಅವರನ್ನು ಹಿಂಬಾಲಿಸಿದರು. ಕೋಲಾಟ, ಕಂಸಾಳೆ, ಪೂಜಾ ಕುಣಿತ, ವೀರಗಾಸೆ, ಗಾರುಡಿ ಗೊಂಬೆ ಸೇರಿದಂತೆ ಅನೇಕ ಜನಪದ ಕಲಾತಂಡಗಳ ಪ್ರದರ್ಶನ ಮೆರವಣಿಗೆಗೆ ಮೆರುಗು ನೀಡಿದವು.

ಕೃಷಿ ವಸ್ತು ಪ್ರದರ್ಶನ: ವಸ್ತು ಪ್ರದರ್ಶನವು ಕೃಷಿಗೆ ಸಂಬಂಧಿಸಿದ ಮಾಹಿತಿ ಹಾಗೂ ಯಂತ್ರೋಪಕರಗಳ ಬಗ್ಗೆ ರೈತರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತಿದೆ. ವಿವಿಧ ಇಲಾಖೆ, ಕೃಷಿ ವಿಶ್ವವಿದ್ಯಾಲಯ ಹಾಗೂ ಸ್ವಸಹಾಯ ಸಂಸ್ಥೆಗಳ ಮಳಿಗೆಗಳಿವೆ. ಟ್ರ್ಯಾಕ್ಟರ್‌, ಟಿಲ್ಲರ್‌, ಎಂಜಿನ್‌ ಚಾಲಿತ ರೀಪರ್‌, ಮೇವು ಕತ್ತರಿಸುವ ಯಂತ್ರ, ಕಳೆ ಕೀಳುವ ಯಂತ್ರ ಹೀಗೆ... ಅನೇಕ ಯಂತ್ರೋಪಕರಣಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಇದೆ. ವಿವಿಧ ತಳಿಯ ಕುರಿ, ಮೇಕೆ, ಎತ್ತು, ಹಸು, ಎಮು ಪಕ್ಷಿಗಳನ್ನೂ ಕಾಣಬಹುದು.

ಜೆ.ಕೆ.ಮೈದಾನದ ವೈದ್ಯಕೀಯ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘದ ಸಭಾಂಗಣದಲ್ಲಿ ರೈತ ದಸರಾ ಉದ್ಘಾಟನಾ ಸಮಾರಂಭ ಜರುಗಿತು.

32 ರೈತರಿಗೆ ಸನ್ಮಾನ: ಕೃಷಿ ಕ್ಷೇತ್ರಕ್ಕೆ ಕೊಡುಗೆ ನೀಡಿದ ಇಬ್ಬರು ವಿಜ್ಞಾನಿಗಳು ಹಾಗೂ ಕೃಷಿ, ತೋಟಗಾರಿಕೆ, ಪಶುಪಾಲನೆ, ರೇಷ್ಮೆ, ಮೀನುಗಾರಿಕೆ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ ‘ಆತ್ಮಾ’ ಕಾರ್ಯಕ್ರಮದಡಿ ತಾಲ್ಲೂಕು ಮತ್ತು ಜಿಲ್ಲಾಮಟ್ಟದಲ್ಲಿ ‘ಉತ್ತಮ ಕೃಷಿಕ’ ಪ್ರಶಸ್ತಿಗಳಿಗೆ ಭಾಜನರಾದ 32 ರೈತರನ್ನು ಸನ್ಮಾನಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !