ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ಜಿಲ್ಲೆಯ ಐವರಿಗೆ ರಾಜ್ಯೋತ್ಸವ ಪ್ರಶಸ್ತಿ ಗೌರವ

65 ಮಂದಿಯ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಸಾಧಕರು
Last Updated 28 ಅಕ್ಟೋಬರ್ 2020, 15:15 IST
ಅಕ್ಷರ ಗಾತ್ರ

ಮೈಸೂರು: ರಾಜ್ಯ ಸರ್ಕಾರ ಪ್ರಕಟಿಸಿದ ರಾಜ್ಯೋತ್ಸವ ಪ್ರಶಸ್ತಿಗೆ ಜಿಲ್ಲೆಯ ಐವರು ಆಯ್ಕೆಯಾಗಿದ್ದಾರೆ. ಎನ್.ಎಸ್.ಜನಾರ್ದನಮೂರ್ತಿ (ಶಿಲ್ಪಕಲೆ), ಡಾ.ಪುಟ್ಟಸಿದ್ಧಯ್ಯ (ಶಿಕ್ಷಣ), ಡಾ.ಎಂ.ಎಸ್.ಚಂದ್ರಶೇಖರ್ (ಯೋಗ), ಸಿ.ಮಹೇಶ್ವರನ್ (ಮಾಧ್ಯಮ) ಹಾಗೂ ವಲೇರಿಯನ್ ಡಿಸೋಜಾ (ಸಾಹಿತ್ಯ) ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ವಲ್ಲಿವಗ್ಗ ಎಂದೇ ಖ್ಯಾತರಾದ ವಲೇರಿಯನ್ ಡಿಸೋಜ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವ ರಾಗಿದ್ದರೂ ಸಾಂಸ್ಕೃತಿಕ ನಗರಿಯೇ ಅವರ ಕಾರ್ಯಕ್ಷೇತ್ರವಾಗಿದೆ.

ಹೂವಿನ ಜತೆ ನಾರೂ ಸ್ವರ್ಗಕ್ಕೆ ಹೋಯಿತು– ಸಿ.ಮಹೇಶ್ವರನ್: ಮಾಧ್ಯಮ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಿ.ಮಹೇಶ್ವರನ್ ಅವರು ‘ಹೂವಿನ ಜತೆ ನಾರೂ ಸ್ವರ್ಗಕ್ಕೆ ಹೋಯಿತು’ ಎಂಬ ಮಾತನ್ನು ನೆನಪಿಸಿಕೊಂಡರು.

‘ಸಾಧ್ವಿ’ಯಂತಹ ಐತಿಹಾಸಿಕ ಪತ್ರಿಕೆಯಿಂದಾಗಿ ನನಗೆ ಇಂದು ಈ ಗೌರವ ಲಭಿಸಿದೆ. ಇದರ ಜತೆಗೆ, ‘ಸಾಧ್ವಿ ಫೌಂಡೇಷನ್‌’ ಮೂಲಕ ಮಾಡುತ್ತಿರುವ ಜನಮುಖಿ ಕೆಲಸಗಳೂ ಇದಕ್ಕೆ ಕಾರಣವಾಗಿವೆ’ ಎಂದು ತಿಳಿಸಿದರು.

ದಕ್ಷಿಣ ಭಾರತದಲ್ಲಿ ಪ್ರಕಟವಾಗುತ್ತಿರುವ ಪತ್ರಿಕೆಗಳ ಪೈಕಿ ‘ಸಾಧ್ವಿ’ ಪತ್ರಿಕೆ ಅತ್ಯಂತ ಹಳೆಯ ಪತ್ರಿಕೆ ಎಂಬ ಗೌರವಕ್ಕೆ ಪಾತ್ರವಾಗಿದೆ. ‘ತಾತಯ್ಯ’ ಎಂದೇ ಖ್ಯಾತರಾದ ವೆಂಕಟಕೃಷ್ಣಯ್ಯ ಅವರಿಂದ 1899ರಲ್ಲಿ ಆರಂಭವಾದ ಈ ಪತ್ರಿಕೆ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಸ್ಥಾನ ಪಡೆದಿತ್ತು. ನಂತರ, ಅಗರಂ ರಂಗಯ್ಯ ಅವರ ಸಾರಥ್ಯದಲ್ಲಿ 63 ವಸಂತ ಗಳನ್ನು ಕಂಡ ಇದು, ತ್ಯಾಗರಾಜ ಅಯ್ಯರ್ ಅವರ ಕೈ ಸೇರಿತು. ಬಳಿಕ 1995 ನವೆಂಬರ್ 1ರಿಂದ ಇಲ್ಲಿಯವರೆಗೆ ಮಹೇಶ್ವರನ್‌ ಈ ಪತ್ರಿಕೆಯನ್ನು ಮುನ್ನಡೆಸುತ್ತಿದ್ದಾರೆ. ಇದರೊಂದಿಗೆ ಇವರು ಸಾಧ್ವಿ ಫೌಂಡೇಷನ್ಮೂಲಕ ಅಂಧರಿಗಾಗಿ ‘ಸಾಧ್ವಿ ಇನ್ ಬ್ರೇಲ್‌’ ಎಂಬ ಮಾಸಪತ್ರಿಕೆಯನ್ನೂ ಹೊರ ತರುತ್ತಿದ್ದಾರೆ. ಸದ್ಯ, ರಾಜ್ಯದಲ್ಲಿರುವ 98 ಸಾವಿರ ಅಂಧರಿಗಾಗಿ ‘ಮಾತನಾಡುವ ಪುಸ್ತಕ’ಗಳನ್ನು ಉಚಿತವಾಗಿ ತಲುಪಿಸುವ ಯೋಜನೆ ಹಾಕಿಕೊಂಡು, ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಧರ್ಮದ ಹಂಗಿಲ್ಲದೆ ಪ್ರಶಸ್ತಿ ಕೊಟ್ಟಿದ್ದು ಖುಷಿ ತಂದಿದೆ– ವಲ್ಲಿವಗ್ಗ: ‘ಧರ್ಮದ ಹಂಗಿಲ್ಲದೆ ಪ್ರಶಸ್ತಿ ನೀಡಿದ್ದು ನಿಜಕ್ಕೂ ಖುಷಿ ತಂದಿದೆ’ ಎಂದು ಸಾಹಿತಿ ವಲೇರಿಯನ್ ಡಿಸೋಜ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಇದು ಅನಿರೀಕ್ಷಿತವಾಗಿತ್ತು. ಪ್ರಶಸ್ತಿ ಬಂದಿದೆ ಎಂದು ಕೇಳಿ ಸಂತಸ ವಾಗಿದೆ’ ಎಂದು ಹೇಳಿದರು.

ದಕ್ಷಿಣಕನ್ನಡದ ಬಂಟ್ವಾಳ ತಾಲ್ಲೂಕಿನ ವಗ್ಗ ಎಂಬ ಗ್ರಾಮದ ಇವರು ಕೊಂಕಣಿ ಭಾಷೆಯಲ್ಲಿ
ಹಲವು ಸಾಹಿತ್ಯ ಕೃತಿಗಳನ್ನು ಹೊರ ತಂದಿದ್ದಾರೆ. ಇವರ ಕಥೆಗಳು ತೆಲುಗು, ಹಿಂದಿ ಹಾಗೂ ಇಂಗ್ಲಿಷ್‌ಗೆ ಅನುವಾದ ಗೊಂಡಿವೆ. ಜಿನ್ನಿ ಕಾಣಾಚೆಂ, ಸತ್ ಆನಿ ಜಿವಿತ್, ಧುಳ್, ಖಾಂದಿ ಖುರಿಸ್ ಇವರ ಪ್ರಮುಖ ಕಥಾಸಂಕಲನಗಳು. ‘ಹೆಗಲ ಶಿಲುಬೆ’ ಕನ್ನಡದ ಪ್ರಮುಖ ಕಥಾ ಸಂಕಲನ. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 2009ನೇ ಸಾಹಿತ್ಯ ಗೌರವ ಪ್ರಶಸ್ತಿ ನೀಡಿ ಇವರನ್ನು ಗೌರವಿಸಿದೆ.

ಯೋಗ ಕ್ಷೇತ್ರಕ್ಕೆ ಸಂದ ಗೌರವ– ಡಾ.ಎ.ಎಸ್.ಚಂದ್ರಶೇಖರ: ಯೋಗ ಕ್ಷೇತ್ರದಲ್ಲಿ ಪ್ರಶಸ್ತಿಗೆ ಆಯ್ಕೆಯಾದ ಡಾ.ಎ.ಎಸ್.ಚಂದ್ರಶೇಖರ ಅವರು ಇದೊಂದು ಅನಿರೀಕ್ಷಿತವಾದ ‌ಪ್ರಸಂಗವಾಗಿತ್ತು ಎಂದು ‘ಪ್ರಜಾವಾಣಿ’ ಜತೆ ಸಂತಸ ಹಂಚಿಕೊಂಡರು. ‘ಇದು ಯೋಗ ಕ್ಷೇತ್ರಕ್ಕೆ ನೀಡಿದ ದೊಡ್ಡ ಗೌರವ’ ಎಂದು ಅಭಿಪ್ರಾಯಪಟ್ಟರು.‌

ಇವರು ವೈದ್ಯರಾಗಿ, ಯೋಗ ಶಿಕ್ಷಕರಾಗಿ ಹಲವು ಸಾಧನೆ ಮಾಡಿದ್ದಾರೆ. ‘36 ವರ್ಷಗಳಿಂದ ಚಿರಂಜೀವಿ ಯೋಗ ಕೇಂದ್ರವನ್ನು ನಡೆಸುತ್ತಿರುವ ಇವರು ಇಲ್ಲಿಯವರೆಗೆ 3 ಸಾವಿರಕ್ಕೂ ಅಧಿಕ ಮಂದಿಗೆ ಯೋಗವನ್ನು ಕಲಿಸಿದ್ದಾರೆ. ನಗರದಲ್ಲಿ ಇದರ 10 ಶಾಖೆಗಳು ಕಾರ್ಯನಿರ್ವಹಿಸುತ್ತಿವೆ.

ಜೀತಪದ್ಧತಿಯಲ್ಲಿ ನರಳಿದವರ ಆಶಾಕಿರಣ ಡಾ.ಪುಟ್ಟಸಿದ್ದಯ್ಯ

ಮೈಸೂರು: ಜೀತಪದ್ಧತಿಯಲ್ಲಿ ನಲುಗಿದವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ಡಾ.ಪುಟ್ಟಸಿದ್ದಯ್ಯ, ‘ಪ್ರಶಸ್ತಿ ಬಂದಿರುವುದು ಖುಷಿಯಾಗಿದೆ. ಇನ್ನಷ್ಟು ಕೆಲಸ ಮಾಡುವ ಹುರುಪು ತಂದಿದೆ’ ಎಂದು ‘ಪ್ರಜಾವಾಣಿ’ ಜತೆ ಸಂತಸ ಹಂಚಿಕೊಂಡರು.

ಬಡಕುಟುಂಬದಲ್ಲಿ ಜನಿಸಿದ ಇವರು ಕೂಡ ಮೊದಲಿಗೆ ಜೀತಪದ್ಧತಿಯ ಕಹಿ ಉಂಡವರೇ. ನಂತರ, ನಟ ರಜನಿಕಾಂತ್ ಜತೆ ಬೆಂಗಳೂರಿನಲ್ಲಿ ಬಸ್‌ ನಿರ್ವಾಹಕರಾಗಿ ಕೆಲಸ ಮಾಡಿದ್ದಾರೆ. ಗೆಳೆಯರಾದ ಸಿದ್ದಯ್ಯ, ಮಾದಯ್ಯ ಹಾಗೂ ರಂಗನಾಥಯ್ಯ ಅವರ ನೆರವಿನಿಂದ ವೈದ್ಯಕೀಯ ಪದವಿ ಪಡೆದು, ಮೈಸೂರಿನ ಕೆ.ಆರ್‌. ಆಸ್ಪತ್ರೆ ಹಾಗೂ ಬಿಜಿಎಸ್‌ ಅಪೊಲೊ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಗ್ರಾಮಾಂತರ ಪ್ರದೇಶವನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡ ಡಾ. ಪುಟ್ಟಸಿದ್ದಯ್ಯ, ನಿವೃತ್ತಿಯ ನಂತರ 1991ರಲ್ಲಿ, ಪತ್ನಿ ರಾಜಮ್ಮ ಅವರ ಜತೆಗೂಡಿ ಬಾಬೂ ಜಗಜೀವನರಾಂ ವಿದ್ಯಾಸಂಸ್ಥೆಯನ್ನು ತೆರೆದಿದ್ದು, ಜೀತಪದ್ದತಿಯಲ್ಲಿ ಸಿಲುಕಿದವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಆದಿಜಾಂಬವ ಸಂಘದ ದಕ್ಷಿಣ ಭಾರತ ವಿಭಾಗದ ಸಹಕಾರ್ಯದರ್ಶಿಯಾಗಿ ಜೀತಪದ್ಧತಿ ತೊಡೆದು ಹಾಕುವಲ್ಲಿ ಶ್ರಮಿಸುತ್ತಿದ್ದಾರೆ.

ಇವರ ವಿದ್ಯಾಸಂಸ್ಥೆಯಲ್ಲಿ ಕಲಿತ ಮಕ್ಕಳು, ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ‘ಅಂಬಾರಿ ಚಾಮುಂಡಿ’ಯ ಕರ್ತೃವಿಗೆ ಗೌರವಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಪಡೆದವರಲ್ಲಿ ದಸರೆಯಲ್ಲಿ ಅಂಬಾರಿಯೊಳಗೆ ಪ್ರತಿಷ್ಠಾಪನೆಗೊಳ್ಳುವ ಚಾಮುಂಡೇಶ್ವರಿಯ ಪಂಚಲೋಹ ವಿಗ್ರಹವನ್ನು ತಯಾರಿಸಿದ ಶಿಲ್ಪಿ ಎನ್‌.ಎಸ್.ಜನಾರ್ದನಮೂರ್ತಿ ಅವರೂ ಒಬ್ಬರು.

‘72 ವರ್ಷಗಳ ನಂತರ ಈಗಲಾದರೂ ಸರ್ಕಾರ ನನ್ನ ಸಾಧನೆಯನ್ನು ಗುರುತಿಸಿದ್ದಕ್ಕೆ ತುಂಬಾ ಸಂತಸವಾಗಿದೆ’ ಎಂದು ಅವರು ಪ್ರತಿಕ್ರಿಯಿಸಿದರು.

‍‍ಎರಡು ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಎನ್.ಪಿ.ಶ್ರೀನಿವಾಸಾಚಾರ್ ಅವರ ಪುತ್ರರಾದ ಇವರು ಇಲ್ಲಿನ ‘ಕಾವಾ’ದಲ್ಲಿ 35 ವರ್ಷಗಳ ಶಿಲ್ಪಕಲಾ ಕ್ಷೇತ್ರದಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿದರು. 1989ರಲ್ಲಿ ಇವರು ತಯಾರಿಸಿದ ಪಂಚಲೋಹದ ಚಾಮುಂಡೇಶ್ವರಿ ವಿಗ್ರಹವನ್ನು 1990ರಿಂದಲೂ ಜಂಬೂಸವಾರಿಯಲ್ಲಿರಿಸಲಾಗುತ್ತಿದೆ. ಇವರಿಂದ ನೂರಾರು ಮಂದಿ ಶಿಲ್ಪಕಲೆಯಲ್ಲಿ ಪರಿಣತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT