ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಸರ್ಗದೊಂದಿಗೆ ‘ರಕ್ಷಾಬಂಧನ’

Last Updated 9 ಆಗಸ್ಟ್ 2019, 19:38 IST
ಅಕ್ಷರ ಗಾತ್ರ

ಅಣ್ಣ– ತಂಗಿ, ಅಕ್ಕ–ತಮ್ಮನ ನಡುವಿನ ಬಾಂಧವ್ಯದ ಕೊಂಡಿಯನ್ನು ಮತ್ತಷ್ಟು ಬಲಗೊಳಿಸುವ, ಬದುಕನ್ನು ಕಾಯುವ, ಸಂರಕ್ಷಿಸುವ ವಿಶ್ವಾಸದ ಪ್ರತೀಕವಾಗಿರುವ ‘ರಕ್ಷಾಬಂಧನ’ ಈ ಬಾರಿ ಸ್ವಾತಂತ್ರ್ಯ ದಿನದಂದೇ ಬಂದಿರುವುದು ವಿಶೇಷ. ದೇಶಕ್ಕೆ ಸಿಕ್ಕ ಸ್ವಾತಂತ್ರ್ಯ, ಅದಕ್ಕೆ ಹೋರಾಡಿದ, ಬಲಿದಾನ ಮಾಡಿದ ಮಹನೀಯರನ್ನು ನೆನೆಯುತ್ತಾ, ಒಡಹುಟ್ಟಿದವರೊಂದಿಗಿನ ಬಂಧವನ್ನು ಗಟ್ಟಿಗೊಳಿಸುತ್ತಾ ದೇಶಕ್ಕೂ ಕುಟುಂಬಕ್ಕೂ ‘ರಕ್ಷೆ’ಯಾಗಿ ನಿಲ್ಲಬಹುದು.

ಹಾಗೆ ನೋಡಿದರೆ, ಈ ರಕ್ಷಾಬಂಧನ ಅಥವಾ ರಕ್ಷೆ ಎಂಬುದು ಇತ್ತೀಚಿನ ಆಚರಣೆಯೇನೂ ಅಲ್ಲ. ಕೃಷ್ಣ ಸುದರ್ಶನದಿಂದ ತನ್ನ ಬೆರಳಿಗೆ ಗಾಯ ಮಾಡಿಕೊಂಡಿದ್ದಾಗ ದ್ರೌಪದಿ ತಮ್ಮ ರೇಷ್ಮೆ ಸೀರೆಯನ್ನು ಹರಿದು ಕೃಷ್ಣನ ಗಾಯಕ್ಕೆ ಬಟ್ಟೆ ಕಟ್ಟುತ್ತಾಳೆ. ಇದೇ ಕಾರಣಕ್ಕೆ ದ್ರೌಪದಿಯನ್ನು ವಸ್ತ್ರಾಪಹರಣ ಮಾಡುವಾಗ ಆಕೆಯ ರಕ್ಷಣೆಗೆ ಕೃಷ್ಣ ಬರುತ್ತಾನೆ. ಇಬ್ಬರ ನಡುವಿನ ಬಾಂಧವ್ಯವನ್ನು ಬೆಸೆಯುವಂತಹ, ರಕ್ಷಾಬಂಧನವನ್ನು ನೆನಪಿಸುವಂತಹ ಕಥೆ.

ರಜಪೂತ ಮಹಿಳೆಯರು ತಮ್ಮ ಗಂಡಂದಿರು ಯುದ್ಧಕ್ಕೆ ತೆರಳುವಾಗ ಅವರು ಸುರಕ್ಷಿತವಾಗಿ ಮರಳಿ ಬರಲಿ ಎಂದು ಹಾರೈಸಿ ಅವರಿಗೆ ಆರತಿ ಎತ್ತಿ ಕೈಗೆ ರಕ್ಷೆಯಾಗಿ ಕಂಕಣ ಕಟ್ಟಿ ಕಳುಹಿಸಿಕೊಡುತ್ತಿದ್ದರು.

ಈಗ ಅಣ್ಣ–ತಂಗಿ, ತಮ್ಮಂದಿರಿಗೆ ರಕ್ಷೆಯಾಗಿ ಕಟ್ಟುವ ಆಚರಣೆಯಾಗಿ ಚಾಲ್ತಿಯಲ್ಲಿದೆ. ರಕ್ಷಾಬಂಧನವು ವಿವಿಧ ಕಾಲಘಟ್ಟಗಳಲ್ಲಿ ರೂಪಾಂತರಗೊಳ್ಳುತ್ತಾ ಬಂದರೂ ‘ರಕ್ಷಣೆ’, ‘ಕಾಯುವ’ ತತ್ವವನ್ನು ತನ್ನೊಡಲಲ್ಲಿ ಹುದುಗಿಸಿಕೊಂಡಿರುವುದು ವೇದ್ಯವಾಗುತ್ತದೆ. ಈ ಆಚರಣೆಯನ್ನು ಇಷ್ಟಕ್ಕೇ ಸೀಮಿತಗೊಳಿಸದೆ ಇದರ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲು ಸಾಧ್ಯವಿಲ್ಲವೇ? ಒಡಹುಟ್ಟಿದವರು, ಸಹಾಯಕ್ಕೆ ಬಂದವರು, ರಕ್ಷಣೆ ಮಾಡಿದವರಿಗೆ ‘ರಕ್ಷೆ’ ಕಟ್ಟುವಾಗ, ನಮ್ಮ ಅಸ್ತಿತ್ವದ ಮೂಲ ಬೇರಾದ ಈ ಧರೆ, ನಿಸರ್ಗವನ್ನು ರಕ್ಷಿಸುವ ಪಣವನ್ನು ಏಕೆ ತೊಡಬಾರದು?

ಸರಿಪಡಿಸಲಾಗದ ಪ್ರಮಾಣದಲ್ಲಿ ಈ ಪರಿಸರವನ್ನು ಹಾಳು ಮಾಡಿದ್ದೇವೆ. ಕಾಡುಗಳು ಕರಗಿ ಕಾಂಕ್ರೀಟ್‌ ಕಾಡುಗಳು ರೂಪುಗೊಳ್ಳುತ್ತಿವೆ. ರೆಸಾರ್ಟ್‌, ಹೋಂಸ್ಟೇಗಳಂತಹ ಭೋಗದ ತಾಣಗಳಾಗಿ ರೂಪುಗೊಳ್ಳುತ್ತಿವೆ. ಕಾರ್ಖಾನೆ ಸ್ಥಾಪನೆ, ಮಿತಿ ಮೀರಿದ ವಾಹನಗಳ ಬಳಕೆಯಿಂದ ವಾಯುಮಾಲಿನ್ಯವಾಗುತ್ತಿದೆ. ಕಲುಷಿತ ಹಾಗೂ ವಿಷಪೂರಿತ ನೀರನ್ನು ನದಿಗಳಿಗೆ ಹರಿಸುವ ಮೂಲಕ ಜಲಮೂಲಗಳನ್ನು ಹಾಳು ಮಾಡುತ್ತಿದ್ದೇವೆ. ನಮಗೆ ಆಹಾರ ಒದಗಿಸುವ ಭೂಮಿಯನ್ನೂ ಹಾಳುಗೆಡವಿದ್ದೇವೆ. ಜಾಗತಿಕ ತಾಪಮಾನ ಹೆಚ್ಚುತ್ತಿರುವುದರಿಂದ ಹಿಮಬಂಡೆಗಳು ಕರಗುತ್ತಿವೆ. ಇದರ ಪರಿಣಾಮ ಸಮುದ್ರದ ನೀರಿನ ಮಟ್ಟ ಏರಿಕೆಯಾಗುತ್ತಿದೆ.

ಕಳೆದ ವರ್ಷ ಕೊಡಗು ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿ, ದೊಡ್ಡಮಟ್ಟದಲ್ಲಿ ಭೂಕುಸಿತ ಉಂಟಾಗಿತ್ತು. ಅನೇಕ ಮಂದಿ ಪ್ರಾಣವನ್ನು ಕಳೆದುಕೊಂಡಿದ್ದರು. ಈ ಅವಘಡಕ್ಕೆ ಮಾನವ ಕೃತ್ಯವೇ ಕಾರಣ ಎಂದು ಕೆಲ ತಜ್ಞರು ಹೇಳಿದ್ದರು. ಈ ವರ್ಷವೂ ಕೊಡಗಿನಲ್ಲಿ ಪ್ರವಾಹ ಉಂಟಾಗಿದೆ. ಕೆಲವೆಡೆ ಭೂಕುಸಿತ ಉಂಟಾಗುತ್ತಿದ್ದು ಜನರು ಆತಂಕಕ್ಕೆ ಒಳಗಾಗಿದ್ದಾರೆ. ಇತ್ತ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಜಲ ದಿಗ್ಬಂಧನವಾಗಿದ್ದು, 18ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇನ್ನೊಂದೆಡೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಬಳ್ಳಾರಿ ಭಾಗದಲ್ಲಿ ಮಳೆ ಇಲ್ಲದೆ ತೀವ್ರ ಬರ ಉಂಟಾಗಿದೆ. ಅತಿವೃಷ್ಟಿ, ಅನಾವೃಷ್ಟಿಗಳ ನಡುವೆ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ರಕ್ಷಣೆಗೆ ಧಾವಿಸಬೇಕಾದದ್ದು ಮನುಷ್ಯತ್ವವಲ್ಲವೆ?

ಭೂಮಿ, ಗಿಡ, ಮರ, ಪ್ರಾಣಿ ಪಕ್ಷಿಗಳು ನಮ್ಮ ಸೋದರರು. ಅವುಗಳ ಸಂರಕ್ಷಣೆಯೂ ನಮ್ಮ ಕರ್ತವ್ಯವಾಗಬೇಕು. ಈ ದಿಸೆಯಲ್ಲಿ ಮನುಷ್ಯರು ಯೋಚಿಸಬೇಕು. ಪ್ರಕೃತಿಯೊಂದಿಗೆ ‘ರಕ್ಷಾಬಂಧನ’ ಏರ್ಪಡಬೇಕು. ಪ್ರಕೃತಿಯ ಸಕಲ ಚರಾಚರಗಳೆಲ್ಲವನ್ನೂ ಕಾಪಾಡುವ ಹೊಣೆ ನಮ್ಮ ಮೇಲಿದೆ.

ಮಾರುಕಟ್ಟೆಯಲ್ಲಿ ತರಹೇವಾರಿ ರಾಖಿಗಳು

ನೊಂದಾಗ ಸಾಂತ್ವನ ಹೇಳಿದವರು, ಸಂಕಷ್ಟದಲ್ಲಿದ್ದಾಗ ನೆರವಿಗೆ ಬಂದವರು, ಆಶ್ರಯ ನೀಡಿದವರು, ಒಡನಾಟ ಇಟ್ಟುಕೊಂಡವರು, ರಕ್ಷಣೆ ಮಾಡಿದ ಸಂಬಂಧವನ್ನು ನೆನೆಯುವ, ತಮ್ಮೊಂದಿಗಿನ ಭಾವಬೆಸುಗೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಇರುವ ಸಂಕೇತ ರಾಖಿ. ಈ ರಾಖಿಗಳು ಐದು ರೂಪಾಯಿಯಿಂದ ಹಿಡಿದು ಲಕ್ಷಾಂತರ ರೂಪಾಯಿವರೆಗೂ ಸಿಗುತ್ತವೆ.

ಶಿವರಾಂಪೇಟೆ, ಅಗ್ರಹಾರ, ಕುವೆಂಪುನಗರ, ಒಂಟಿಕೊಪ್ಪಲು, ದೇವರಾಜ ಮಾರುಕಟ್ಟೆ ಸೇರಿದಂತೆ ನಗರದ ಅನೇಕ ಬಡಾವಣೆಗಳು, ಮಾರುಕಟ್ಟೆಗಳಲ್ಲಿ ತರಹೇವಾರಿ ರಾಖಿಗಳು ಕಾಣಸಿಗುತ್ತಿವೆ. ವೈವಿಧ್ಯಮಯ ರಾಖಿಗಳು ಗಮನ ಸೆಳೆಯುತ್ತಿವೆ. ಅಂಗಡಿಗಳಲ್ಲಿ ತಮಗಿಷ್ಟವಾದ ರಾಖಿಗಳನ್ನು ಖರೀದಿಸುವುದರಲ್ಲಿ ಜನರು ನಿರತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT