ಗುರುವಾರ , ಸೆಪ್ಟೆಂಬರ್ 29, 2022
26 °C

ಹೆಚ್ಚಿನ ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿಗೆ ಆಗ್ರಹಿಸಿ ರ‍್ಯಾಲಿ 17ರಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ನಡೆಸುವಂತೆ ಆಗ್ರಹಿಸಿ ಸೆ.17ರಂದು ಮಧ್ಯಾಹ್ನ 12ಕ್ಕೆ ನಗರದ ಅರಮನೆಯ ಮುಂಭಾಗದ ಕೋಟೆ ಆಂಜನೇಯ ದೇವಸ್ಥಾನದ ಎದುರಿನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ‍್ಯಾಲಿ ನಡೆಸಲಾಗುವುದು’ ಎಂದು ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿ ಅಧ್ಯಕ್ಷ ಜಾಕೀರ್ ಹುಸೇನ್ ತಿಳಿಸಿದರು.

‘ಹುದ್ದೆಗಳನ್ನು ಹೆಚ್ಚಿಸಿದರೆ ಜಾಸ್ತಿ ಮಂದಿಗೆ ಅವಕಾಶ ದೊರೆಯಲಿದೆ. ಕಾಲೇಜುಗಳಲ್ಲಿ ಬೋಧಕರ ಕೊರತೆ ಸಮಸ್ಯೆಯೂ ಬಗೆಹರಿಯಲಿದೆ. ಈ ಬಗ್ಗೆ ಸರ್ಕಾರದ ಗಮನಸೆಳೆಯುವುದಕ್ಕಾಗಿ ಜಾಗೃತಿ ಅಭಿಯಾನದ ಭಾಗವಾಗಿ ರ‍್ಯಾಲಿ ನಡೆಸಲಾಗುತ್ತಿದೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ವಿಧಾನಪರಿಷತ್‌ ಸದಸ್ಯ ಎ.ಎಚ್.ವಿಶ್ವನಾಥ್‌ ಉದ್ಘಾಟಿಸಲಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳ ನೂರಾರು ಮಂದಿ ಉದ್ಯೋಗ ಆಕಾಂಕ್ಷಿಗಳು ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

‘2021ರ ಅ.7ರಂದು ಒಟ್ಟು 29 ವಿಷಯಗಳಿಗೆ 1,242 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಈ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆದಿದ್ದು, ತಾತ್ಕಾಲಿಕ ಆಯ್ಕೆಪಟ್ಟಿ ಬಿಡುಗಡೆಯಾಗಿದೆ. ಆದರೆ, ಹೆಚ್ಚಿನ ಕಾರ್ಯಭಾರಕ್ಕೆ ತಕ್ಕಂತೆ ಪ್ರತಿ ವಿಷಯದಲ್ಲೂ ಕನಿಷ್ಠ 35ರಿಂದ 40 ಹೆಚ್ಚುವರಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು. ಈ ಮೂಲಕ ವಯೋಮಿತಿ ಮೀರುತ್ತಿರುವ ಅಭ್ಯರ್ಥಿಗಳಿಗೆ ನೆರವಾಗಬೇಕ’ ಎಂದು ಸರ್ಕಾರವನ್ನು ಒತ್ತಾಯಿಸಿದರು.

‘ಸಾವಿರಾರು ಹುದ್ದೆಗಳು ಖಾಲಿ ಇದ್ದರೂ ಕೇವಲ 1,242 ಹುದ್ದೆಗೆ ನೇಮಕಾತಿ ಮಾಡಿಕೊಳ್ಳುವುದರಿಂದ ಬಹಳಷ್ಟು ಮಂದಿ ಅವಕಾಶ ವಂಚಿತರಾಗಲಿದ್ದಾರೆ. 12 ವರ್ಷಗಳಲ್ಲಿ ಎರಡು ಬಾರಿಯಷ್ಟೆ ನೇಮಕಾತಿ ನಡೆದಿದೆ. ಆದ್ದರಿಂದ ಈ ಬಾರಿ ಕನಿಷ್ಠ 800 ಹುದ್ದೆಗಳನ್ನು ಹೆಚ್ಚುವರಿಯಾಗಿ ಸೇರಿಸಿಕೊಳ್ಳಬೇಕು’ ಎಂದು ಆಗ್ರಹಿಸಿದರು.

ಸಮಿತಿಯ ಗೌರವಾಧ್ಯಕ್ಷ ಎಂ.ಚಂದ್ರಶೇಖರ್, ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಪ್ರಶಾಂತ್ ಆರ್ಯ, 
ದಲಿತ ಪ್ರಗತಿಪರ ಒಕ್ಕೂಟಗಳ ಸಂಚಾಲಕ ಪಿ.ರಾಜು, ನಾಯಕರ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ದ್ಯಾವಪ್ಪನಾಯಕ, ಉದ್ಯೋಗ ಆಕಾಂಕ್ಷಿಗಳಾದ ಜಯಶ್ರೀ, ಸುಷ್ಮಿತಾ ಹಾಗೂ ಶಿವಕುಮಾರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.