ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತತ್ವಶಾಸ್ತ್ರ ವಿಭಾಗ; ವಿದ್ವಾಂಸರ ನೇಮಕಕ್ಕೆ ಚಿಂತನೆ

ರಾಮಾನುಜಾಚಾರ್ಯರ ತತ್ವ ಚಿಂತನೆ ಕುರಿತ ವಿಚಾರ ಸಂಕಿರಣದಲ್ಲಿ ಮೈಸೂರು ವಿ.ವಿ ಕುಲಪತಿ
Last Updated 15 ಅಕ್ಟೋಬರ್ 2019, 18:30 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ತತ್ವಶಾಸ್ತ್ರ ವಿಭಾಗವು 103 ವರ್ಷಗಳಷ್ಟು ಹಳೆಯದು. ಈಗ ವಿದ್ವಾಂಸರನ್ನು ಇಲ್ಲಿಗೆ ನೇಮಕ ಮಾಡುವ ಮೂಲಕ ವಿಭಾಗವನ್ನು ಉಳಿಸಬೇಕಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ತಿಳಿಸಿದರು.

ವಿಭಾಗದ ವತಿಯಿಂದ ಮಾನಸಗಂಗೋತ್ರಿಯ ಇಎಂಎಂಆರ್‌ಸಿ ಸಭಾಂಗಣದಲ್ಲಿ ಮಂಗಳವಾರ ಆರಂಭವಾದ ‘ತತ್ವಶಾಸ್ತ್ರ, ಧರ್ಮ ಮತ್ತು ಸಮಾಜದಲ್ಲಿ ಶ್ರೀ ರಾಮಾನುಜರ ಸ್ಥಾನ’ ಕುರಿತ 3 ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಇತ್ತೀಚೆಗೆ ಅಧ್ಯಾಪಕರ ನೇಮಕಾತಿ ನಡೆದಿಲ್ಲ. ಇಲ್ಲಿ ಬೋಧಕ ಸಿಬ್ಬಂದಿ ಕೊರತೆ ಇದೆ. ಆದಷ್ಟು ಶೀಘ್ರ ವಿದ್ವಾಂಸರನ್ನು ನೇಮಕ ಮಾಡುವ ಚಿಂತನೆ ಇದೆ ಎಂದರು.

ರಾಮಾನುಜಾಚಾರ್ಯರು ಅಸಾಮಾನ್ಯ ವೇದಾಂತಿಗಳಾಗಿದ್ದರು. ಭಕ್ತಿಯೇ ಇವರ ಧರ್ಮವಾಗಿತ್ತು. ಬ್ರಹ್ಮಸೂತ್ರಗಳ ಇವರು ಬರೆದ ಭಾಷ್ಯ ಇಂದಿಗೂ ಪ್ರಸ್ತುತ ಎನಿಸಿದೆ ಎಂದು ಅಭಿಪ್ರಾಯಪಟ್ಟರು.

ಇವರೊಬ್ಬ ಕ್ರಾಂತಿಕಾರಿ ಸಮಾಜ ಸುಧಾರಕರಾಗಿದ್ದರು. ದೀನ ದಲಿತರ ಹಕ್ಕುಗಳಿಗಾಗಿ ಹೋರಾಟ ನಡೆಸಿದರು. ಇವರೊಬ್ಬ ಮಹಾನ್ ಮಾನವತಾವಾದಿ ಎಂದು ಹೇಳಿದರು.

ಇವರ ತತ್ವಗಳು ಯುವಪೀಳಿಗೆಗೆ ಬೇಕಿದೆ. ಯುವಕರಲ್ಲಿ ಚಾರಿತ್ರ್ಯ ಮೂಡಿಸುವುದಕ್ಕೆ ಇವರ ತತ್ವವನ್ನು ಅವರಿಗೆ ಮುಟ್ಟಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ವಿಚಾರ ಸಂಕಿರಣ ಉದ್ಘಾಟಿಸಿದ ಮಹಾರಾಜ ಸಂಸ್ಕೃತ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಭಾಷ್ಯಂ ಸ್ವಾಮೀಜಿ ಮಾತನಾಡಿ, ‘ಎಲ್ಲ ಧರ್ಮದ ದಾರ್ಶನಿಕರು ಹೇಳಿರುವುದು ಒಂದೇ. ಒಬ್ಬೊಬ್ಬರು ಒಂದು ಹಾದಿಯನ್ನು ಹೇಳಿದ್ದಾರೆ. ಆದರೆ, ಎಲ್ಲರ ಗುರಿಯೂ ಪರಮಾತ್ಮನ ಸಾಕ್ಷಾತ್ಕಾರವೇ ಆಗಿದೆ’ ಎಂದು ಹೇಳಿದರು.

ಶಂಕರಾಚಾರ್ಯರು ತತ್ವ, ಸಿದ್ಧಾಂತಗಳನ್ನು ಬೋಧಿಸದೇ ಇದ್ದಿದ್ದರೆ ಮುಂದೆ ಬಹಳ ಕಷ್ಟವಾಗುತ್ತಿತ್ತು. ಇವರು ಉಪನಿಷತ್ತಿನ ಜ್ಞಾನಪರಂಪರೆಯನ್ನು ಉಳಿಸಿದರು. ನಂತರ, ಬಂದ ರಾಮಾನುಜಾಚಾರ್ಯ ಹಾಗೂ ಮಧ್ವಾಚಾರ್ಯರು ತಮ್ಮದೇ ಸಿದ್ಧಾಂತ ಪ್ರತಿಪಾದಿಸಿದರು. ಆದರೆ, ಎಲ್ಲರ ಗುರಿಯೂ ಪರಮಾತ್ಮನನ್ನು ಕಾಣುವುದೇ ಆಗಿದೆ’ ಎಂದು ಅಭಿಪ್ರಾಯಪಟ್ಟರು.

ಇವರು ಬರೆದ 9 ಪುಸ್ತಕಗಳು ನವರತ್ನಗಳು ಎಂಬ ಹೆಸರಿಗೆ ಭಾಜನವಾಗಿದೆ. ಇವರು ಹೊಯ್ಸಳ ದೊರೆ ವಿಷ್ಣುವರ್ಧನನಿಗೆ ಪ್ರೇರಣೆ ನೀಡಿ ಅತ್ಯುತ್ತಮ ದೇಗುಲಗಳು ನಿರ್ಮಾಣವಾಗುವಂತೆ ಮಾಡಿದರು ಎಂದು ಹೇಳಿದರು.

ಬ್ರಹ್ಮನ ಕರುಣೆ ಎಲ್ಲ ಜಾತಿಯವರಿಗೆ ಸಿಗುತ್ತದೆ. ಇದಕ್ಕೆ ಬಡವ ಮತ್ತು ಶ್ರೀಮಂತ ಎಂಬ ಬೇಧ ಇಲ್ಲ ಎಂದು ಅವರು ಪ್ರತಿಪಾದಿಸಿದರು. ಆದರೆ, ಇದನ್ನು ಪಡೆಯಲು ಸಚ್ಚಾರಿತ್ರ್ಯ ಹಾಗೂ ಭಕ್ತಿ ಬೇಕು ಎಂದು ಅವರು ವಿವರಿಸಿದರು.

ವಿದ್ವಾಂಸರಾದ ಪ್ರೊ.ಎ.ವಿ.ನರಸಿಂಹಮೂರ್ತಿ, ಮೈಸೂರು ವಿ.ವಿ ಕುಲಸಚಿವರಾದ ಪ್ರೊ.ಆರ್.ಶಿವಪ್ಪ, ಮಹದೇವನ್, ಸಹಾಯಕ ಪ್ರಾಧ್ಯಾಪಕ ಡಾ.ಎಂ.ಡೇನಿಯಲ್ ಇದ್ದರು.

ದೇಶದ ವಿವಿಧ ರಾಜ್ಯಗಳಿಂದ ಬಂದಿದ್ದ ವಿದ್ವಾಂಸರು ರಾಮಾನುಜಾಚಾರ್ಯರನ್ನು ಕುರಿತು ತಮ್ಮ ವಿಚಾರಗಳನ್ನು ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT