ಭಾನುವಾರ, ನವೆಂಬರ್ 29, 2020
19 °C

ರ‍್ಯಾಪಿಡೊ ಬೈಕ್‌ ಚಾಲಕನ ಪುತ್ರಿಗೆ 11 ಚಿನ್ನ, ಅಂಧ ವಿದ್ಯಾರ್ಥಿನಿಗೆ 2 ಪದಕ

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಅಪ್ಪ, ನೀನು ಇವತ್ತು ನನ್ನ ಜೊತೆಗಿರಬೇಕಿತ್ತು. ನನ್ನ ಕೈಯಲ್ಲೀಗ ಎರಡು ಚಿನ್ನದ ಪದಕಗಳಿವೆ. ಈ ಕ್ಷಣಕ್ಕಾಗಿ ನೀನು ಎಷ್ಟೊಂದು ಕುತೂಹಲದಿಂದ ಕಾಯುತ್ತಿದ್ದೆ. ಎಲ್ಲಿಂದಲೂ ನೀನು ನೋಡುತ್ತಿರಬಹುದು. ಐ ಲವ್‌ ಯೂ ಅಪ್ಪ’

–ಹೀಗೆಂದು ಭಾವುಕರಾಗಿ ತಡವರಿಸುತ್ತಾ ಪದಕಗಳನ್ನು ಮುಟ್ಟಿದ್ದು ಬೆಂಗಳೂರಿನ ಕೋಡಿಗೆಹಳ್ಳಿ ನಿವಾಸಿ ಕಾವ್ಯಾ ಎಸ್‌.ಭಟ್‌. ಪಕ್ಕದಲ್ಲಿದ್ದ ತಾಯಿ ರವಿಕಲಾ ಭಟ್‌ ಕಣ್ಣೀರಾದರು.

ಅಂದಹಾಗೆ ಕಾವ್ಯಾ ಅವರಿಗೆ ಬಾಲ್ಯದಿಂದಲೇ ಎರಡೂ ಕಣ್ಣು ಕಾಣಿಸುವುದಿಲ್ಲ. ಮೂರು ವಾರಗಳ ಹಿಂದೆಯಷ್ಟೇ ಇವರ ತಂದೆ ಶ್ರೀನಿವಾಸ್‌ ಭಟ್‌ ಬ್ರೇನ್‌ ಟ್ಯೂಮರ್‌ನಿಂದ ನಿಧನರಾದರು.

ಈ ವಿದ್ಯಾರ್ಥಿನಿಯು ಎಂ.ಎ. ರಾಜ್ಯಶಾಸ್ತ್ರದಲ್ಲಿ ಎರಡನೇ ಸ್ಥಾನ‌ ಪಡೆದಿದ್ದು, ಮೈಸೂರು ವಿಶ್ವವಿದ್ಯಾಲಯದ 100ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದರು.

‘ಸಂಗೀತ ಕ್ಷೇತ್ರದಲ್ಲೂ ನಾನು ಸಾಧನೆ ಮಾಡಬೇಕೆಂಬುದು ಅಪ್ಪನ ಆಸೆಯಾಗಿತ್ತು. ಅದರಂತೆ ಸಂಗೀತದಲ್ಲೂ ಜೂನಿಯರ್ ಹಾಗೂ ಸೀನಿಯರ್‌ ಪೂರೈಸಿದ್ದೇನೆ. ಉಪನ್ಯಾಸಕಿ ಆಗಬೇಕೆಂಬುದು ನನ್ನ ಗುರಿ’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಕಾವ್ಯಾ ಅವರು ವಿಶ್ವವಿದ್ಯಾಲಯದಲ್ಲಿ ಯಾರ ಸಹಾಯ ಪಡೆಯದೇ ಕಂಪ್ಯೂಟರ್‌ನಲ್ಲಿ ನಾಲ್ಕೂ ಸೆಮಿಸ್ಟರ್ ಪರೀಕ್ಷೆ ಬರೆದಿದ್ದಾರೆ. ಪದವಿಯಲ್ಲಿ ಸ್ಕ್ರೈಬ್‌ ನೆರವು ಪಡೆದಿದ್ದರು.

ಅತಿಹೆಚ್ಚು ಪದಕ: ಮೈಸೂರಿನ ಆರ್‌.ರೂಪಿಣಿ ಅವರು ಎಂ.ಎಸ್ಸಿ ರಾಸಾಯನಿಕ ವಿಜ್ಞಾನದಲ್ಲಿ 11 ಸ್ವರ್ಣ ಪದಕ ತಮ್ಮದಾಗಿಸಿಕೊಂಡಿಸಿದ್ದಾರೆ. ಈ ಬಾರಿ ಘಟಿಕೋತ್ಸವದಲ್ಲಿ ಹೆಚ್ಚು ಪದಕ ಪಡೆದ ವಿದ್ಯಾರ್ಥಿನಿ ಕೂಡ. ಇವರ ತಂದೆ ರ‍್ಯಾಪಿಡೊ ಬೈಕ್‌ ಚಾಲಕರಾಗಿ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ತಾಯಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಹುಣಸೂರಿನ ಬಡಕುಟುಂಬದ ಸುನೀತಾ ಎಂ.ಎ ಕನ್ನಡದಲ್ಲಿ 7 ಪದಕ ತಮ್ಮದಾಗಿಸಿಕೊಂಡರು.

***
ಅನಾರೋಗ್ಯದ ನಡುವೆಯೂ ಶಿಕ್ಷಣದ ಬಗ್ಗೆ ಅಪ್ಪ ಮಾರ್ಗದರ್ಶನ ನೀಡುತ್ತಿದ್ದರು. ಈಗ ಅಪ್ಪ ಹಾಗೂ ಅವರ ಮಾರ್ಗದರ್ಶನ ಎರಡನ್ನೂ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ 

-ಕಾವ್ಯಾ ಭಟ್‌, 2 ಪದಕ ವಿಜೇತೆ, ರಾಜ್ಯಶಾಸ್ತ್ರ

***

ಪೋಷಕರ ಕಷ್ಟದ ಬದುಕೇ ನನಗೆ ಪ್ರೇರಣೆ. ಜೊತೆಗೆ ಉಪನ್ಯಾಸಕರ ಮಾರ್ಗದರ್ಶನ ಈ ಸಾಧನೆ ಮಾಡಲು ಸಾಧ್ಯವಾಗಿದೆ

-ಆರ್‌.ರೂಪಿಣಿ, 11 ಪದಕ ವಿಜೇತೆ, ರಾಸಾಯನಿಕ ವಿಜ್ಞಾನ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.