ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

21.75 ಲಕ್ಷ ಬಡವರಿಗೆ ಪಡಿತರ

ಆಹಾರ ಭದ್ರತೆಗಾಗಿ ಕೈ ಜೋಡಿಸಿದ ಕೇಂದ್ರ; ಅಕ್ಕಿ, ಬೇಳೆ ವಿತರಣೆ
Last Updated 28 ಮೇ 2020, 13:26 IST
ಅಕ್ಷರ ಗಾತ್ರ

ಮೈಸೂರು: ಲಾಕ್‌ಡೌನ್‌ನ ಸಂಕಷ್ಟದಲ್ಲಿ ಸಿಲುಕಿರುವ ಬಡ ಕುಟುಂಬಗಳ ಹಸಿವು ನೀಗಿಸಲು ಕೇಂದ್ರ ಸರ್ಕಾರವೂ ಕೈ ಜೋಡಿಸಿದೆ.

ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ ಪ್ರತಿ ಕುಟುಂಬದ ಒಬ್ಬ ವ್ಯಕ್ತಿಗೆ ತಿಂಗಳಿಗೆ ತಲಾ 5 ಕೆ.ಜಿ. ಅಕ್ಕಿ ಹಾಗೂ 1 ಕಾರ್ಡ್‌ಗೆ 1 ಕೆ.ಜಿ ತೊಗರಿ ಬೇಳೆಯನ್ನು ‘ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಅನ್ನ’ ಯೋಜನೆಯಡಿ ವಿತರಿಸಿದೆ.

ಏಪ್ರಿಲ್‌, ಮೇ ತಿಂಗಳ ಅಕ್ಕಿ ಹಾಗೂ ಏಪ್ರಿಲ್ ತಿಂಗಳ ತೊಗರಿ ಬೇಳೆಯನ್ನು ಮೇ 1ರಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ಉಚಿತವಾಗಿ ವಿತರಿಸಲಾಗಿದೆ. ಬೇರೆ ಜಿಲ್ಲೆಗಳ ಕಾರ್ಡ್‌ದಾರರಿಗೂ ಪಡಿತರ ನೀಡಲಾಗಿದೆ. ಶೇ 98ರಷ್ಟು ವಿತರಣೆಯ ಗುರಿ ಮುಟ್ಟಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮೈಸೂರು ಜಿಲ್ಲಾ ಜಂಟಿ ನಿರ್ದೇಶಕ ಪಿ.ಶಿವಣ್ಣ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಮೈಸೂರು ಜಿಲ್ಲೆಯಲ್ಲಿ 7,06,197 ಕುಟುಂಬಗಳು ಬಿಪಿಎಲ್ ಪಡಿತರ ಚೀಟಿ ಹೊಂದಿವೆ. 22.50 ಲಕ್ಷ ಫಲಾನುಭವಿಗಳಿದ್ದಾರೆ. ಈಗಾಗಲೇ 21,26,251 ಜನರಿಗೆ ಕೇಂದ್ರದ ಪಡಿತರ ನೀಡಲಾಗಿದೆ. ಹೊರ ಜಿಲ್ಲೆಗಳ 49 ಸಾವಿರಕ್ಕೂ ಹೆಚ್ಚು ಬಿಪಿಎಲ್‌ ಪಡಿತರ ಚೀಟಿ ಹೊಂದಿದವರಿಗೂ ಕೇಂದ್ರದ ಪಡಿತರ ಕೊಡುವ ಮೂಲಕ ಗುರಿ ಸಾಧಿಸಲಾಗಿದೆ’ ಎಂದು ಹೇಳಿದರು.

‘ಕೇಂದ್ರದ ಪಡಿತರ ವಿತರಿಸುವಲ್ಲಿ ಮೈಸೂರು ಜಿಲ್ಲೆ ರಾಜ್ಯದಲ್ಲೇ 4ನೇ ಸ್ಥಾನದಲ್ಲಿದೆ. ಈಗಿನ ಲೆಕ್ಕಾಚಾರದಂತೆ ಶೇ 98ರಷ್ಟು ಕುಟುಂಬಗಳಿಗೆ ಅಕ್ಕಿ, ತೊಗರಿಬೇಳೆ ನೀಡಿದ್ದೇವೆ. ಮೇ ತಿಂಗಳ ತೊಗರಿ ಬೇಳೆಯನ್ನು ಜೂನ್‌ ತಿಂಗಳ ಪಡಿತರ ವಿತರಿಸುವ ಸಂದರ್ಭ ಕೊಡಲಾಗುವುದು’ ಎಂದು ತಿಳಿಸಿದರು.

ಎರಡನೇ ಸ್ಥಾನ: ರಾಜ್ಯ ಸರ್ಕಾರ ಲಾಕ್‌ಡೌನ್‌ನ ಸಂಕಷ್ಟದಲ್ಲಿದ್ದ ಬಡವರಿಗೆ ಏಪ್ರಿಲ್‌–ಮೇ ತಿಂಗಳ ಪಡಿತರವನ್ನು ಒಮ್ಮೆಗೆ ವಿತರಿಸಿತ್ತು. ಬಿಪಿಎಲ್‌ ಪಡಿತರ ಚೀಟಿ ಹೊಂದಿದ್ದ ಒಬ್ಬ ವ್ಯಕ್ತಿಗೆ ಎರಡು ತಿಂಗಳ ಪಡಿತರವಾಗಿ 10 ಕೆ.ಜಿ. ಅಕ್ಕಿ ನೀಡಿದರೆ, ಒಂದು ಕಾರ್ಡ್‌ಗೆ 2 ಕೆ.ಜಿ ಗೋಧಿಯಂತೆ 4 ಕೆ.ಜಿ ಗೋಧಿ ನೀಡಿತ್ತು.

ಈ ವಿತರಣೆಯಲ್ಲಿ ಜಿಲ್ಲೆ ರಾಜ್ಯದಲ್ಲೇ ಎರಡನೇ ಸ್ಥಾನ ಪಡೆದಿದೆ. ಶೇ 98ರಷ್ಟು ಕುಟುಂಬಗಳಿಗೆ ಪ‍ಡಿತರವನ್ನು ವಿತರಿಸಿದೆ ಎಂದು ಶಿವಣ್ಣ ಮಾಹಿತಿ ನೀಡಿದರು.

75,724 ವಲಸೆ ಕಾರ್ಮಿಕರು

‘ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಅನ್ನ’ ಯೋಜನೆಯಡಿ ಪಡಿತರ ಚೀಟಿ ಹೊಂದಿಲ್ಲದ ಪ್ರತಿಯೊಬ್ಬ ವಲಸೆ ಕಾರ್ಮಿಕರಿಗೂ ಒಮ್ಮೆ 5 ಕೆ.ಜಿ. ಅಕ್ಕಿ ವಿತರಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.

‘ಜಿಲ್ಲೆಯಲ್ಲಿ 75,724 ವಲಸೆ ಕಾರ್ಮಿಕರಿದ್ದಾರೆ. ಇವರಿಗಾಗಿ 7,527 ಕ್ವಿಂಟಲ್‌ ಅಕ್ಕಿಯನ್ನು ಮೇ, ಜೂನ್‌ ತಿಂಗಳಿಗಾಗಿ ಈಗಾಗಲೇ ಎತ್ತುವಳಿ ಮಾಡಿದ್ದೇವೆ. ಆಧಾರ್ ಕಾರ್ಡ್‌ ಇದ್ದರೆ ಸಾಕು. ಎಲ್ಲಿಯೂ ಅಕ್ಕಿ ಪಡೆಯದಿದ್ದರೇ, ನಮ್ಮಲ್ಲೇ ಅಕ್ಕಿ ಕೊಡುತ್ತೇವೆ. ಅವರ ಮೊಬೈಲ್‌ಗೆ ಬರುವ ಒಟಿಪಿ ನಂಬರ್ ಹೇಳಿದರೆ ಸಾಕು, ಉಚಿತವಾಗಿ ವಿತರಿಸುತ್ತೇವೆ’ ಎಂದು ಶಿವಣ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT