ಗುರುವಾರ , ನವೆಂಬರ್ 21, 2019
22 °C

ಮೈಸೂರು: ಆರ್‍ಸಿಇಪಿ ಒಪ್ಪಂದಕ್ಕೆ ಸಹಿ ಬೇಡ

Published:
Updated:
Prajavani

ಮೈಸೂರು: ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುಗಾರಿಕೆ (ಆರ್‍ಸಿಇಪಿ) ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತ ಸರ್ಕಾರ ಸಹಿ ಹಾಕಬಾರದು ಎಂದು ಸ್ವದೇಶಿ ಜಾಗರಣ ಮಂಚ್ ಒತ್ತಾಯಿಸಿದೆ.

ಈ ಒಪ್ಪಂದವು ಕೃಷಿ, ಹೈನುಗಾರಿಕೆ ಮತ್ತು ಇದಕ್ಕೆ ಪೂರಕವಾದ ಕಾರ್ಖಾನೆಗಳಿಗೆ ದೊಡ್ಡ ಮಟ್ಟದ ಪೆಟ್ಟು ನೀಡಲಿದೆ. ಹೀಗಾಗಿ, ಒಪ್ಪಂದದಿಂದ ಭಾರತ ದೂರ ಉಳಿಯಬೇಕು ಎಂದು ಸಂಘಟನೆಯ ಅಖಿಲ ಭಾರತೀಯ ಮಟ್ಟದ ಪದಾಧಿಕಾರಿ ಸತೀಶ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಒಟ್ಟು 16 ರಾಷ್ಟ್ರಗಳ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಇದಾಗಿದೆ. ಇಲ್ಲಿನ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ದರದಲ್ಲಿ ಹಾಲು ಹಾಗೂ ಅದರ ಉತ್ಪನ್ನಗಳು ಮುಕ್ತವಾಗಿ ದೇಶದ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಇದರಿಂದ ಇಲ್ಲಿನ ರೈತರಿಗೆ ನಷ್ಟವಾಗಲಿದೆ ಎಂದರು.

ಗ್ರಾಹಕರು ಸಹಜವಾಗಿಯೇ ಅಗ್ಗದ ದರದ ಹಾಲು ಹಾಗೂ ಅದರ ಉತ್ಪನ್ನಗಳತ್ತ ವಾಲುತ್ತಾರೆ. ಇದರಿಂದ ದೇಶಿ ಹಾಲಿನ ಬೇಡಿಕೆ ಕುಸಿಯಲಿದೆ. ಇದು ಒಂದು ರೀತಿಯಲ್ಲಿ ಮಾರಕ ಒಪ್ಪಂದ ಎಂದು ಅವರು ಟೀಕಿಸಿದರು.

ಇದರಿಂದ ಸಹಜವಾಗಿಯೇ ಇಲ್ಲಿನ ರೈತರು ನಿರುದ್ಯೋಗಿಗಳಾಗುತ್ತಾರೆ. ಈಗಾಗಲೇ ಹಲವು ಕೈಗಾರಿಕೆಗಳು ಮುಚ್ಚಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಒಪ್ಪಂದಕ್ಕೆ ಸಹಿ ಹಾಕಿದರೆ ನಿರುದ್ಯೋಗದ ಪ್ರಮಾಣ ದುಪ್ಪಟ್ಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಆಗಸ್ಟ್‌ನಲ್ಲಿ ಕೇಂದ್ರ ವಾಣಿಜ್ಯ ಸಚಿವ ಪಿಯೂಶ್‌ ಗೋಯಲ್ ಅವರು ಹಲವು ಕೈಗಾರಿಕೋದ್ಯಮಿಗಳೊಂದಿಗೆ ಸಭೆ ನಡೆಸಿ ಒಪ್ಪಂದದ ಸಾಧಕ, ಬಾಧಕಗಳನ್ನು ಚರ್ಚಿಸಿದರು. ಬಹುತೇಕ ಉದ್ಯಮಿಗಳು ಈ ಯೋಜನೆಯಿಂದ ತಮಗೆ ನಷ್ಟವಾಗಲಿದೆ ಎಂದು ಭೀತಿ ವ್ಯಕ್ತಪಡಿಸಿದರು. ಪರಿಸ್ಥಿತಿ ಹೀಗಿದ್ದರೂ, ಒಪ್ಪಂದಕ್ಕೆ ಸಹಿ ಹಾಕುವುದು ಬೇಡ ಎಂದು ಅವರು ಆಗ್ರಹಿಸಿದರು.

ಸಂಘಟನೆಯ ಪದಾಧಿಕಾರಿಗಳಾದ ಡಾ.ಪಾಂಡುರಂಗ ವಿಠ್ಠಲ, ಎನ್.ಆರ್.ಮಂಜುನಾಥ್, ಶ್ರೀವತ್ಸ ಇದ್ದರು.

ಪ್ರತಿಕ್ರಿಯಿಸಿ (+)