ಶುಕ್ರವಾರ, ಆಗಸ್ಟ್ 12, 2022
24 °C
‘ವೈದ್ಯರ ನಡೆ ಹಳ್ಳಿಯ ಕಡೆ‌’ ಕಾರ್ಯಕ್ರಮ ಯಶಸ್ವಿ

ಮೈಸೂರು ಜಿಲ್ಲೆಯಲ್ಲಿ ಎಲ್ಲರಿಗೂ ಲಸಿಕೆ: ಎಸ್.ಟಿ.ಸೋಮಶೇಖರ್ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಜಿಲ್ಲೆಯ ಎಲ್ಲರಿಗೂ ಕೋವಿಡ್ ಲಸಿಕೆ ದೊರೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಭರವಸೆ ನೀಡಿದರು.‌

ಇಲ್ಲಿನ ಸುತ್ತೂರು ಮಠಕ್ಕೆ ಮಂಗಳವಾರ ಭೇಟಿ ನೀಡಿದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು.

ಲಸಿಕೆಯನ್ನು ನೀಡುವುದರಲ್ಲಿ ರಾಜ್ಯದಲ್ಲಿಯೇ ಮೈಸೂರು ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಪೂರ್ಣ ಪ್ರಮಾಣದಲ್ಲಿ ಎಲ್ಲರಿಗೂ ಲಸಿಕೆ ನೀಡಲು ಜಿಲ್ಲಾ ವೈದ್ಯಾಧಿಕಾರಿಗಳಿಗೆ ತಿಳಿಸಲಾಗಿದೆ. ಜೂನ್ 21ರಿಂದ 18ರಿಂದ 44 ವರ್ಷದ ಎಲ್ಲರಿಗೂ ಲಸಿಕೆ ನೀಡಲು ಘೋಷಣೆಯಾಗಿರುವುದರಿಂದ ಆದಷ್ಟು ಬೇಗ ಲಸಿಕೆ ಎಲ್ಲರಿಗೂ ಸಿಗಲಿದೆ ಎಂದು ತಿಳಿಸಿದರು.

‘ವೈದ್ಯರ ನಡೆ ಹಳ್ಳಿಯ ಕಡೆ‌’ ಕಾರ್ಯಕ್ರಮವು ಯಶಸ್ವಿಯಾಗಿದ್ದು, ಮೊದಲ ಹಂತ ಪೂರ್ಣಗೊಂಡಿದೆ. 2ನೇ ಹಂತಕ್ಕೆ ಮುಖ್ಯಮಂತ್ರಿಗಳು ಅನುಮತಿ ಕೊಟ್ಟ ನಂತರ ಬಹುತೇಕ ಎಲ್ಲ ಕಡೆ ವೈದ್ಯರು ಹೋಗುತ್ತಿರುವುದರಿಂದ ಕೊರೊನಾ ಪರೀಕ್ಷೆಯ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಈ ವಾರದಲ್ಲಿಯೇ 2ನೇ ಹಂತವೂ ಮುಕ್ತಾಯವಾಗಲಿದೆ ಎಂದು ಹೇಳಿದರು.

ರಾಜ್ಯಸರ್ಕಾರದ ಹಣಕಾಸು ಸ್ಥಿತಿಯ ಹೇಗೇ ಇದ್ದರೂ, ಕೋವಿಡ್‌ನಿಂದ ಕುಟುಂಬದ ಸದಸ್ಯರನ್ನು ಕಳೆದುಕೊಂಡ ಬಿಪಿಎಲ್‌ ಪಡಿತರ ಚೀಟಿ ಹೊಂದಿದ ಕುಟುಂಬದವರಿಗೆ ₹ 1 ಲಕ್ಷ ಪರಿಹಾರ ಧನ ನೀಡಲು ತೀರ್ಮಾನಿಸಲಾಗಿದೆ. ಇಂತಹ ಕಷ್ಟ ಕಾಲದಲ್ಲಿ ಮುಖ್ಯಮಂತ್ರಿ ಬಿ‌.ಎಸ್.ಯಡಿಯೂರಪ್ಪ ಅವರದು ದಿಟ್ಟ ನಿರ್ಧಾರ ಎಂದು ಅವರು ಸ್ವಾಗತಿಸಿದರು.

ಸಾವಿನ ಪ್ರಮಾಣ ಏರಿಕೆಯಾಗುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಈಗ ‘ಚೆಸ್ಟ್‌ ಎಕ್ಸರೆ’ ಮೂಲಕ ಪತ್ತೆಯಾದ ಕೊರೊನಾ ಸೋಂಕಿತರ ಸಾವನ್ನು ಕೋವಿಡ್‌ ಸಾವಿನಲ್ಲಿ ಸೇರಿಸಲಾಗುತ್ತಿದೆ. ಇದರಿಂದ ಸಾವಿನ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಅನ್ನಿಸುತ್ತಿದೆ’ ಎಂದು ಹೇಳಿದರು.

ಜೂನ್ 16, 17ರಂದು ಕೆ.ಆರ್.ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಪೂರ್ಣ ಕೋವಿಡ್‌ ಪರೀಕ್ಷೆ ನಡೆಯುವ ಕಾರ್ಯಕ್ರಮ ಒಂದು ಪೈಲಟ್ ಯೋಜನೆ. ಇದು ಯಶಸ್ವಿಯಾದರೆ ಎಲ್ಲ ಕ್ಷೇತ್ರಗಳಿಗೂ ಇದನ್ನು ವಿಸ್ತರಿಸಲಾಗುವುದು ಎಂದು ಅವರು ತಿಳಿಸಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ, ಶಾಸಕ ಎಲ್.ನಾಗೇಂದ್ರ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ, ಅರಣ್ಯ ವಸತಿ ಹಾಗೂ ವಿಹಾರಧಾಮಗಳ ಅಧ್ಯಕ್ಷ ಅಪ್ಪಣ್ಣ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತಕುಮಾರ್ ಗೌಡ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು