‘ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿದ ಖಾಸಗಿ ಪ್ರಭಾವ’

7
ಎನ್‌ಐಆರ್‌ಡಿಪಿಆರ್ ನಿರ್ದೇಶಕ ಡಬ್ಲ್ಯು.ಆರ್‌.ರೆಡ್ಡಿ ಅಭಿಪ್ರಾಯ

‘ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿದ ಖಾಸಗಿ ಪ್ರಭಾವ’

Published:
Updated:
ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ (ಎಡದಿಂದ) ಪ್ರೊ.ವೈ.ಶ್ರೀಕಾಂತ್, ಡಾ.ಡಬ್ಲ್ಯು.ಆರ್.ರೆಡ್ಡಿ, ಪ್ರೊ.ಅವಿನಾಶ್ ಕುಮಾರ್ ಸಿಂಗ್, ಪ್ರೊ. ಮಲ್ಲಿ ಗಾಂಧಿ ಪಾಲ್ಗೊಂಡಿದ್ದರು

ಮೈಸೂರು: ಗ್ರಾಮೀಣಾಭಿವೃದ್ಧಿಗೆ ಇರುವ ಏಕೈಕ ಮಾರ್ಗವೆಂದರೆ ಅದು ಶಿಕ್ಷಣ ಎಂದು ಹೈದರಾಬಾದ್‌ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ರಾಷ್ಟ್ರೀಯ ತರಬೇತಿ ಸಂಸ್ಥೆಯ (ಎನ್‌ಐಆರ್‌ಡಿಪಿಆರ್) ನಿರ್ದೇಶಕ ಡಾ.ಡಬ್ಲ್ಯು.ಆರ್‌.ರೆಡ್ಡಿ ಅವರು ಬುಧವಾರ ಅಭಿಪ್ರಾಯಪಟ್ಟರು.

ಪ್ರಾದೇಶಿಕ ಶಿಕ್ಷಣ ಸಂಸ್ಥೆಯು ಅಂತರ ವಿಶ್ವವಿದ್ಯಾಲಯ ಶಿಕ್ಷಕರ ತರಬೇತಿ ಕೇಂದ್ರದ ಸಹಯೋಗದೊಂದಿಗೆ ಆಯೋಜಿಸಿದ್ದ ‘ಗ್ರಾಮೀಣ ಮತ್ತು ಬುಡಕಟ್ಟು ಜನರು ವಾಸಿಸುವ ಪ್ರದೇಶಗಳಲ್ಲಿರುವ ಶಿಕ್ಷಕರು ಮತ್ತು ಶಿಕ್ಷಕ ತರಬೇತುದಾರರು ಎದುರಿಸುತ್ತಿರುವ ಸಮಸ್ಯೆಗಳು, ಸವಾಲುಗಳು’ ಕುರಿತ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಗ್ರಾಮೀಣಾಭಿವೃದ್ಧಿಯ ಹೆಸರಿನಲ್ಲಿ ಕಳೆದ ಐದು ದಶಕಗಳಲ್ಲಿ ವಿವಿಧ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತಂದಿವೆ. ಆದರೆ ಯಾವುದೂ ಶೇ 100ರಷ್ಟು ಯಶಸ್ವಿಯಾಗಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಯಾದರೆ ಗ್ರಾಮಗಳ ಅಭಿವೃದ್ಧಿ ಸಾಧ್ಯ ಎಂದರು.

ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿಯವರ ಪ್ರಭಾವ ಹೆಚ್ಚುತ್ತಿದ್ದು, ಸರ್ಕಾರಿ ಶಾಲೆಗಳಲ್ಲಿನ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಸರ್ಕಾರಿ ಶಾಲೆಗಳು ಕೇವಲ ದಲಿತರು ಮತ್ತು ಬಡವರಿಗೆ ಮಾತ್ರ ಎನ್ನುವಂತಾಗಿದೆ. ಈ ಧೋರಣೆ ಬದಲಾಗಬೇಕು ಎಂದು ಹೇಳಿದರು.

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಲಿ ಎಂದು ಹೆತ್ತವರು ದುಬಾರಿ ಹಣ ತೆತ್ತು ಖಾಸಗಿ ಶಾಲೆಗಳಿಗೆ ಕಳುಹಿಸುತ್ತಾರೆ. ಇದೇ ಕಾರಣದಿಂದ ಹಲವು ಕುಟುಂಬಗಳಿಗೆ ಬಡತನ ರೇಖೆಗಿಂತ ಮೇಲೆ ಬರಲು ಸಾಧ್ಯವಾಗುವುದಿಲ್ಲ ಎಂದು ಖೇದ ವ್ಯಕ್ತಪಡಿಸಿದರು.

ಸರ್ಕಾರಿ ಶಾಲೆಗಳಲ್ಲಿ ದೊರೆಯುವ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಿದರೆ ಮಾತ್ರ ಮುಂದಿನ ತಲೆಮಾರಿನ ಮಂದಿಯನ್ನಾದರೂ ಬಡತನ ರೇಖೆಗಿಂತ ಮೇಲೆತ್ತಲು ಸಾಧ್ಯ ಎಂದರು.

ಶಿಫಾರಸುಗಳು: ಗ್ರಾಮೀಣ ಮತ್ತು ಬುಡಕಟ್ಟು ಜನರು ವಾಸಿಸುವ ಪ್ರದೇಶಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದಕ್ಕೆ ಸಂಬಂಧಿಸಿದ ಕೆಲವೊಂದು ತೀರ್ಮಾನಗಳನ್ನು ಕಾರ್ಯಾಗಾರದಲ್ಲಿ ತೆಗೆದುಕೊಳ್ಳಲಾಯಿತು. ಈ ಶಿಫಾರಸುಗಳನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ (ಎಂಎಚ್‌ಆರ್‌ಡಿ) ಸಲ್ಲಿಸಲಾಗುವುದು ಎಂದು ಪ್ರಾದೇಶಿಕ ಶಿಕ್ಷಣ ಸಂಸ್ಥೆ ಪ್ರಾಂಶುಪಾಲ ಪ್ರೊ.ವೈ.ಶ್ರೀಕಾಂತ್ ತಿಳಿಸಿದರು.

ಶಿಕ್ಷಣದ ವಿಚಾರದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳು ಎಂಬ ಭಿನ್ನತೆ ಸಲ್ಲದು, ಗ್ರಾಮೀಣ ಪ್ರದೇಶಗಳನ್ನು ಪ್ರತ್ಯೇಕವಾಗಿ ಕಾಣಬಾರದು, ಬುಡಕಟ್ಟು ಜನರ ಜ್ಞಾನ ಮತ್ತು ಸಂಸ್ಕೃತಿಯನ್ನು ಪರಿಗಣಿಸಿ ಅವುಗಳನ್ನು ಪಠ್ಯಗಳಲ್ಲಿ ಅಳವಡಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂಬ ಶಿಫಾರಸುಗಳನ್ನು ಸಚಿವಾಲಯದ ಮುಂದಿಡಲಾಗುವುದು ಎಂದರು.

ಎನ್‌ಜಿಒ ಸೇರಿದಂತೆ ಕೆಲವು ಸಂಸ್ಥೆಗಳು ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣದ ಅಭಿವೃದ್ಧಿಗೆ ಉತ್ತಮ ಮಾದರಿಯನ್ನು ಅನುಸರಿಸುತ್ತಿದ್ದರೆ ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು, ನಿರ್ಲಕ್ಷಿತ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರ ಸಮಸ್ಯೆಗಳನ್ನು ಗುರುತಿಸಿ ಪರಿಹಾರ ಕಂಡುಕೊಳ್ಳುವುದು, ಬುಡಕಟ್ಟು ಪ್ರದೇಶದ ಜನರ ಪ್ರಾಯೋಗಿಕ ಜ್ಞಾನವನ್ನು ಗುರುತಿಸಿ ಅಗತ್ಯವಿದ್ದ ಕಡೆ ಅದನ್ನು ಬಳಸಿಕೊಳ್ಳುವುದು, ಕಾಲಕಾಲಕ್ಕೆ ಶಿಕ್ಷಕರ ಬೋಧನಾ ಸಾಮರ್ಥ್ಯದ ಮೌಲ್ಯಮಾಪನ ಮಾಡಬೇಕು ಎಂಬ ಶಿಫಾರಸು ಮಾಡಲಾಗುವುದು ಎಂದು ವಿವರಿಸಿದರು.

ನವದೆಹಲಿಯ ಎನ್‌ಐಇಪಿಎಯ ಪ್ರೊ.ಅವಿನಾಶ್ ಕುಮಾರ್ ಸಿಂಗ್, ಕಾರ್ಯಕ್ರಮದ ಸಂಯೋಜಕರಾದ ಪ್ರೊ.ಜಿ.ವಿ.ಗೋಪಾಲ್, ಪ್ರೊ.ಮಲ್ಲಿ ಗಾಂಧಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !