ಸಂಬಂಧ ಗಟ್ಟಿಗೊಳಿಸುವ ಹಬ್ಬ

7

ಸಂಬಂಧ ಗಟ್ಟಿಗೊಳಿಸುವ ಹಬ್ಬ

Published:
Updated:
Deccan Herald

ಗೌರಿ ಹಬ್ಬ ಹೆಣ್ಣುಮಕ್ಕಳಿಗೆ ಅತೀ ಸಡಗರದ ಹಬ್ಬವಾದರೆ. ಹುಡುಗರಿಗೆ ಗಣೇಶನ ಹಬ್ಬದ ಸಂಭ್ರಮ. ಯಾವ ಹಬ್ಬಕ್ಕೂ ಇಲ್ಲದ ವಿಶೇಷತೆ ಈ ಗೌರಿ ಗಣೇಶ ಹಬ್ಬಕ್ಕೆ ಇದೆ. ಅದೇನೆಂದರೆ, ಆ ಜಗದಂಬಿಕೆಯಾದ ಪಾರ್ವತಿದೇವಿ ಸಡಗರದಿಂದ ತಾನಾಗಿಯೇ ನಮ್ಮ ಮನೆಗೆ ಗೌರಿ ರೂಪದಲ್ಲಿ ಬಂದಿರುತ್ತಾಳೆ. ಪಾರ್ವತಿ ಈ ಭೂಮಿಯ ಒಡತಿ. ಸಮಗ್ರ ಬ್ರಹ್ಮಾಂಡದಲ್ಲಿ ವ್ಯಾಪಿಸಿರುವ ಈ ಶಂಕರನ ಪತ್ನಿಗೆ ಪೃಥಿವೀ ಎಂದೂ ಹೆಸರಿದೆ. (ಪೃಥಿವೀ ಎಂದರೆ ವ್ಯಾಪಿಸಿರುವವಳು ಎಂದರ್ಥ).

ಒಮ್ಮೆ ಪಾರ್ವತಿ ‘ಒಡೆಯಾ, ತಾಯಿಯ ಮನೆಗೆ ಹೋಗಿಬರುತ್ತೇನೆ, ಅನುಜ್ಞೆ ಕೊಡು’ ಎಂದು ಕೇಳುತ್ತಾಳೆ. ಆಗ ಹೋಗಿ ಬಾ ಎಂದು ಹೇಳುವ ರುದ್ರದೇವರು, ‘ಮೂರು ದಿನ ಅಂತಷ್ಟೇ ಅಲ್ಲ, ಐದು ದಿನ ಅಥವಾ ಏಳು ದಿನವಾದರೂ ಇದ್ದು ಬಾ. ನೀ ಹೊರಡು, ನಾನು ಗಣಪತಿಯ ಸಮೇತನಾಗಿ ಬರುತ್ತೇನೆ, ನಿನ್ನನ್ನು ಕರೆದೊಯ್ಯಲು ಎಂದು ಹೇಳುತ್ತಾನೆ. ಹೀಗೆ ಹೇಳಿ ವೃಷಭವನ್ನೇರಿ, ಪಾರ್ವತಿಯನ್ನೂ ಕೂಡಿಸಿಕೊಂಡು ಮಾವನ ಮನೆಗೆ - ಮೇನಕೆ, ಹಿಮವಂತರನ್ನು ಬಿಟ್ಟು ಬರುತ್ತಾರೆ ರುದ್ರದೇವರು. ಹೆಂಡತಿಯನ್ನು ಬೀಳ್ಕೊಡುವಾಗ ನಿನ್ನನ್ನು ಆರಾಧಿಸುವ ಭಕ್ತರ ಬವಣೆ ಕಳೆದು ಐಶ್ವರ್ಯ ಕರುಣಿಸು, ಅವರ ಮನೆಯ ಮಗಳಾಗಿ ನಾಲ್ಕಾರು ದಿನ ಓಡಾಡಿಕೊಂಡು ಇರು ಎಂದು ಹೇಳುತ್ತಾರೆ ಎಂಬ ಕತೆ ಆಸ್ತಿಕರ ನಂಬಿಕೆಯಾಗಿದೆ.

ರುದ್ರದೇವರಿಗೆ ತನ್ನ ನಲ್ಮೆಯ ಮಡದಿ ಪಾರ್ವತಿಯ ಮೇಲೆ ಅದೆಷ್ಟು ಪ್ರೀತಿಯೆಂದರೆ ಅವಳನ್ನು ಕರೆತರಲು ಮಾರನೆಯ ದಿನವೇ ಗಣಪತಿಯನ್ನು ಕೊಟ್ಟು ಕಳುಹಿಸುತ್ತಾರೆ. ಹೀಗಾಗಿ ತೃತೀಯಾ ತಿಥಿಯಂದು ಗೌರಿ ಹಬ್ಬ. ಅದರ ಮಾರನೆಯ ದಿವಸ ಚತುರ್ಥಿಯಂದು ಗಣಪತಿ ಹಬ್ಬ ಆಚರಿಸುವುದು ಸಹಸ್ರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.

ತಾಯಿಯ ಮನೆಗೆ ಮಗಳು ಬಂದಂತೆ, ಜಗತ್ತಿನ ತಾಯಿಯಾದ ಗೌರಿದೇವಿ ನಮ್ಮ ಮನೆಗೆ ಮಗಳಾಗಿ ಬರುತ್ತಾಳೆ. ದೇವಿ ಅನುಗ್ರಹ ಮಾಡಿದಲ್ಲಿ ನಾವು ಸಾತ್ವಿಕವಾದ ಸಂಪತ್ತಿನಿಂದ ಭರಿತರಾಗುತ್ತೇವೆ, ಸಾಧನೆಯ ಮಾರ್ಗದಲ್ಲಿ ನಡೆಯುತ್ತೇವೆ. ಹೀಗಾಗಿ, ಈ ಸ್ವರ್ಣಗೌರಿ ವ್ರತವನ್ನು ವಿನಾಯಕವ್ರತವನ್ನು ಮಣ್ಣಿನಲ್ಲಿ ಮಾಡಿದ ಮೂರ್ತಿಗಳನ್ನು ಅಲಂಕರಿಸಿ ಶ್ರದ್ಧಾ–ಭಕ್ತಿಯಿಂದ ಆಚರಿಸಬೇಕು.

ಇದು ಸ್ವರ್ಣಗೌರಿವ್ರತ, ಸ್ವರ್ಣ ಎಂದರೆ ಬಂಗಾರ. ಬಂಗಾರದಲ್ಲಿ ಪ್ರತಿಮೆಯನ್ನು ಮಾಡಿ, ಪೂಜಿಸಬೇಕು ಎಂದು ಹೇಳುತ್ತಾರೆ. ಆದರೂ ಚಿಂತೆಯಿಲ್ಲ, ನಮ್ಮ ದೇವರು, ನಮ್ಮ ದೇವತೆಯರು ಕರುಣಾಳುಗಳು, ಒಂದು ದಳ ತುಳಸಿಗೆ, ಒಂದು ಬಿಲ್ವಪತ್ರೆಗೆ, ಒಂದು ಹೂವಿಗೆ, ಒಂದು ಗರಿಕೆಗೆ, ಬಿಂದು ಗಂಗೋದಕಕ್ಕೆ ಒಲಿಯುವವರು. ಹೀಗಾಗಿ ಮಣ್ಣಿನಲ್ಲಿ ಪ್ರತಿಮೆಯನ್ನು ಮಾಡಿಸಿ, ಪೂಜಿಸಿ ಶುದ್ಧವಾದ ನೀರಿನಲ್ಲಿ ವಿಸರ್ಜಿಸುವುದು ಶ್ರೇಷ್ಠ ಕ್ರಮ. ಅಷ್ಟೇ ಅಲ್ಲ, ನೀವು ಬಂಗಾರದಲ್ಲಿ ಗೌರಿಯ ಪ್ರತಿಮೆ ಮಾಡಿಸಿದರೂ, ಮಣ್ಣಿನಲ್ಲಿ ಒಂದು ಪ್ರತಿಮೆಯನ್ನು ಮಾಡಿಸಲೇಬೇಕು. ಏಕೆಂದರೆ ಪಾರ್ವತೀದೇವಿ ಸಮಗ್ರ ಚರಾಚರ ವಸ್ತುಗಳ, ವಿಶೇಷವಾಗಿ ಭೂಮಿಯ ಒಡತಿ. ಸಮಗ್ರ ಬ್ರಹ್ಮಾಂಡದಲ್ಲಿ ಅವಳು ವ್ಯಾಪಿಸಿರುವ ಕಾರಣಕ್ಕೆ ಅವಳು ಪೃಥಿವೀ ಎಂದು ಕರೆಸಿಕೊಳ್ಳುತ್ತಾಳೆ ಎಂದು ಶ್ರೀಮಧ್ವಾಚಾರ್ಯರು ತಿಳಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !