ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಾಂತರ ಇಂದಿನದ್ದಲ್ಲ; ಹಿಂದಿನಿಂದಲೂ: ಡಿ.ಎ.ಶಂಕರ್‌

ಕೃತಿ ಬಿಡುಗಡೆ ಸಮಾರಂಭದಲ್ಲಿ ವಿಶ್ರಾಂತ ಪ್ರಾಧ್ಯಾಪಕ ಡಿ.ಎ.ಶಂಕರ್‌ ಅಭಿಮತ
Last Updated 21 ಫೆಬ್ರುವರಿ 2022, 9:03 IST
ಅಕ್ಷರ ಗಾತ್ರ

ಮೈಸೂರು: ‘ಮತಾಂತರ ಇಂದಿನ ಪ್ರಶ್ನೆಯಲ್ಲ. ಸಹಸ್ರ, ಸಹಸ್ರ ವರ್ಷದಿಂದಲೂ ಸಮಾಜವನ್ನು ಕಾಡುತ್ತಿರುವ ಕಗ್ಗಂಟಿನ ಪ್ರಶ್ನೆಯಾಗಿದೆ’ ಎಂದು ವಿಶ್ರಾಂತ ಪ್ರಾಧ್ಯಾಪಕ ಡಿ.ಎ.ಶಂಕರ್‌ ಸೋಮವಾರ ಇಲ್ಲಿ ಅಭಿಪ್ರಾಯಪಟ್ಟರು.

ಮಾನಸಗಂಗೋತ್ರಿಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ಅಂಕುರ (ಸಾಹಿತ್ಯ ಬಳಗ) ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಹಮ್ಮಿಕೊಂಡಿದ್ದ ಡಾ.ಹಾ.ತಿ.ಕೃಷ್ಣೇಗೌಡರ ಆರು ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು ‘ಸ್ವೇಚ್ಛೆಯಿಂದಲೂ ಅಥವಾ ಬಲವಂತದಿಂದಲೂ ಮತಾಂತರ ಹಿಂದಿನಿಂದಲೂ ನಡೆದಿದೆ’ ಎಂದರು.

‘ಮತಾಂತರ ಒಂದು ದೇಶ, ಅಲ್ಲಿನ ಸಂಸ್ಕೃತಿಗೆ ಮಾತ್ರ ಸೀಮಿತವಾದುದ್ದಲ್ಲ. ಒಂದು ಜಾತಿ, ಧರ್ಮಕ್ಕೂ ಸೀಮಿತಗೊಂಡಿದ್ದಲ್ಲ. ವಿಶ್ವದ ಎಲ್ಲೆಡೆಯೂ ಇದೆ. ಎಲ್ಲ ಜಾತಿ–ಧರ್ಮದಲ್ಲೂ ನಡೆದಿದೆ’ ಎಂದು ಹೇಳಿದರು.

‘ಮತಾಂತರದ ಪ್ರಶ್ನೆ ಎದುರಾದೊಡನೆ ಗೋಜಲು ಸೃಷ್ಟಿಯಾಗುತ್ತದೆ. ಇದನ್ನು ಬಿಡಿಸೋದೇ ಕಷ್ಟ. ಮನೆಯಲ್ಲಷ್ಟೇ ಅಲ್ಲದೇ ಸಮಾಜದಲ್ಲೂ ಕ್ಷೋಭೆ ಸೃಷ್ಟಿಸುತ್ತದೆ. ಎದುರಿಸೋದು ತುಂಬಾ ಕಷ್ಟಕರವಾದದ್ದು’ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

‘ಸ್ವೇಚ್ಛೆ, ಬಲವಂತದ ಜೊತೆಗೆ ಆಮಿಷವೊಡ್ಡುವ ಮೂಲಕವೂ ಮತಾಂತರ ಇಂದು ನಿರಂತರವಾಗಿ ನಡೆದಿದೆ. ಸಾಹಿತ್ಯಕ್ಕೂ ತಳುಕು ಹಾಕಿಕೊಂಡಿದೆ. ಮತ್ತೊಂದು ಮಗ್ಗುಲೇ ಆಗಿಬಿಟ್ಟಿದೆ. ಭಾಷಾಂತರ, ರೂಪಾಂತರ ಎಂಬುವು ಸಾಹಿತ್ಯದೊಳಗಿನ ಮತಾಂತರವಿದ್ದಂತೆ. ರೂಪಾಂತರ ಮಾಡುವಾಗ ಕೃತಿಯ ಪಾತ್ರ, ಸನ್ನಿವೇಶ, ವಿಷಯವಷ್ಟೇ ಬದಲಾಗಲ್ಲ. ನೋಡುವ ದೃಷ್ಟಿಕೋನವೇ ಬದಲಾಗುತ್ತದೆ’ ಎಂದು ಹೇಳಿದರು.

ಸಾಹಿತಿ ಎನ್‌.ಎಸ್‌.ತಾರಾನಾಥ್ ಕೃತಿಗಳ ಬಗ್ಗೆ ಮಾತನಾಡಿದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ.ಎಂ.ಜಿ.ಮಂಜುನಾಥ್ ಉಪಸ್ಥಿತರಿದ್ದರು. ಕೃತಿಗಳ ಲೇಖಕ ಡಾ.ಹಾ.ತಿ.ಕೃಷ್ಣೇಗೌಡ ಸ್ವಾಗತಿಸಿದರು. ಕುಮುದಾ ನಾಡಗೀತೆ ಹಾಡಿದರು.

ಅಂಕುರ ಪ್ರಕಾಶನದ ಓಂಕಾರಪ್ಪ, ಹಾಲತಿ‌ ಲೋಕೇಶ್, ಹಾಲತಿ‌ ಸೋಮಶೇಖರ್, ಪ್ರೊ.ಸಿ.ನಾಗಣ್ಣ, ಡಾ.ಯೋಗಣ್ಣ ಉಪಸ್ಥಿತರಿದ್ದರು.

‘2 ತಿಂಗಳಲ್ಲಿ ಕನ್ನಡ ವಿಶ್ವಕೋಶ ಬಿಡುಗಡೆ’

‘ಮೈಸೂರು ವಿಶ್ವವಿದ್ಯಾಲಯದಲ್ಲಿ ‘ಕನ್ನಡ ವಿಶ್ವಕೋಶ’ ಸಿದ್ಧವಾಗುತ್ತಿದೆ. ಉಳಿದ ಸಂಪುಟಗಳ ಕೆಲಸವನ್ನು ಇನ್ನೆರಡು ತಿಂಗಳಲ್ಲಿ ಪೂರ್ಣಗೊಳಿಸಿ ಬಿಡುಗಡೆ ಮಾಡಲಾಗುವುದು’ ಎಂದು ಕುಲಪತಿ ಪ್ರೊ.ಜಿ.ಹೇಮಂತಕುಮಾರ್‌ ತಿಳಿಸಿದರು.

ಡಾ.ಹಾ.ತಿ.ಕೃಷ್ಣೇಗೌಡರು ರಚಿಸಿರುವ ಕನ್ನಡ ಅರುಣೋದಯದ ಒಬ್ಬ ಆದ್ಯರು, ಕಡೇಕಾರು ರಾಜಗೋಪಾಲಕೃಷ್ಣರಾಯರು, ಈರಾರು ಪತ್ರಿಕೆ, ಮುದ್ದಣನ ನಾಡಿನಲ್ಲಿ, ಈರುಳ್ಳಿ ಪುರಾಣ, ಫ್ರೆಂಡ್ಸ್ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ‘ವಿಶ್ವಕೋಶ ತಜ್ಞರಾಗಿರುವ ಕೃಷ್ಣೇಗೌಡರು ನಾಡಿನ ಸಾರಸ್ವತ ಲೋಕದಲ್ಲಿ ಚಿರಪರಿಚಿತರು’ ಎಂದು ಬಣ್ಣಿಸಿದರು.

‘ಮೈಸೂರು ವಿಶ್ವವಿದ್ಯಾನಿಲಯದ ಕಳಶಪ್ರಾಯವಾಗಿರುವ ಕೃಷ್ಣೇಗೌಡರು, ವಿ.ವಿ.ಯ ಕನ್ನಡ ವಿಶ್ವಕೋಶ ಯೋಜನೆಗೆ ಅಪಾರ ಕೊಡುಗೆ ನೀಡಿದ್ದಾರೆ. ಆಧುನಿಕ ಕನ್ನಡ ಸಂಶೋಧನೆ ಕ್ಷೇತ್ರದಲ್ಲೂ ಸಾಧನೆಗೈದಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT