ವಾರ್ಡ್ ಮೀಸಲಾತಿ: ರಾಮದಾಸ್‌ ಆಕ್ಷೇಪಣೆ ಸಲ್ಲಿಕೆ

7

ವಾರ್ಡ್ ಮೀಸಲಾತಿ: ರಾಮದಾಸ್‌ ಆಕ್ಷೇಪಣೆ ಸಲ್ಲಿಕೆ

Published:
Updated:
ಎಸ್‌.ಎ.ರಾಮದಾಸ್

ಮೈಸೂರು: ಸ್ಥಳೀಯ ಸಂಸ್ಥೆಗಳ ವಾರ್ಡ್ ಕರಡು ಮೀಸಲಾತಿ ಅಧಿಸೂಚನೆಗೆ ಜಿಲ್ಲಾಧಿಕಾರಿಗೆ ಆ‌ಕ್ಷೇಪಣೆ ಸಲ್ಲಿಸುತ್ತಿರುವುದಾಗಿ ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.

ನಗರದಲ್ಲಿ 17 ವರ್ಷಗಳಿಂದಲೂ ವಾರ್ಡ್‌ ಪುನರ್‌ ವಿಂಗಡಣೆ ಮಾಡಿಲ್ಲ. ಹಾಲಿ 65 ವಾರ್ಡ್‌ಗಳಲ್ಲಿ ಜನಸಂಖ್ಯೆ ಹೆಚ್ಚಿರುವ ಕಾರಣ, ವಾರ್ಡ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕಿತ್ತು. ಆದರೆ, ಅದನ್ನು ಮಾಡದೇ ಅವೈಜ್ಞಾನಿಕವಾಗಿ ಮೀಸಲಾತಿ ಹಂಚಿರುವುದು ಸರಿಯಲ್ಲ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ಜಾತಿವಾರು ಮೀಸಲಾತಿ ಹಂಚಿಕೆ ಮಾಡಿರುವುದಾಗಿ ನಗರಪಾಲಿಕೆಯ ಅಧಿಕಾರಿಗಳು ಕಾರಣ ನೀಡಿದ್ದಾರೆ. ಆದರೆ, ಅದು ಪಾಲನೆಯಾಗಿರುವ ಯಾವ ಲಕ್ಷಣವೂ ಇಲ್ಲ. ದಲಿತರೇ ಹೆಚ್ಚಿರುವ ಅಶೋಕಪುರಂ ವಾರ್ಡನ್ನು ಬ್ರಾಹ್ಮಣರಿಗೆ, ಬ್ರಾಹ್ಮಣರೇ ಹೆಚ್ಚಿರುವ ವಾರ್ಡನ್ನು ಪರಿಶಿಷ್ಟ ಪಂಗಡದವರಿಗೆ, ಶ್ರೀರಾಂಪುರವನ್ನು ಪರಿಶಿಷ್ಟ ಜಾತಿಯವರಿಗೆ ಮೀಸಲು ಮಾಡಲಾಗಿದೆ. ಇಂತಹ ಅವೈಜ್ಞಾನಿಕ ಹಂಚಿಕೆಯಿಂದ ಯಾವ ಜಾತಿಯ ನಾಯಕರಿಗೂ ರಾಜಕೀಯವಾಗಿ ಬೆಳೆಯಲು ಸಾಧ್ಯವಿಲ್ಲ ಎಂದು ಅವರು ವಿಶ್ಲೇಷಿಸಿದರು.

ಅಲ್ಲದೇ, ಮಹಿಳಾ ಮೀಸಲಾತಿ ಹಂಚಿಕೆಯಲ್ಲಿ ತಾರತಮ್ಯ ನೀತಿ ಅನುಸರಿಸಲಾಗಿದೆ. ಶೇ 50ರಷ್ಟು ಮಹಿಳಾ ಮೀಸಲಾತಿ ನೀಡಬೇಕು ಎನ್ನುವ ಕಾರಣವನ್ನಿಟ್ಟುಕೊಂಡು ಕೃಷ್ಣರಾಜ ಕ್ಷೇತ್ರದಲ್ಲಿ 13 ವಾರ್ಡ್‌ಗಳನ್ನು ಮಹಿಳೆಯರಿಗೆ ನೀಡಲಾಗಿದೆ. ಆದರೆ, ನಿಯಮ ಪ್ರಕಾರ 9 ವಾರ್ಡ್‌ ನೀಡಬೇಕಿತ್ತು. ಹೆಚ್ಚು ಮಹಿಳಾ ಮೀಸಲಾತಿ ನೀಡಿರುವುದಕ್ಕೆ ತಕರಾರಿಲ್ಲ. ಆದರೆ, ಇದು ನಗರದ ಬೇರೆಲ್ಲ ಕ್ಷೇತ್ರಗಳಿಗೂ ಸಮಾನವಾಗಿ ಅನ್ವಯವಾಗಬೇಕು ಎಂದು ಒತ್ತಾಯಿಸಿದರು.

ಅಲ್ಲದೇ, ಸರ್ಕಾರ ಹೊರಡಿಸಿರುವ ಕರಡು ಮೀಸಲಾತಿ ಅಧಿಸೂಚನೆ ಯಾರಿಗೂ ಲಭ್ಯವಾಗಿಲ್ಲ. ಜಿಲ್ಲಾಧಿಕಾರಿ ಹಾಗೂ ನಗರಪಾಲಿಕೆ ಆಯುಕ್ತರು ತಮಗೆ ಅಧಿಸೂಚನೆಯೇ ಸಿಕ್ಕಿಲ್ಲ ಎನ್ನುತ್ತಿದ್ದಾರೆ. ಹಾಗಾಗಿ, ಇದು ಅನೇಕ ಅನುಮಾನಗಳನ್ನು ಮೂಡಿಸುತ್ತದೆ ಎಂದರು.

ಕೇಂದ್ರದ ಆರೋ‌ಗ್ಯ ವಿಮೆ ಜಾರಿಗೆ ಆಗ್ರಹ: ಕೇಂದ್ರ ಸರ್ಕಾರವು ಜಾರಿಗೊಳಿಸುತ್ತಿರುವ ‘ಆಯುಷ್ಮಾನ್ ಭಾರತ ವಿಮೆ’ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೊಳಿಸುವಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.

‘ಬಡವರಿಗೆ ಅನುಕೂಲವಾಗುವ ಅನೇಕ ಸೌಲಭ್ಯಗಳು ಈ ಯೋಜನೆಯಲ್ಲಿವೆ. ಇದನ್ನು ಜಾರಿಗೊಳಿಸಿದರೆ ರಾಜ್ಯದ ಬಹುಸಂಖ್ಯಾತರಿಗೆ ಅನುಕೂಲವಾಗುವುದು ಎಂದು ಮನವಿ ಮಾಡಿದ್ದೇವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !