ಮಂಗಳವಾರ, ನವೆಂಬರ್ 12, 2019
20 °C
ಎಚ್.ಡಿ.ಕೋಟೆ ತಾಲ್ಲೂಕಿನ ಕಾಡಂಚಿನ ಜಮೀನಿನಲ್ಲಿ ಹೆಚ್ಚಿದ ದಾಳಿ; ಗ್ರಾಮಸ್ಥರ ಆಕ್ರೋಶ

ಕಾಡಾನೆ ಹಾವಳಿ ತಡೆಗೆ ಆಗ್ರಹ

Published:
Updated:
Prajavani

ಎಚ್.ಡಿ.ಕೋಟೆ: ಕಳೆದ ಎರಡು ತಿಂಗಳಿನಿಂದ ಆನೆಗಳ ಹಾವಳಿಗೆ ಕಾಡಂಚಿನ ಗ್ರಾಮಗಳ ಜನರು ಬೇಸತ್ತಿದ್ದಾರೆ. ಇತ್ತೀಚೆಗೆ‌ ಕಾಡಾನೆಗಳ ಹಾವಳಿ ಹೆಚ್ಚಾಗಿದೆ ಎಂದು ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕಿನ ಮೇಟಿಕುಪ್ಪೆ, ಸಿದ್ದಯ್ಯನಹುಂಡಿ, ಚಕ್ಕೋಡನಹಳ್ಳಿ, ಚಾಕಹಳ್ಳಿ, ಟೈಗರ್ ಬ್ಲಾಕ್, ಜಿ.ಎಂ.ಹಳ್ಳಿ, ಅಗಸನಹುಂಡಿ, ಸೊಳ್ಳೇಪುರ, ಬೂದನೂರು, ಬಸವನಗಿರಿಹಾಡಿ, ರಾಜೇಗೌಡನಹುಂಡಿ, ಅಣ್ಣೂರು, ಹೊಸಹಳ್ಳಿ, ಭೀಮನಹಳ್ಳಿ ಸೇರಿದಂತೆ ಹಲವು ಹಳ್ಳಿಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ರೈತರ ಬೆಳೆಗಳು ಆನೆಗಳ ಪಾಲಾಗುತ್ತಿದ್ದು, ರೈತರು ಬೆಳೆಗಳನ್ನು ಉಳಿಸಿಕೊಳ್ಳಲಾಗದೆ ಪರದಾಡುವ ಸ್ಥಿತಿ ಉಂಟಾಗಿದೆ.

ತೀವ್ರ ಮಳೆಯಿಂದ ಕಾಡಂಚಿನ ಕಂದಕಗಳು ಕೆಲವು ಕಡೆಗಳಲ್ಲಿ ಕುಸಿದಿದ್ದರೆ, ಕೆಲವು ಕಡೆಗಳಲ್ಲಿ ಮುಚ್ಚಿಹೋಗಿವೆ. ಇದರಿಂದ ಆನೆಗಳು ಸರಾಗವಾಗಿ ಕಂದಕಗಳನ್ನು ದಾಟಿ ಹೊರಬಂದು ರೈತರ ಜಮೀನಿನಲ್ಲಿ ತೆಂಗು, ಬಾಳೆ, ಕಬ್ಬು, ರಾಗಿ, ಜೋಳ ಸೇರಿದಂತೆ ಬಹುತೇಕ ಬೆಳೆಗಳನ್ನು ತಿಂದು, ತುಳಿದು ಹಾಳುಮಾಡುತ್ತಿವೆ.

‘ಬೆಳೆಗಳನ್ನು ತಿನ್ನುವುದಲ್ಲದೇ ಜನರ ಮೇಲೆ ದಾಳಿ ಮಾಡುತ್ತಿದ್ದು, ಭಯದ ವಾತಾವರಣದಲ್ಲಿ ದಿನದೂಡುವ ಸ್ಥಿತಿ ಉಂಟಾಗಿದೆ’ ಎಂದು ಟೈಗರ್ ಬ್ಲಾಕ್ ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜು ಹೇಳುತ್ತಾರೆ.

ವೀರನಹೊಸಹಳ್ಳಿ ವನ್ಯಜೀವಿ ವ್ಯಾಪ್ತಿಗೆ ಸೇರ್ಪಡೆ: ‘ಸಾಮಾಜಿಕ ಅರಣ್ಯ ವಲಯದ ವ್ಯಾಪ್ತಿಗೆ ಸೇರಿದ್ದ ಸುಮಾರು 37 ಚದರ ಕಿ.ಮೀ ವ್ಯಾಪ್ತಿಯನ್ನು ವೀರನಹೊಸಹಳ್ಳಿ ವ್ಯಾಪ್ತಿಯ ವನ್ಯಜೀವಿ ವಲಯಕ್ಕೆ ಸೇರ್ಪಡೆ ಮಾಡಿದ್ದು, ಈ ವ್ಯಾಪ್ತಿಯಲ್ಲಿ ಆನೆಗಳು ಹೊರಬಂದರೆ ಅಲ್ಲಿನ ಅಧಿಕಾರಿಗಳು ಸಿಬ್ಬಂದಿ ಕೊರತೆಯಿಂದ ಸ್ಪಂದಿಸುವುದು ತಡವಾಗುತ್ತಿದೆ, ಇದರಿಂದ ಕಾಡಿನಿಂದ ಹೊರಬರುವ ಆನೆಗಳನ್ನು ಪುನಃ ಕಾಡಿಗೆ ಅಟ್ಟಲು ಆಗುತ್ತಿಲ್ಲ’ ಎಂದು ಬೂದನೂರು ನಾಗರಾಜಪ್ಪ ಹೇಳುತ್ತಾರೆ.

ರೈತರು ನಿತ್ಯವೂ ತಮ್ಮ ಜಮೀನುಗಳಲ್ಲಿ ಕಾವಲು ಕಾಯುತ್ತಿದ್ದಾರೆ, ನಿದ್ದೆಗೆಟ್ಟು ಕಾವಲು ಇದ್ದರೂ ಕಾಡಿನಿಂದ ಹೊರಬಂದ ಆನೆಗಳನ್ನು ಓಡಿಸಲು ಸಾಧ್ಯವಾಗುತ್ತಿಲ್ಲ. ಪಟಾಕಿ ಶಬ್ದಕ್ಕೂ ಬೆದರುತ್ತಿಲ್ಲ, ಬೆಳೆಗಳನ್ನು ತಿಂದು, ತುಳಿದು ನಾಶಪಡಿಸುತ್ತಿವೆ.

‘ಕಳೆದ ನಾಲ್ಕು ವರ್ಷಗಳಿಂದ ಆನೆಗಳ ದಾಳಿ ಇಲ್ಲದೆ ರೈತರು ವಿವಿಧ ಬೆಳೆಗಳನ್ನು ಬೆಳೆದು ಬೇಸಾಯ ಮಾಡುತ್ತಿದ್ದರು, ಬೇಸಿಗೆ ಕಾಲದಲ್ಲೂ ಬಾಳೆ ಸೇರಿದಂತೆ ವಿವಿಧ ತರಕಾರಿ ಬೆಳೆಗಳನ್ನು ಬೆಳೆದು ಉತ್ತಮ ಜೀವನ ಸಾಗಿಸುತ್ತಿದ್ದರು. ಸಾಮಾಜಿಕ ವಲಯ ಅರಣ್ಯವಿದ್ದ ಸಂದರ್ಭದಲ್ಲಿ ಈ ಭಾಗದ ಅರಣ್ಯಾಧಿಕಾರಿಗಳು ಆನೆಗಳು ಹೊರಬರದಂತೆ ತಡೆಯುತ್ತಿದ್ದರು. ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದರು’ ಎಂದು ಮೇಟಿಕುಪ್ಪೆ ಬಸವರಾಜು ಆರೋಪಿಸುತ್ತಾರೆ.

‘ರೈತರ ಬೆಳೆಗಳ ನಷ್ಟಕ್ಕೆ ಕೇವಲ ಎರಡರಿಂದ ಮೂರು ಸಾವಿರ ಪರಿಹಾರ ಕೊಟ್ಟು ಅರಣ್ಯ ಇಲಾಖೆ ಕೈತೊಳೆದುಕೊಳ್ಳುತ್ತದೆ’ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

‘ಈಗಾಗಲೇ ತುರ್ತು ಅವಶ್ಯಕತೆ ಇರುವ ಕಡೆಗಳಲ್ಲಿ ತೂಗು ಸೋಲಾರ್ ಬೇಲಿಯನ್ನು ಅಳವಡಿಸಲು ಸರ್ಕಾರದಿಂದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆನೆ ಕಾವಲಿಗೆ 24 ಸಿಬ್ಬಂದಿಯನ್ನು ನೇಮಕ ಮಾಡಿದ್ದು, ರಾತ್ರಿ ವೇಳೆ ಕಾವಲು ಕಾಯುತ್ತಾರೆ, ಅಲ್ಲಲ್ಲಿ ಪಟಾಕಿ ಸಿಡಿಸುತ್ತಾ ಜೀಪಿನ ಮೂಲಕವೂ ಸಂಚರಿಸುತ್ತಾರೆ’ ಎಂದು ವಲಯ ಅರಣ್ಯಾಧಿಕಾರಿ ರವೀಂದ್ರ ಹೇಳುತ್ತಾರೆ.

‘ಕಳೆದೆರಡು ತಿಂಗಳಿಂದ ಬಿದ್ದ ಭಾರಿ ಮಳೆಯಿಂದಾಗಿ ಕಾಡಂಚಿನ ಭಾಗದ ಕಂದಕಗಳು ಹಾಳಾಗಿರುವುದರಿಂದ ಆನೆಗಳು ಎಲ್ಲೆಂದರಲ್ಲಿ ಜಮೀನುಗಳತ್ತ ಮುಖ ಮಾಡುತ್ತಿವೆ, ಹೀಗಾಗಿ ಆನೆಗಳನ್ನು ಕಾಯುವುದು ತೀರಾ ಕಷ್ಟಕರವಾದ ಕೆಲಸವಾಗಿದೆ’ ಎನ್ನುತ್ತಾರೆ ರವೀಂದ್ರ.

ಸಮಸ್ಯೆಗೆ ಪರಿಹಾರ: ‘ಸಾಕಷ್ಟು ಕಡೆ ಕಂದಕಗಳು ಹಾಳಾಗಿರುವುದರಿಂದ ರೈಲ್ವೆ ಕಂಬಿಗಳನ್ನು ಅಳವಡಿಸಿ ಆನೆಗಳು ಹೊರಬಾರದಂತೆ ಮಾಡಬೇಕಿದೆ. ಆನೆ ಹಾವಳಿ ಹೆಚ್ಚಾದರೆ ರೈತರು ಸಂಕಷ್ಟಕ್ಕೆ ಸಿಲುಕುವುದಲ್ಲದೆ ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ’ ಎಂದರು ಬೂದನೂರು ಬಸವರಾಜಪ್ಪ.

‘ಅತಿವೃಷ್ಟಿ, ಅನಾವೃಷ್ಟಿ ನಡುವೆಯೂ ರೈತರು ಬೆಳೆದೆ ಬೆಳೆಗಳು ಕಾಡು ಪ್ರಾಣಿಗಳ ಹಾವಳಿಗೆ ತುತ್ತಾಗುತ್ತಿವೆ. ಈ ಸಂಬಂಧ ಅರಣ್ಯ ಸಚಿವರೊಂದಿಗೆ ಚರ್ಚಿಸಿ ರೈತರಿಗೆ ಹೆಚ್ಚಿನ ಪರಿಹಾರ ಒದಗಿಸುವಂತೆ ಒತ್ತಾಯಿಸುತ್ತೇನೆ’ ಎಂದು ಶಾಸಕ ಸಿ. ಅನಿಲ್ ಕುಮಾರ್‌ ಭರವಸೆ ನೀಡುತ್ತಾರೆ.

ಪ್ರತಿಕ್ರಿಯಿಸಿ (+)