ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತುವರಿ ತೆರವುಗೊಳಿಸಿ ಕೆರೆ ಅಭಿವೃದ್ಧಿಗೆ ಶಾಸಕ ಮಂಜುನಾಥ್ ಸೂಚನೆ

ಕರ್ಣಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿದ ಶಾಸಕ
Last Updated 22 ಜೂನ್ 2021, 2:59 IST
ಅಕ್ಷರ ಗಾತ್ರ

ಹುಣಸೂರು: ತಾಲ್ಲೂಕಿನ ಕರ್ಣಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲೇ ಅತಿ ಹೆಚ್ಚು ಕೆರೆಗಳಿದ್ದು, ನರೇಗಾ ಯೋಜನೆ ಬಳಸಿ ಅಭಿವೃದ್ಧಿಗೆ ತಾಲ್ಲೂಕು ಆಡಳಿತ ಮುಂದಾಗಬೇಕು ಎಂದು ಶಾಸಕ ಮಂಜುನಾಥ್ ಸೂಚಿಸಿದರು.

ತಾಲ್ಲೂಕಿನ ಕರ್ಣಕುಪ್ಪೆ ಗ್ರಾ.ಪಂ.ವ್ಯಾಪ್ತಿಯಲ್ಲಿ ನಡೆದಿರುವ ವಿವಿಧ ನರೇಗಾ ಯೋಜನೆ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು, ಕರ್ಣಕುಪ್ಪೆ ಪಂಚಾಯಿತಿಯು ಅಭಿವೃದ್ಧಿ ಕಾಮಗಾರಿ ಮತ್ತು ಮಾನವ ಕೌಶಲ ಬಳಕೆಯಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದಿದೆ. ಪಂಚಾಯಿತಿ ವ್ಯಾಪ್ತಿಯ 28 ಕೆರೆಗಳೂ ಒತ್ತುವರಿ ಆಗಿದೆ. ಸ್ಥಳೀಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಕಾನೂನು ಕ್ರಮ ಜಾರಿಗೊಳಿಸಿ ಒತ್ತುವರಿ ತೆರವುಗೊಳಿಸಬೇಕು ಎಂದು ತಹಶೀಲ್ದಾರ್ ಬಸವರಾಜ್ ಅವರಿಗೆ ಸೂಚಿಸಿದರು.

ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಗಿರೀಶ್ ಮಾತನಾಡಿ, ಕಳೆದ ಸಾಲಿನಲ್ಲಿ ನರೇಗಾ ಯೋಜನೆಯಲ್ಲಿ ₹ 1 ಕೋಟಿಗೂ ಹೆಚ್ಚು ಅನುದಾನ ಬಳಕೆಯಾಗಿ ಭೌತಿಕ ಆಸ್ತಿ ಸೃಷ್ಟಿಸಲಾಗಿದೆ. ಈ ಸಾಲಿನಲ್ಲಿ ಜಲಮರುಪೂರಣ ಯೋಜನೆ ಜಾರಿಯಲ್ಲಿದ್ದು, ಸಾರ್ವಜನಿಕ ಸ್ಥಳ ಮತ್ತು ತಗ್ಗು ಪ್ರದೇಶದಲ್ಲಿ ಈ ಯೋಜನೆ ಅನುಷ್ಠಾನಗೊಳಿಸಿ ಅಂತರ್ಜಲ ವೃದ್ಧಿಗೆ ಸಹಕಾರಿ ಆಗಿದೆ. ಸ್ಥಳೀಯ ಪಂಚಾಯಿತಿ ನರೇಗಾ ಯೋಜನೆ ಬಳಸಿ ಯೋಜನೆ ಅನುಷ್ಠಾನಗೊಳಿಸುವ ಜತೆಗೆ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಲು ಪೂರಕವಾಗಿದೆ ಎಂದರು.

ತಹಶೀಲ್ದಾರ್ ಬಸವರಾಜ್ ಮಾತನಾಡಿ, ಕರ್ಣಕುಪ್ಪೆ ಪಂಚಾಯಿತಿಯಲ್ಲಿ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದ್ದು, 5 ಕೆರೆ ಸೇರಿದಂತೆ ಸ್ಮಶಾನ ಒತ್ತುವರಿ ತೆರವು ಮಾಡಲಾಗಿದೆ. ಸ್ಥಳೀಯರು ಸಹಕರಿಸಿದರೆ ಕೆರೆ ಒತ್ತುವರಿ ತೆರವು ಗೊಳಿಸಿ ಹೂಳು ತೆಗೆದರೆ ಮುಂಗಾರಿನಲ್ಲಿ ಮಳೆ ನೀರು ಸಂಗ್ರಹಿಸಲು ಸಹಾಯವಾಗಲಿದೆ ಎಂದರು.

ಪಿಡಿಒ ರಾಮಣ್ಣ ಮಾತನಾಡಿ, ಪಂಚಾಯಿತಿ ವತಿಯಿಂದ ಪ್ರಸಕ್ತ ಸಾಲಿನಲ್ಲಿ 8 ಕೆರೆ ಅಭಿವೃದ್ಧಿ ಮತ್ತು ಜಲ ಮರುಪೂರಣ ಯೋಜನೆಯಲ್ಲಿ 50 ಘಟಕ ನಿರ್ಮಿಸಲಾಗುವುದು ಎಂದರು.

ಪಂಚಾಯಿತಿ ಅಧ್ಯಕ್ಷೆ ಸರಸ್ವತಿ, ಉಪಾಧ್ಯಕ್ಷ ಕುಮಾರಸ್ವಾಮಿ, ಸದಸ್ಯ ರಾದ ರಾಣಿ, ಪಾಪಣ್ಣ, ಮಾದೇಗೌಡ, ಸೋಮಶೇಖರ್, ಮೀನಾಕ್ಷಿ ಮತ್ತು ಕಾರ್ಯದರ್ಶಿ ಸಂತೋಷ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT