ಶನಿವಾರ, ಡಿಸೆಂಬರ್ 14, 2019
24 °C
ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಪ್ರೊ.ವಿ.ಕೆ.ನಟರಾಜ್ ಅಭಿಮತ

‘ಪ್ರಶ್ನಿಸುವ ಮನೋಭಾವ ಹೆಚ್ಚಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಸತ್ಯವನ್ನು ನೇರವಾಗಿ ಅಧಿಕಾರಸ್ಥರ ಮುಂದಿಡುವ ಮನೋಸ್ಥೈರ್ಯ ಸಮಾಜಶಾಸ್ತ್ರಜ್ಞರಲ್ಲಿರಬೇಕಿದೆ. ಇದು ಪ್ರೊ.ಆರ್.ಇಂದಿರಾ ಅವರಲ್ಲಿತ್ತು’ ಎಂದು ಪ್ರೊ.ವಿ.ಕೆ.ನಟರಾಜ್ ತಿಳಿಸಿದರು.

ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಮಂಗಳವಾರ ಮುಸ್ಸಂಜೆ ನಡೆದ ಪ್ರೊ.ಆರ್.ಇಂದಿರಾ ಗೌರವ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದ ಅವರು, ‘ಬದಲಾಗುತ್ತಿರುವ ಸಾಮಾಜಿಕ ಸ್ಥಿತಿಯಲ್ಲಿ ನೇರವಾಗಿ ಸತ್ಯ ಹೇಳುವ ಗುಣ ಮರೆಯಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಧರ್ಮ ವೈಯಕ್ತಿಕವಾಗಿರಬೇಕು. ಎಂದೆಂದಿಗೂ ಸಾರ್ವತ್ರಿಕರಣಗೊಳ್ಳಬಾರದು. 2015ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಶತಮಾನೋತ್ಸವ ಸಮಾರಂಭಕ್ಕೆ ಆಗಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬಂದಿದ್ದರು. ಶಿಷ್ಟಾಚಾರದಂತೆ ಎರಡು ಗಂಟೆ ಮೊದಲೇ ಸಭಾಂಗಣದಲ್ಲಿ ಜನರು ಆಸೀನರಾಗಿದ್ದರು.’

‘ಆದರೆ ರಾಷ್ಟ್ರಪತಿ ಒಂದು ಗಂಟೆ ವಿಳಂಬವಾಗಿ ವೇದಿಕೆಗೆ ಬಂದರು. ಇದಕ್ಕೆ ಬೇರೇನೂ ಕಾರಣವಲ್ಲ. ಶತಮಾನೋತ್ಸವಕ್ಕೆ ಹಾಜರಾಗುವ ಸಮಯದಲ್ಲಿ ಚಾಮುಂಡೇಶ್ವರಿಯ ದರ್ಶನಕ್ಕೆ ತೆರಳಿದ್ದರು. ಇದನ್ನು ಯಾರೊಬ್ಬರು ಪ್ರಶ್ನಿಸಲಿಲ್ಲ. ಒಂದು ಮಾಧ್ಯಮವನ್ನು ಹೊರತುಪಡಿಸಿ, ಉಳಿದ ಯಾವೊಂದು ಮಾಧ್ಯಮಗಳಲ್ಲೂ ಬಿತ್ತರಗೊಳ್ಳಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಥಿಂಕಿಂಗ್ ಜೆಂಡರ್; ಸೋಷಿಯೋ–ಕಲ್ಚರಲ್–ಪರ್‌ಸ್ಪೆಕ್ಟ್ವೀಸ್’ ಪುಸ್ತಕದಲ್ಲಿ 19 ವಿದ್ವಾಂಸರು ಲೇಖನ ಬರೆದಿದ್ದಾರೆ. ಆದರೆ ಆರ್.ಇಂದಿರಾ ವ್ಯಕ್ತಿತ್ವ ಪರಿಚಯಿಸುವ ಲೇಖನವೇ ಇಲ್ಲದಿರುವುದು ದೊಡ್ಡ ಲೋಪ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಡಾ.ಶಾಲಿನಿ ಸೂರ್ಯನಾರಾಯಣ್, ಡಾ.ಜಿ.ಶಾಂತಿ, ಡಾ.ಕೆ.ಜಿ.ಗಾಯತ್ರಿದೇವಿ ಸಂಪಾದಿಸಿರುವ ಪುಸ್ತಕದ ಕುರಿತಂತೆ ಮಾತನಾಡಿದ ಡಾ.ಎನ್.ಗಾಯತ್ರಿ, ‘ಬಹುಮುಖ ಪ್ರತಿಭೆಯ ಸಾಧಕಿ ಆರ್.ಇಂದಿರಾ. ಸಮಾಜಶಾಸ್ತ್ರ, ಮಹಿಳಾ ಅಧ್ಯಯನದಲ್ಲಿ ನಾಲ್ಕು ದಶಕ ಕೃಷಿ ನಡೆಸಿದ್ದಾರೆ. ಮೂರು ದಶಕದ ಅವಧಿ ಸಂಶೋಧನೆ ಕೈಗೊಂಡಿದ್ದಾರೆ. 19 ವಿದ್ವಾಂಸರಿಂದ ರಚಿತಗೊಂಡಿರುವ 350 ಪುಟದ ಪುಸ್ತಕವನ್ನು ಒಂದು ದಿನವಿಡಿ ವಿಚಾರ ಸಂಕಿರಣ ನಡೆಸುವ ಮೂಲಕ ಪರಿಚಯಿಸಬೇಕಿದೆ’ ಎಂದು ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಆರ್.ಇಂದಿರಾ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)