ಶನಿವಾರ, ಏಪ್ರಿಲ್ 10, 2021
30 °C

ರೈಲು ನಿಲ್ದಾಣಕ್ಕೆ ರಸ್ತೆಯದೇ ಅಡ್ಡಗಾಲು!

ನೇಸರ ಕಾಡನಕುಪ್ಪೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು ರೈಲು ನಿಲ್ದಾಣಗಳಲ್ಲಿ ಸೌಕರ್ಯಗಳು ಅತ್ಯುತ್ತಮವಾಗಿಯೇ ಇವೆ. ಸ್ವಚ್ಛ ಶೌಚಾಲಯಗಳು, ಆಧುನಿಕ ಟಿಕೆಟ್‌ ಕೌಂಟರ್‌, ಕಾಯುವ ಕೊಠಡಿ ಪ್ರಯಾಣಿಕರಿಗೆ ಮುದ ನೀಡುತ್ತವೆ. ಆದರೆ, ನಿಲ್ದಾಣಕ್ಕೆ ಬರಬೇಕಾದ ಸಂಪರ್ಕ ರಸ್ತೆಗಳು ಹೀನಾಯ ಸ್ಥಿತಿಯಲ್ಲಿದ್ದು ತೀವ್ರ ಕಸಿವಿಸಿ ಉಂಟಾಗುತ್ತಿದೆ.

ಇದನ್ನು ನೀವು ಅರ್ಥಮಾಡಿಕೊಳ್ಳಬೇಕು ಎಂದರೆ ಅಶೋಕಪುರಂ ರೈಲು ನಿಲ್ದಾಣಕ್ಕೆ ಬರಬೇಕು. ಮಾನಂದವಾಡಿ ರಸ್ತೆಗೆ ಅಂಟಿಕೊಂಡಂತಿರುವ ಈ ನಿಲ್ದಾಣದ ಆಜು–ಬಾಜಿನಲ್ಲಿ ರೈಲ್ವೆ ಕಾರ್ಯಾಗಾರ, ರೈಲ್ವೆ ಶಾಲೆಯೂ ಇದೆ. ಆದರೆ, ನಿಲ್ದಾಣವನ್ನು ಸಂಪರ್ಕಿಸುವ ಸುಮಾರು ಅರ್ಧ ಕಿಲೋಮೀಟರ್‌ ಉದ್ದನೆಯ ರಸ್ತೆ ಗುಂಡಿಮಯವಾಗಿದೆ.

ಈಗ ಅಶೋಕಪುರಂ ರೈಲು ನಿಲ್ದಾಣದಿಂದ ಬೆಂಗಳೂರು ಹಾಗೂ ಹುಬ್ಬಳ್ಳಿಗೂ ರೈಲುಗಳು ಸಂಚರಿಸುತ್ತಿವೆ. ಹಿಂದೆ ನಂಜನಗೂಡು ಹಾಗೂ ಚಾಮರಾಜನಗರಕ್ಕೆ ಮಾತ್ರ ಇಲ್ಲಿಂದ ರೈಲು ಸಂಚಾರವಿತ್ತು. ಮುಖ್ಯ ರೈಲು ನಿಲ್ದಾಣ ಇಲ್ಲಿಗೆ ಕೇವಲ 5 ಕಿಲೋ ಮೀಟರ್‌ ದೂರವಿದೆ. ಆದರೂ ಇಲ್ಲಿಂದ ಬೆಂಗಳೂರು ಮಾರ್ಗವಾಗಿ ರೈಲು ಇಲ್ಲದೇ ಇದ್ದ ಕಾರಣದಿಂದ ಆಟೊ, ಬಸ್‌ ಅಥವಾ ತಮ್ಮ ಸ್ವಂತ ವಾಹನಗಳಲ್ಲಿ ಮುಖ್ಯ ನಿಲ್ದಾಣಕ್ಕೆ ಹೋಗಿ ಅಲ್ಲಿಂದ ರೈಲು ಹತ್ತಬೇಕಿತ್ತು. ಹೀಗಾಗಿ, ಬಹುವರ್ಷಗಳ ಪ್ರಯಾಣಿಕರ ಬೇಡಿಕೆಯಂತೆ ಇಲ್ಲಿಗೆ ವಿಶ್ವಮಾನವ ಎಕ್ಸ್‌ಪ್ರೆಸ್‌ ರೈಲು ಸಿಕ್ಕಿತು.

ಆದರೆ, ವಿಶ್ವಮಾನವ ಎಕ್ಸ್‌ಪ್ರೆಸ್‌ ರೈಲು ಇಲ್ಲಿಂದ ಹೊರಡುವುದು ಬೆಳಿಗ್ಗೆ 5.15ಕ್ಕೆ. ಇಲ್ಲಿಂದ ಬೆಂಗಳೂರು ಮಾರ್ಗವಾಗಿ ರೈಲು ಹುಬ್ಬಳ್ಳಿಗೆ ಹೋಗುತ್ತದೆ. ರೈಲು ಹೊರಡುವಾಗ ಇನ್ನೂ ಬೆಳಕಾಗಿರುವುದಿಲ್ಲ. ಸಮಸ್ಯೆ ಇರುವುದೇ ಇಲ್ಲಿ. ಹಳ್ಳ, ಗುಂಡಿ ತುಂಬಿದ ರಸ್ತೆಯನ್ನು ದಾಟಿ ಬರಬೇಕಾದರೆ ಸಾಕು ಸಾಕಾಗುತ್ತದೆ. ಅಲ್ಲದೇ, ಈ ರಸ್ತೆಗೆ ಬೀದಿ ದೀಪದ ವ್ಯವಸ್ಥೆಯಿಲ್ಲ. ಕತ್ತಲಲ್ಲಿ ಮಹಿಳೆಯರು–ಮಕ್ಕಳು ಬರಲು ಹೆದರಬೇಕಾದ ಪರಿಸ್ಥಿತಿ ಇದೆ.

ಆರು ತಿಂಗಳಾದರೂ ಪರಿಹಾರವಿಲ್ಲ: ಇಲ್ಲಿ ಸಮಸ್ಯೆ ಇರುವುದು ರೈಲ್ವೆ ಇಲಾಖೆಯದ್ದಲ್ಲ. ಈ ರಸ್ತೆಯು ನಗರಪಾಲಿಕೆಯ ವ್ಯಾಪ್ತಿಗೆ ಬರುತ್ತದೆ. 65ನೇ ವಾರ್ಡಿಗೆ ಸೇರುತ್ತದೆ. ಸತತವಾಗಿ ನಗರಪಾಲಿಕೆಗೆ ಪ್ರಯಾಣಿಕರು ಹಾಗೂ ಇಲ್ಲಿನ ಸ್ಥಳೀಯರು ದೂರು ನೀಡಿ, ರಸ್ತೆ ನಿರ್ಮಾಣ ಮಾಡಿಕೊಡುವಂತೆ ಮನವಿ ಸಲ್ಲಿಸಿದ್ದರೂ ಪರಿಹಾರ ಸಿಕ್ಕಿಲ್ಲ. ಮುಂಚೆ ಈ ರಸ್ತೆಯ ಎರಡೂ ಮಗ್ಗಲುಗಳಲ್ಲಿ ಕಟ್ಟಡ ತ್ಯಾಜ್ಯ ಸುರಿಯಲಾಗಿತ್ತು. ನಾಗರಿಕರ ತೀವ್ರ ಆಕ್ಷೇಪದಿಂದಾಗಿ ತೆರವಾಗಿದೆ. ಆದರೆ, ರಸ್ತೆ ನಿರ್ಮಾಣ ಯಾವಾಗ, ಬೀದಿ ದೀಪ ಹಾಕುವುದು ಯಾವಾಗ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗದೇ ಪ್ರಯಾಣಿಕರು ಕಂಗಾಲಾಗಿದ್ದಾರೆ.

ಮಾನಂದವಾಡಿ ರಸ್ತೆಯಿಂದ ಬಲಕ್ಕೆ ತಿರುಗಿ ನಿಲ್ದಾಣದ ಕಡೆಗೆ ಹೋಗಬೇಕೆಂದರೆ ಮುಂಚೆ ಇಲ್ಲಿ ಒಂದು ಮಾರ್ಗದರ್ಶಿ ಫಲಕವೂ ಇರಲಿಲ್ಲ. ಇದೀಗ ಒಂದು ಪುಟ್ಟ ಫಲಕವನ್ನು ರೈಲ್ವೆ ಇಲಾಖೆ ಅಳವಡಿಸಿದೆ. ಆದರೆ, ಇಲ್ಲಿಂದ ಆಟೊ ವ್ಯವಸ್ಥೆ ಇಲ್ಲದೇ ಇರುವುದು ಬೇಸರ ಮೂಡಿಸಿದೆ. ರೈಲು ನಿಲ್ದಾಣಕ್ಕೆ ಬರಲು ಅಥವಾ ನಿಲ್ದಾಣದಿಂದ ಬೇರೆಗೆ ಹೋಗಲು ಇಲ್ಲಿಂದ ಆಟೊ ವ್ಯವಸ್ಥೆ ಇಲ್ಲ. ಏಕೆಂದರೆ, ಆಟೊ ಚಾಲಕರು ಈ ಭಯಾನಕ ರಸ್ತೆಯಲ್ಲಿ ಬರಲಾಗದು ಎಂದು ತಿರಸ್ಕರಿಸುತ್ತಾರೆ.

ಚಾಮರಾಜಪುರಂ, ಅಶೋಕಪುರಂ ನಿಲ್ದಾಣದಿಂದ ಒಟ್ಟು 8 ರೈಲುಗಳು ಸಂಚರಿಸುತ್ತಿವೆ. ಮೈಸೂರು– ನಂಜನಗೂಡು ಪ್ಯಾಸೆಂಜರ್, ಹುಬ್ಬಳ್ಳಿ – ಅಶೋಕಪುರಂ ವಿಶ್ವಮಾನವ ಎಕ್ಸ್‌ಪ್ರೆಸ್, ಚಾಮರಾಜನಗರ – ತಿರುಪತಿ ಎಕ್ಸ್‌ಪ್ರೆಸ್, ಚಾಮರಾಜನಗರ – ಬೆಂಗಳೂರು ಪ್ಯಾಸೆಂಜರ್, ಚಾಮರಾಜನಗರ – ಮೈಸೂರು ಪ್ಯಾಸೆಂಜರ್ ರೈಲುಗಳು ಇಲ್ಲಿಂದ ಸಂಚರಿಸುತ್ತಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.