ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಆರ್‌ಪಿ ಹೆಚ್ಚಳಕ್ಕೆ ಆಗ್ರಹಿಸಿ ರಸ್ತೆ ತಡೆ

Last Updated 12 ಆಗಸ್ಟ್ 2022, 11:31 IST
ಅಕ್ಷರ ಗಾತ್ರ

ಮೈಸೂರು: ಕಬ್ಬಿಗೆ ನಿಗದಿಪಡಿಸಿರುವ ಎಫ್‌ಆರ್‌ಪಿ (ನ್ಯಾಯಸಮ್ಮತ ಹಾಗೂ ಮೌಲ್ಯಾಧಾರಿತ ಬೆಲೆ)ಯನ್ನು ಮರು ಪರಿಶೀಲಿಸುವಂತೆ ಆಗ್ರಹಿಸಿ ಮತ್ತು ವಿದ್ಯುತ್ ಖಾಸಗೀಕರಣ ವಿರೋಧಿಸಿ ಇಲ್ಲಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಸಮೀಪದ ವೃತ್ತದಲ್ಲಿ ಬೆಂಗಳೂರು–ಮೈಸೂರು ಹೆದ್ದಾರಿ ಬಂದ್ ಮಾಡಿ ಕಬ್ಬು ಬೆಳೆಗಾರರ ಸಂಘದವರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಮಾತನಾಡಿ, ‘ಬಿತ್ತನೆ ಬೀಜ, ರಸಗೊಬ್ಬರಗಳ ಬೆಲೆ ಏರಿಕೆಯಾಗಿದೆ. ಕಟಾವು ಕೂಲಿಯೂ ಜಾಸ್ತಿಯಾಗಿದೆ. ಹೀಗಿರುವಾಗ, ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರವು ಟನ್‌ಗೆ ಕೇವಲ ₹ 150 ಏರಿಕೆ ಮಾಡಿ, ₹ 3,050 ಎಫ್‌ಆರ್‌‍ಪಿ ನಿಗದಿಪಡಿಸಿದೆ. ಇದು ಬೆಳೆಗಾರರಿಗೆ ಮಾಡಿದ ಅನ್ಯಾಯವಾಗಿದೆ’ ಎಂದು ಆರೋಪಿಸಿದರು. ‘ಕೂಡಲೇ ಎಫ್‌ಆರ್‌ಪಿ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಕೇಂದ್ರ ಸರ್ಕಾರವು ಸಕ್ಕರೆ ಉದ್ದಿಮೆದಾರರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ವಿದ್ಯುತ್ ಪೂರೈಕೆ ಖಾಸಗೀಕರಣ ಮಾಡುವುದರಿಂದ, ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಸರಬರಾಜು ನಿಲ್ಲುತ್ತದೆ. ಹೀಗಾಗಿ, ಖಾಸಗೀಕರಣ ಪ್ರಸ್ತಾವ ಕೈಬಿಡಬೇಕು. ಅತಿವೃಷ್ಟಿ ಹಾಗೂ ಪ್ರವಾಹದಿಂದ ಆಗಿರುವ ನಷ್ಟಕ್ಕೆ ಸಮರ್ಪಕ ಪರಿಹಾರವನ್ನು ತ್ವರಿತವಾಗಿ ನೀಡಬೇಕು. ರಸಗೊಬ್ಬರ ಸಮರ್ಪಕ ಪೂರೈಕೆಗೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಸರ್ಕಾರವು ಎಚ್ಚೆತ್ತುಕೊಳ್ಳದಿದ್ದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ, ದೆಹಲಿ ಮಾದರಿ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರವು ಉದ್ದಿಮೆಗಳ ₹ 9.90 ಲಕ್ಷ ಕೋಟಿ ಮನ್ನಾ ಮಾಡಿದೆ. ಅದರೆ, ಸಂಕಷ್ಟಕ್ಕೆ ಸಿಲುಕಿರುವ ರೈತರ ಸಾಲ ₹ 5.50 ಲಕ್ಷ ಕೋಟಿ ಮನ್ನಾ ಮಾಡಲು ಸಾಧ್ಯವಾಗುತ್ತಿಲ್ಲವೇಕೆ?’ ಎಂದು ಕೇಳಿದರು.

ಹೆದ್ದಾರಿ ತಡೆಯಿಂದ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಯಿತು. ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಲಕ್ಷ್ಮಿಪುರ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ವರಕೋಡು ನಾಗೇಶ್, ಕಾಟೂರು ಮಹದೇವಸ್ವಾಮಿ, ಮಹದೇವ್, ಬಸವರಾಜು, ಮಹದೇವಸ್ವಾಮಿ, ಶ್ರೀರಾಮ್, ರಾಜು, ಭಾಗ್ಯಮ್ಮ, ಸಾಕಮ್ಮ, ಶಿವಣ್ಣ, ಮಾಲಿಂಗನಾಯಕ, ಬಸವರಾಜಪ್ಪ, ಮಂಜು ಲಿಂಗಣ್ಣ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT