ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಡ್ಡೆ ಗೆಣಸು ಮೇಳ: ತಿನಿಸುಗಳ ಆಕರ್ಷಣೆ, ಆಹಾರ ತಯಾರಿಕೆ ಸ್ಪರ್ಧೆ

ಎರಡು ದಿನಗಳ ಗೆಡ್ಡೆ ಗೆಣಸು ಮೇಳ ಆರಂಭ, ಇಂದು
Last Updated 12 ಫೆಬ್ರುವರಿ 2022, 10:22 IST
ಅಕ್ಷರ ಗಾತ್ರ

ಮೈಸೂರು: ರೋಟರಿ ಕ್ಲಬ್‌ ಮೈಸೂರು ಪಶ್ಚಿಮ ಮತ್ತು ಸಹಜ ಸಮೃದ್ಧ ಸಹಯೋಗದಲ್ಲಿ ನಗರದ ನಂಜರಾಜ ಬಹದ್ದೂರ್‌ ಛತ್ರದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಗೆಡ್ಡೆ ಗೆಣಸು ಮೇಳಕ್ಕೆ ಶನಿವಾರ ಚಾಲನೆ ನೀಡಲಾಯಿತು.

ವಿವಿಧ ಗಾತ್ರ, ಆಕಾರದ ಗೆಡ್ಡೆ, ಗೆಣಸುಗಳ ಪ್ರದರ್ಶನ, ನೈಸರ್ಗಿಕ ವಸ್ತುಗಳ ಮೌಲ್ಯವರ್ಧಿತ ಉತ್ಪನ್ನಗಳು ಮೇಳದ ಪ್ರಮುಖ ಆಕರ್ಷಣೆಗಳಾಗಿವೆ. ವಿವಿಧ ಬಗೆಯ ಹಣ್ಣಿನ ಗಿಡಗಳ ಮಾರಾಟವೂ ಬಿರುಸಾಗಿ ನಡೆಯಿತು.

ಹುತ್ತರಿ ಗೆಣಸು, ನೇವೆ ಗೆಣಸು, ನೂರೆ ಗೆಣಸು, ತೋಟಂಬು ಗೆಣಸು, ಸುವರ್ಣಗೆಡ್ಡೆ, ಮರಗೆಣಸು, ಸಿಹಿ ಗೆಣಸು, ನೀಲಿ ಅರಿಶಿನ, ನೀಲಿ ಕಾಜಲ್‌, ಕೆಸುವು, ಉತ್ತರಿ ಗೆಣಸು, ಆನೆಪಾದ ಗೆಣಸು, ಬಳ್ಳಿ ಬಟಾಟೆ, ಬಿಳಿ ಕೆಸುವು, ಅರಾರೂಟ್‌, ಆಲೂಗೆಡ್ಡೆಗಳು ಗಮನ ಸೆಳೆದವು. ಹಲಸು, ನೇರಳೆ ಸೇರಿದಂತೆ ವಿವಿಧ ಹಣ್ಣಿನ ಗಿಡಗಳೂ ಮೇಳದಲ್ಲಿವೆ.

ಮೇಳಕ್ಕೆ ಚಾಲನೆ ನೀಡಿದ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಜಿ.ಹೇಮಂತ್‌ಕುಮಾರ್‌, ‘ಗೆಡ್ಡೆ ಗೆಣಸುಗಳು ಪೌಷ್ಟಿಕಾಂಶಗಳ ಆಗರವಾಗಿವೆ. ಪ್ರಕೃತಿಯ ಅಮೂಲ್ಯ ಸಂಪತ್ತಾಗಿರುವ ಇವುಗಳನ್ನು ಬಳಸಿ ಆರೋಗ್ಯ ರಕ್ಷಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ನಾವು ತಿನ್ನುವ ಆಹಾರಕ್ಕೂ ಆರೋಗ್ಯಕ್ಕೂ ನೇರ ಸಂಬಂಧ ಇದೆ. ಈ ಕಾರಣದಿಂದ ನಿಸರ್ಗದತ್ತವಾಗಿ ಬೆಳೆಯುವ ಕಂದಮೂಲಗಳನ್ನು ಸೇವಿಸಬೇಕು. ಇಂಥ ಗೆಡ್ಡೆ ಗೆಣಸುಗಳು ಸಾಗುವಳಿಯ ಭಾಗವಾಗಬೇಕು’ ಎಂದರು.

ಮೈಸೂರು ತೋಟಗಾರಿಕೆ ವಿಶ್ವವಿದ್ಯಾಲಯದ ಡೀನ್‌ ಡಾ.ವಿಷ್ಣುವರ್ಧನ, ‘ನಮ್ಮ ಪೂರ್ವಿಕರ ಆಹಾರವಾಗಿದ್ದ ಗೆಡ್ಡೆ ಗೆಣಸುಗಳನ್ನು ಮತ್ತೆ ಅನ್ನದ ಬಟ್ಟಲಿಗೆ ಬರಮಾಡಿಕೊಳ್ಳಬೇಕು’ ಎಂದರು.

ಸಹಜ ಸಮೃದ್ಧದ ನಿರ್ದೇಶಕ ಜಿ.ಕೃಷ್ಣಪ್ರಸಾದ್‌, ‘ಗೆಡ್ಡೆ ಗೆಣಸುಗಳ ಮೌಲ್ಯವರ್ಧನೆ ಮಾಡಬೇಕಿದ್ದು, ಇದಕ್ಕೆ ಜಿಲ್ಲಾಡಳಿತ ಅಗತ್ಯ ನೆರವು ನೀಡಬೇಕು’ ಎಂದು ಮನವಿ ಮಾಡಿದರು.

ಮೈಸೂರು ಪಶ್ಚಿಮ ರೋಟರಿ ಕ್ಲಬ್‌ ಅಧ್ಯಕ್ಷ ಡಾ.ಬಿ.ಚಂದ್ರ ಅಧ್ಯಕ್ಷತೆ ವಹಿಸಿದ್ದರು.

ಹಾಸನದ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಮುಖ್ಯಸ್ಥ ಡಾ.ಎಚ್‌.ಅಮರನಂಜುಂಡೇಶ್ವರ, ವಿದ್ಯಾವರ್ಧಕ ಸಂಘದ ಚಂದ್ರಮೋಹನ್‌, ಮೈಸೂರು ಪಶ್ಚಿಮ ರೋಟರಿ ಕ್ಲಬ್‌ ಕಾರ್ಯದರ್ಶಿ ಡಾ.ಮೋಹನ್‌ಕೃಷ್ಣ, ಕುಮಾರಿ, ಗೌರಮ್ಮ ಇದ್ದರು.

ಇಂದು ಆಹಾರ ತಯಾರಿಕೆ ಸ್ಪರ್ಧೆ: ಕಂದ ಮೂಲಗಳಿಂದ ಆಹಾರ ತಯಾರಿಸುವ ಸ್ಪರ್ಧೆ ಫೆ.12ರಂದು ನಡೆಯಲಿದೆ. ವಿಜೇತರಿಗೆ ಬಹುಮಾನ ವಿತರಣೆಯೂ ನಡೆಯಲಿದೆ.

ಪುತ್ತೂರು ಶಿರಸಿ, ಜೊಯಿಡಾ, ಮೈಸೂರು, ಪಿರಿಯಾಪಟ್ಟಣ, ಎಚ್‌.ಡಿ.ಕೋಟೆ, ಕುಂದಗೋಳ ಹಾಗೂ ಶಿಗ್ಗಾವಿ ತಾಲ್ಲೂಕಿನ ರೈತರ ಗುಂಪುಗಳು ಗೆಡ್ಡೆ ಗೆಣಸುಗಳನ್ನು ಪ್ರದರ್ಶನಕ್ಕೆ ತಂದಿವೆ. ಬುಡಕಟ್ಟು ಸಮುದಾಯಗಳು ಸಂರಕ್ಷಿಸಿರುವ ಬೃಹತ್‌ ಗೆಡ್ಡೆ, ಗೆಣಸುಗಳು ಪ್ರಮುಖ ಆಕರ್ಷಣೆಯಾಗಿವೆ. ಪರ್ಪಲ್‌ ಯಾಮ್‌ನಿಂದ ತಯಾರಿಸಿರುವ ಐಸ್‌ಕ್ರೀಂ, ವಿವಿಧ ಗೆಣಸುಗಳ ತಿನಿಸುಗಳೂ ಮೇಳದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT