ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಂಡರನ್ನು ‍ಬೇರು ಸಮೇತ ಕಿತ್ತೊಗೆಯಲು ಪಣ

‘ಸೂರಿಗ್ಯಾಂಗ್‌’ ಸದೆಬಡಿದ ಕೆ.ಆರ್.ಉಪವಿಭಾಗದ ಪೊಲೀಸರು
Last Updated 6 ಜೂನ್ 2019, 20:36 IST
ಅಕ್ಷರ ಗಾತ್ರ

ಮೈಸೂರು: ನಗರದ ಪಾತಕ ಲೋಕದಲ್ಲಿ ಕುಖ್ಯಾತವಾಗಿದ್ದ ‘ಸೂರಿಗ್ಯಾಂಗ್‌’ಅನ್ನು ಹೆಡೆಮುರಿ ಕಟ್ಟುವಲ್ಲಿ ಕೆ.ಆರ್.ಉಪವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ನಷ್ಟು ಪುಡಿರೌಡಿಗಳಿಗೆ ಬಿಸಿ ಮುಟ್ಟಿಸಲು ಕಾರ್ಯತಂತ್ರ ಹೆಣೆದಿದ್ದಾರೆ.

ಉದಯಗಿರಿ, ಕೆ.ಜಿ.ಕೊಪ್ಪಲು, ಹೆಬ್ಬಾಳು, ಕನಕಗಿರಿ, ರಮಾಬಾಯಿನಗರ, ಅಶೋಕಪುರಂ, ನಾಚನಹಳ್ಳಿಪಾಳ್ಯ ಸೇರಿದಂತೆ ಹಲವು ಬಡಾವಣೆಗಳಲ್ಲಿ ಯುವಕರು ತಮ್ಮದೇ ಆದ ‘ಗ್ಯಾಂಗ್‌’ ಕಟ್ಟಿಕೊಂಡು ಪಾತಕ ಲೋಕದ ಪ್ರವೇಶ ಪಡೆಯುತ್ತಿದ್ದರು.

ಮೀಟರ್ ಬಡ್ಡಿ ವಸೂಲಾತಿಗೆ ಲೇವಾದೇವಿಗಾರರಿಂದ ಸುಪಾರಿ ಪಡೆಯುವುದು ಇವರ ಪ್ರಮುಖ ದಂಧೆ. ಇದರ ಜತೆಗೆ ಪ್ರೇಮಿಗಳನ್ನು ಬೇರ್ಪಡಿಸುವುದು, ಹಳೆಯ ಪ್ರೇಮಿಯ ಹೊಸ ಗೆಳೆಯನನ್ನು ಬೆದರಿಸುವುದು, ವ್ಯವಹಾರದಲ್ಲಿ ಉಂಟಾಗುವ ದ್ವೇಷಕ್ಕೆ ಹಲ್ಲೆ ನಡೆಸಲು ಇಂತಹ ಗುಂಪುಗಳಿಗೆ ಹಲವರು ಸುಪಾರಿ ನೀಡುತ್ತಿದ್ದರು.

ಈ ಗುಂಪುಗಳ ಸದಸ್ಯರು ಕೈಯಲ್ಲಿ ಲಾಂಗು, ಮಚ್ಚುಗಳನ್ನು ಝಳಪಿಸುತ್ತ ಹಲ್ಲೆ ನಡೆಸಿ ಬೆದರಿಕೆ ಹಾಕುತ್ತಿದ್ದರು. ಹಲ್ಲೆಗೆ ಒಳಗಾದವರು ಜೀವಭಯದಿಂದ ದೂರು ದಾಖಲಿಸುವ ಗೋಜಿಗೆ ಹೋಗುತ್ತಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಲಾಂಗು ಮತ್ತು ಮಚ್ಚುಗಳ ಝಳಪಿಸುವಿಕೆಯ ವಿಡಿಯೊಗಳು ವಾಟ್ಸ್‌ಆ್ಯಪ್‌ಗಳಲ್ಲಿ ವೈರಲ್‌ ಆಗುತ್ತಿದ್ದುದ್ದನ್ನು ಬಿಟ್ಟರೆ ಹೊರ ಪ್ರಪಂಚಕ್ಕೆ ತಿಳಿಯುತ್ತಿರಲಿಲ್ಲ.

ಇದರ ಜತೆಗೆ, ನಗರದ ಹೊರವಲಯದಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುವುದು, ಬೀದಿಬದಿ ವ್ಯಾಪಾರಸ್ಥರು ಹಾಗೂ ಅಮಾಯಕರನ್ನು ಬೆದರಿಸಿ ಹಣ ಕೀಳುವ ದಂಧೆಯನ್ನೂ ಇಂತಹ ಗುಂಪುಗಳು ನಡೆಸುತ್ತಿದ್ದವು. ಇದರಿಂದ ನಿರ್ಜನ ಪ್ರದೇಶಗಳಲ್ಲಿ ಒಂಟಿಯಾಗಿ ಮಹಿಳೆಯರು ಓಡಾಡುವುದು ದುಸ್ತರ ಎನಿಸಿತ್ತು.

ಹೊರವಲಯದಲ್ಲಿ ಸಂಜೆ ವೇಳೆ ಕದ್ದು ಮುಚ್ಚಿ ಓಡಾಡುವ ಪ್ರೇಮಿಗಳಿಗೆ ಲೈಂಗಿಕ ಕಿರುಕುಳ ನೀಡುವುದು ಇವರ ನಿತ್ಯದ ಪರಿಪಾಠವಾಗಿತ್ತು. ಮರ್ಯಾದೆಗೆ ಅಂಜುವ ಅನೇಕ ಯುವತಿಯರು ತಮಗಾದ ಲೈಂಗಿಕ ಕಿರುಕುಳವನ್ನು ಯಾರಲ್ಲೂ ಹೇಳಿಕೊಳ್ಳದೆ ಪರಿತಪಿಸುತ್ತಿದ್ದರು.

ಹಗಲಿನ ವೇಳೆ ಸುಮ್ಮನೇ ಒಂದು ಕಡೆ ಮಲಗಿರುತ್ತಿದ್ದ ಇವರು ಸಂಜೆಯ ನಂತರ ಚಟುವಟಿಕೆ ಆರಂಭಿಸಿ ತಡರಾತ್ರಿಯವರೆಗೂ ಸುಲಿಗೆ, ಕಿರುಕುಳ, ದಾಂದಲೆಗಳಲ್ಲಿ ತೊಡಗಿರುತ್ತಿದ್ದರು ಎಂದು ಪೊಲೀಸರು ಹೇಳುತ್ತಾರೆ.

ಸದ್ಯ ಬಂಧನಕ್ಕೆ ಒಳಗಾಗಿರುವ ಸೂರ್ಯಕುಮಾರ್ ಅಲಿಯಾಸ್ ಸೂರಿ (23), ಮಧು ಅಲಿಯಾಸ್ ಬಾಂಡ್ (23) ಪ್ರಶಾಂತ್ ಅಲಿಯಾಸ್ ತಮಿಳ್ (21), ಕಾರ್ತಿಕ್‌ ಕುಮಾರ್ (25), ಜೀವನ್ (25) ಹಾಗೂ ಸಂಜಯ್ (20) ಎಂಬ 6 ಮಂದಿ ಆರೋಪಿಗಳು ಇಂತಹ ಅನೇಕ ಕೃತ್ಯಗಳನ್ನು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇವರು ‘ಸೂರಿಗ್ಯಾಂಗ್’ ಎಂದ ಹೆಸರಿನಲ್ಲಿ ಸುಪಾರಿ ತೆಗೆದುಕೊಳ್ಳುತ್ತಿದ್ದ ಅಂಶ ವಿಚಾರಣೆ ವೇಳೆ ಗೊತ್ತಾಗಿದೆ. ಯುವಕನೊಬ್ಬನಿಂದ ಯುವತಿಯ ಹೊಸ ಗೆಳೆಯನ ಮೇಲೆ ಹಲ್ಲೆ ನಡೆಸಲು ಸುಪಾರಿ ಪಡೆದ ಇವರು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪ ಇವರ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT