ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತರಿಗೆ ಪರಿಹಾರ ನೀಡುವಾಗ ಪಕ್ಷ ನೋಡಬೇಡಿ: ಎಸ್.ಟಿ. ಸೋಮಶೇಖರ್‌ ತಾಕೀತು

Last Updated 29 ಆಗಸ್ಟ್ 2022, 11:36 IST
ಅಕ್ಷರ ಗಾತ್ರ

ಮೈಸೂರು: ‘ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿ ಅನುಭವಿಸಿದ ಸಂತ್ರಸ್ತರಿಗೆ ಪರಿಹಾರ ವಿತರಣೆಯಲ್ಲಿ ಪಕ್ಷ ನೋಡಬಾರದು. ಈ ವಿಷಯದಲ್ಲಿ ರಾಜಕಾರಣ ‌ಸಲ್ಲದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌ ತಾಕೀತು ಮಾಡಿದರು.

ಜಿಲ್ಲೆಯಲ್ಲಿ ಮಳೆಯಿಂದ ಹಾನಿ ಉಂಟಾಗಿರುವ ಹಿನ್ನೆಲೆಯಲ್ಲಿ, ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಳೆಯ ಮುನ್ಸೂಚನೆ ಇದ್ದಲ್ಲಿ, ಶಾಲಾಗಳಿಗೆ ಮುಂಚಿತವಾಗಿಯೇ ರಜೆ ಘೋಷಿಸಬೇಕು. ತರಗತಿಗಳು ಶುರುವಾದ ಮೇಲೆ ರಜೆ ಕೊಟ್ಟರೆ ಏನೂ ಪ್ರಯೋಜನ ಆಗುವುದಿಲ್ಲ. ಮಳೆಯ ನಡುವೆಯೂ ಮಕ್ಕಳನ್ನು ಬಿಟ್ಟು ಹೋದ ಪೋಷಕರಿಗೆ ಗೊಂದಲವೂ ಉಂಟಾಗುತ್ತದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದುಕೊಂಡು ಪರಿಸ್ಥಿತಿ ಅವಲೋಕಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.

ಲಿಂಗಾಂಬುಧಿಯಿಂದ ಸಮಸ್ಯೆ:

ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಲಿಂಗಾಂಬುಧಿ ಕೆರೆಯ ನೀರು ವಿವಿಧ ಬಡಾವಣೆಗಳಲ್ಲಿ ಮನೆಗಳಿಗೆ‌‌ ನುಗ್ಗುತ್ತಿದೆ. ಇದರಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ.‌ ಇದಕ್ಕೆ ಶಾಶ್ವತ ಪರಿಹಾರ ನೀಡಬೇಕು.‌ ರಾಜಕಾಲುವೆಗಳ ದುರಸ್ತಿಗಾಗಿ ₹ 27 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದ್ದು, ಅನುದಾನ ಒದಗಿಸಬೇಕು ಎಂದು ಒತ್ತಾಯಿಸಿದರು.

ದನಿಗೂಡಿಸಿದ ಶಾಸಕ ಸಾ.ರಾ.ಮಹೇಶ್, ‘ಅಲ್ಲಲ್ಲಿ ಮಳೆ ನೀರು ಚರಂಡಿಗಳು ಹಾಗೂ ಕಾಲುವೆಗಳು ಮುಚ್ಚಿ ಹೋಗಿರುವುದನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಜನರು ನೆಮ್ಮದಿಯಿಂದ ಬದುಕುವುದಕ್ಕೆ ಸಾಧ್ಯವಾಗುವುದಿಲ್ಲ’ ಎಂದು ಹೇಳಿದರು.

ಪ್ರತಿ ಮಳೆಗಾಲದಲ್ಲೂ ಸಮಸ್ಯೆ ಎದುರಾಗುತ್ತಿದ್ದರೂ ಶಾಶ್ವತ ಪರಿಹಾರ ಕೈಗೊಳ್ಳುತ್ತಿಲ್ಲವೇಕೆ? ಎಂದು ವಿಧಾನಪರಿಷತ್ ‌ಸದಸ್ಯ ಸಿ‌.ಎನ್. ಮಂಜೇಗೌಡ ಕೇಳಿದರು.

ರಾಜಕಾಲುವೆಗಳನ್ನು ತೆರವುಗೊಳಿಸದೆ ಈ ಸಮಸ್ಯೆಗೆ ಪರಿಹಾರ ದೊರೆಯುವುದಿಲ್ಲ. ಪರಿಣತರ ಸಮಿತಿ‌ ರಚಿಸಿ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಜಿಟಿಡಿ ಸೂಚಿಸಿದರು.

ನಾಗೇಂದ್ರಗೆ ಸಚಿವರ ಟಾಂಗ್!:

ಶಾಸಕ ಎಲ್.ನಾಗೇಂದ್ರ ಮಾತನಾಡಿ, ‘ಮುಡಾ ಬಡಾವಣೆಗಳಲ್ಲಿ ಮೋರಿಗಳು ಹಾಳಾಗಿವೆ. ವಿಜಯನಗರ 1ನೇ ಹಾಗೂ 2ನೇ ಹಂತದಲ್ಲಿ ಬಹಳ ಸಮಸ್ಯೆ ಇದೆ. ಹೀಗಾದರೆ ಜನರ ಸಮಸ್ಯೆ ನಿವಾರಣೆಯಾಗುವುದು ಯಾವಾಗ’ ಎಂದು ಖಾರವಾಗಿ ಪ್ರಶ್ನಿಸಿದರು.

‘ನೀವು ‘ಮುಡಾ’ ಅಧ್ಯಕ್ಷರಾಗಿದ್ದಾಗ ಇದೆಲ್ಲವನ್ನೂ ಗಮನಿಸಿರಲಿಲ್ಲವೇ?’ ಎಂದು ಸಚಿವ ಸೋಮಶೇಖರ್ ಟಾಂಗ್ ನೀಡಿದರು. ‘ಇಲ್ಲ ನಾನು ಗಮನಿಸಿರಲಿಲ್ಲ. ಶಾಸಕನಾದ ಮೇಲೆ ಹೆಚ್ಚಿನ ಸಮಸ್ಯೆಗಳು ಗೊತ್ತಾಗುತ್ತಿವೆ. ಈಗ ನೀವು ಪರಿಹರಿಸಿಕೊಡಬೇಕು. ಸರ್ಕಾರಕ್ಕೆ ಹೋಗುವ ಫೈಲ್‌ಗಳು ಎಲ್ಲೆಲ್ಲೋ ಬಿದ್ದಿರುತ್ತದೆ. ಮಳೆ ನೀರು ಚರಂಡಿಗಳ‌ ನಿರ್ಮಾಣಕ್ಕೆ ₹ 30 ಕೋಟಿ ಕೇಳಿದ್ದೇವೆ. ಅದನ್ನು ಮುಖ್ಯಮಂತ್ರಿ ಜೊತೆ ನೀವೇ ನೇರವಾಗಿ ಮಾತನಾಡಿ ಅನುಮೋದನೆ ಕೊಡಿಸಬೇಕು’ ಎಂದು ಕೋರಿದರು.

ಅಷ್ಟು ತರಾತುರಿ ಏನಿತ್ತು?:
ಮುಡಾದಿಂದ ಕಾಮಗಾರಿ ಪೂರ್ಣಗೊಳ್ಳದೆ ಬಡಾವಣೆಗಳನ್ನು ಮಹಾನಗರಪಾಲಿಕೆಗೆ ಹಸ್ತಾಂತರ ಮಾಡಿದ್ದು ಏಕೆ? ಅಷ್ಟು ತರಾತುರಿ ಏನಿತ್ತು? ಎಂದು ಮಹೇಶ್ ಕೇಳಿದರು.

ಸಿಂಧುವಳ್ಳಿ ಸೇತುವೆ ಒಡೆದು ಹೋಗಿದ್ದು, ಜನ ಸಂಚಾರ ಸಾಧ್ಯವಾಗುತ್ತಿಲ್ಲ. ಕಲ್ಲೂರ ನಾಗನಹಳ್ಳಿ ಸೇತುವೆ‌‌ ಬಿದ್ದಿದೆ. ಆನಂದೂರು, ಉದ್ಬೂರಲ್ಲೂ ಸೇತುವೆ ಇಲ್ಲ. ಜಯಪುರದಲ್ಲಿ ಕೆರೆ ಕೋಡಿ ಬಿದ್ದು, ಸೇತುವೆ ಹಾಳಾಗಿದೆ. ರಸ್ತೆಯಲ್ಲು ಕೊರಕಲು ಉಂಟಾಗಿದೆ. ಕೆ.ಹೆಮ್ಮನಹಳ್ಳಿ, ಜಟ್ಟಿಹುಂಡಿ ಕೆರೆಗಳು ಒಡೆದಿವೆ. ಇವೆಲ್ಲವನ್ನೂ ದುರಸ್ತಿ ಮಾಡಿಸಬೇಕು ಎಂದು ಜಿ.ಟಿ. ದೇವೇಗೌಡ ಒತ್ತಾಯಿಸಿದರು.

ಸ್ಪಂದಿಸಿದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ‘ಜನರ‌ ಸಂಚಾರಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಸೇತುವೆಗಳನ್ನು ತ್ವರಿತವಾಗಿ ದುರಸ್ತಿ ಮಾಡಬೇಕು’ ಎಂದು ಜಿಲ್ಲಾ ಪಂಚಾಯಿತಿ, ಲೋಕೋಪಯೋಗಿ ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಜಿ.ಪಂ. ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಇಒ ಬಿ.ಆರ್.ಪೂರ್ಣಿಮಾ ತಿಳಿಸಿದರು.

ಪಿರಿಯಾಪಟ್ಟಣ ಶಾಸಕ‌ ಕೆ.ಮಹದೇವ್, ‘ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಅತಿಯಾದ ಮಳೆಯಿಂದ ಬಹಳ ಹಾನಿಯಾಗಿದೆ. ಮಣ್ಣಿನಿಂದ ‌ನಿರ್ಮಾಣವಾದ ಮನೆಗಳು‌ ಬಹಳಷ್ಟಿವೆ. ಹಾನಿಯಾದ ಅವುಗಳನ್ನು ‘ಸಿ’ ವರ್ಗದಲ್ಲಿ ಸೇರಿಸಲಾಗಿದೆ. ಇದರಿಂದ ಜನರಿಗೆ ಅನ್ಯಾಯವಾಗುತ್ತದೆ. 2019ರಲ್ಲಿ ಉಂಟಾಗಿದ್ದ ಅತಿವೃಷ್ಟಿಯಿಂದಾದ ಹಾನಿಗೆ ಈವರೆಗೂ ಪರಿಹಾರ ಸಿಕ್ಕಿಲ್ಲ. ಎಲ್ಲರಿಗೂ ಸಮರ್ಪಕವಾಗಿ ‌ಪರಿಹಾರ ಕೊಡಬೇಕು’ ಎಂದು ಒತ್ತಾಯಿಸಿದರು.

ಮಳೆಯಿಂದ ಹಾನಿಯಾಗಿರುವ ಪ್ರತಿ ಮನೆಗೂ ನಿಯಮಾನುಸಾರ ಪರಿಹಾರ ಕೊಡಲಾಗುತ್ತದೆ. ಪಟ್ಟಿ ಸಿದ್ಧಪಡಿಸುವಾಗ ಮಾನವೀಯತೆಯ ದೃಷ್ಟಿಯಿಂದ ಹಾಗೂ ಸಹಾನುಭೂತಿಯಿಂದ ಪರಿಗಣಿಸಬೇಕು ಎಂದು‌ ತಹಶೀಲ್ದಾರ್‌ಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ತಿಳಿಸಿದರು.

ನಗರಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ ಮತ್ತು ಎಸ್ಪಿ ಆರ್. ಚೇತನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT