ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನಷ್ಟು ಮಂದಿಯಿಂದ ಬೆನ್ನಿಗೆ ಚೂರಿ

ಜೆಡಿಎಸ್‌ನಿಂದ ಹೋದವರ ಸಾಲಿಗೆ ಮತ್ತಷ್ಟು ಶಾಸಕರು: ಸಾ.ರಾ. ಮಹೇಶ್‌
Last Updated 13 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಮೈಸೂರು: ‘ಎಚ್‌.ಡಿ.ಕುಮಾರಸ್ವಾಮಿ ಅವರ ಬೆನ್ನಿಗೆ ಚೂರಿಹಾಕಿ ಇನ್ನಷ್ಟು ಮಂದಿ ಜೆಡಿಎಸ್‌ನಿಂದ ಹೊರ ಹೋಗಲಿದ್ದಾರೆ’ ಎಂದು ಶಾಸಕ ಸಾ.ರಾ.ಮಹೇಶ್‌ ಶುಕ್ರವಾರ ಇಲ್ಲಿ ಹೇಳಿದರು.

‘ಕೆಲವರು ಚೂರಿ ಹಾಕಿ ಈಗಾಗಲೇ ಪಕ್ಷ ಬಿಟ್ಟು ಹೋಗಿದ್ದಾರೆ. ಆ ಸಾಲಿನಲ್ಲಿ ಇನ್ನಷ್ಟು ಶಾಸಕರಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಇಂತಹ ಚೂರಿ ಇರಿತಗಳನ್ನು ಅರಗಿಸಿಕೊಳ್ಳುವ ಶಕ್ತಿ ಕುಮಾರಸ್ವಾಮಿ ಅವರಿಗಿದೆ’ ಎಂದರು.

‘ಎಚ್‌ಡಿಕೆ, ಅದೃಷ್ಟದಿಂದ ಸಿ.ಎಂ ಆದರು’ ಎಂಬ ಸಚಿವ ವಿ.ಸೋಮಣ್ಣ ಹೇಳಿಕೆಗೆ ತಿರುಗೇಟು ನೀಡಿದ ಮಹೇಶ್‌, ‘ಎಚ್‌.ಡಿ.ದೇವೇಗೌಡ ಅವರ ಸಂಘಟನಾ ಬಲ ಮತ್ತು ಶ್ರಮದಿಂದ ಅವರು ಸಿ.ಎಂ ಆಗಿದ್ದರು. ನೀವು ಹೇಗೆ ಸರ್ಕಾರ ರಚಿಸಿದ್ದೀರಿ ಎಂಬುದನ್ನು ಚಾಮುಂಡೇಶ್ವರಿ ಸನ್ನಿಧಿಯಲ್ಲಿ ನಿಂತು ಆತ್ಮಾವಲೋಕನ ಮಾಡಿಕೊಳ್ಳಿ’ ಎಂದರು.

‘ಜಿ.ಟಿ.ದೇವೇಗೌಡ ಅವರು ನಮ್ಮ ಪಕ್ಷದ ಪ್ರಶ್ನಾತೀತ ನಾಯಕರು. ಮೈತ್ರಿ ಸರ್ಕಾರದ ಅವಧಿಯಲ್ಲಿ ಅವರಿಗೆ ಸಹಜವಾಗಿ ನೋವಾಗಿದೆ. ನನಗೆ ಮತ್ತು ಕಾರ್ಯಕರ್ತರಿಗೂ ನೋವಾಗಿದೆ. ನಾವು ಎಲ್ಲವನ್ನೂ ಸಹಿಸಿಕೊಂಡಿದ್ದೇವೆ. ಈಗ ಏನು ಮಾಡಲು ಆಗುತ್ತದೆ?’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

‘ಪಕ್ಷದ ನಾಯಕತ್ವದ ವಿರುದ್ಧ ಮಾತನಾಡಿದರೆ ಶಿಸ್ತು ಕ್ರಮ’

ಬಳ್ಳಾರಿ: ‘ಪಕ್ಷದ ನಾಯಕತ್ವದ ವಿರುದ್ಧ ಮಾತನಾಡಿ, ಯಾರು ಪಕ್ಷ ಬಿಟ್ಟು ಹೋಗಿದ್ದಾರೋ ಅವರು ಈಗ ವೆಂಟಿಲೇಟರ್‌ನಲ್ಲಿದ್ದಾರೆ. ಪಕ್ಷ ಹಾಗೂ ಪಕ್ಷದ ಮುಖಂಡರ ವಿರುದ್ಧ ಯಾರಾದರೂ ಬಹಿರಂಗವಾಗಿ ಹೇಳಿಕೆ ಕೊಟ್ಟರೆ ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಕೆ. ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮ ಪಕ್ಷದಲ್ಲಿ ಭಿನ್ನಾಭಿಪ್ರಾಯ ಇರುವುದು ನಿಜ. ಆದರೆ, ಯಾವ ಶಾಸಕರು ಪಕ್ಷ ಬಿಡುವುದಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಬಿಎಸ್‌ವೈ ವಿರುದ್ಧದ ಪ್ರಕರಣ: ಬಿಜೆಪಿ ನಾಯಕರ ಒತ್ತಡ’

ಯಾದಗಿರಿ: ‘ಆಪರೇಷನ್ ಕಮಲಕ್ಕಾಗಿ ಬಿ.ಎಸ್‌.ಯಡಿಯೂರಪ್ಪ ಅವರು ನನಗೆ ಹಣದ ಆಮಿಷವೊಡ್ಡಿದ ಪ್ರಕರಣ ಮುಂದುವರಿಸುವಂತೆಬಿಜೆಪಿಯ ಅಗ್ರಗಣ್ಯ ನಾಯಕರೊಬ್ಬರು ಹೇಳಿದ್ದಾರೆ. ನನ್ನ ಜೊತೆ ಫೋನ್‌ನಲ್ಲಿ ಸಂಭಾಷಣೆ ನಡೆಸಿರುವ ಈ ನಾಯಕರು, ಯಡಿಯೂರಪ್ಪಗೆಖೆಡ್ಡಾ ತೋಡುತ್ತಿದ್ದಾರೆ’ ಎಂದು ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಅವರ ಪುತ್ರ, ಜೆಡಿಎಸ್ ರಾಜ್ಯ ಯುವ ಘಟಕದ ಮಹಾಪ್ರಧಾನ ಕಾರ್ಯದರ್ಶಿ ಶರಣಗೌಡ ಕಂದಕೂರ ಹೇಳಿದರು.

ಹೈದರಾಬಾದ್‌ ಕರ್ನಾಟಕ ಪ್ರದೇಶದ ಅಭಿವೃದ್ಧಿ ಮಂಡಳಿಯ ಮುಖ್ಯಮಂತ್ರಿ ವಿವೇಚನಾ ನಿಧಿಯಿಂದ ಕ್ಷೇತ್ರಕ್ಕೆ ಹಂಚಿಕೆ ಮಾಡಿದ್ದ ಅನುದಾನವನ್ನು ಯಡಿಯೂರಪ್ಪ ವಾಪಸ್‌ ಪಡೆದಿದ್ದಕ್ಕೆ ಗುರುಮಠಕಲ್‌ನಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ‌ಮಾತನಾಡಿದ ಅವರು, ‘ನನ್ನ ಮುಖಾಂತರ ಬಿಜೆಪಿಯವರು ಯಡಿಯೂರಪ್ಪರಿಗೆ ಖೆಡ್ಡಾ ತೋಡಿದ್ದಾರೆ. ಇನ್ನೆರಡು ದಿನದಲ್ಲಿ ನಮ್ಮ ನಾಯಕರನ್ನು ಭೇಟಿಯಾಗಿ ಆ ಪ್ರಕರಣದ ಬಗ್ಗೆ ಚರ್ಚಿಸುವೆ.ಯಡಿಯೂರಪ್ಪಅವರಿಗೆ ಒಂದು ಗತಿ ಕಾಣಿಸುವೆ’ ಎಂದರು. ‘ಯಡಿಯೂರಪ್ಪ ಹತಾಶರಾಗಿದ್ದು, ಅವರ ಅಧಿಕಾರ ಅವಧಿ ಐದಾರು ತಿಂಗಳು ಮಾತ್ರ’ ಎಂದು ಅವರು ಹೇಳಿದರು.

ಅಸಮಾಧಾನಗೊಂಡ ಶಾಸಕರ ಜತೆ ವರಿಷ್ಠರು ಮಾತನಾಡಲಿ’

ಧಾರವಾಡ: ‘ಜೆಡಿಎಸ್‌ನ ಕೆಲ ಶಾಸಕರು ಪಕ್ಷದ ವಿರುದ್ಧ ತಮ್ಮ ಅಸಮಾಧಾನ ಹೊರಹಾಕುತ್ತಿದ್ದು, ವರಿಷ್ಠರು ಮಧ್ಯಪ್ರವೇಶಿಸಿ ಸಮಾಲೋಚನೆ ನಡೆಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.

‘ಜಿ.ಟಿ. ದೇವೇಗೌಡರು ಎಲ್ಲಿಗೆ ಹೋಗುತ್ತಾರೆ ಎನ್ನುವುದು ಗೊತ್ತಿಲ್ಲ. ಆದರೆ, ಪಕ್ಷದಲ್ಲಂತೂ ಅವರು ಇರುವುದಿಲ್ಲ. ಅವರಿಗೆ ಈ ಮೊದಲೇಅಸಮಾಧಾನವಿತ್ತು, ಉಸಿರುಗಟ್ಟುವ ವಾತಾವರಣ ಇದೆ ಎಂದಿದ್ದರು. ಇವರಂತೆಯೇ ಅಸಮಾಧಾನ ಗೊಂಡಿರುವವರೊಂದಿಗೆ ಸಮಾಲೋಚನೆ ನಡೆಸಿಸಮಾಧಾನಪಡಿಸಿದರೆ ಮಾತ್ರ ಪಕ್ಷಕ್ಕೆ ಭವಿಷ್ಯ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT