ಶನಿವಾರ, ಜನವರಿ 16, 2021
22 °C

ತಪಾಸಣೆ ನೆಪದಲ್ಲಿ ಪೊಲೀಸರಿಂದ ರೋಲ್‌ಕಾಲ್‌: ಸಾ.ರಾ.ಮಹೇಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಮಾಸ್ಕ್‌ ಹಾಗೂ ದಾಖಲೆಗಳ ತಪಾಸಣೆ ನೆಪದಲ್ಲಿ ಸರ್ಕಾರವೇ ಪೊಲೀಸರ ಮೂಲಕ ರೋಲ್‌ಕಾಲ್‌ ನಡೆಸುತ್ತಿದೆ’ ಎಂದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್‌ ಆರೋಪಿಸಿದರು.

‘ಸರ್ಕಾರದ ಬಳಿ ಹಣವಿದೆಯೋ ಇಲ್ಲವೋ ಗೊತ್ತಿಲ್ಲ. ಒಂದೊಂದು ತಾಲ್ಲೂಕಿನಿಂದ, ಒಂದೊಂದು ಠಾಣೆಯಿಂದ ಇಂತಿಷ್ಟು ವಸೂಲಿ ಮಾಡಬೇಕೆಂದು ಅಧಿಕಾರಿಗಳಿಗೆ ಸರ್ಕಾರವೇ ಗುರಿ ನೀಡಿದೆ. ರಹದಾರಿ ಇಟ್ಟುಕೊಂಡು ರೋಲ್‌ಕಾಲ್‌ ಮಾಡುವ ರೀತಿ ಇದಾಗಿದೆ. ಇದನ್ನು ತಕ್ಷಣವೇ ನಿಲ್ಲಿಸುವಂತೆ ಗೃಹ ಸಚಿವರು ಸೂಚನೆ ನೀಡಬೇಕು’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಬೈಕ್‌ನಲ್ಲಿ ತೆರಳಿ ಕೂಲಿ ಕೆಲಸ ಮಾಡುವವರಿಗೆ ₹ 500 ದಂಡ ವಿಧಿಸಿದರೆ ಅವರು ಎಲ್ಲಿಂದ ಹಣ ತರುತ್ತಾರೆ? ದುಡಿಮೆಯನ್ನು ದಂಡಕ್ಕೆಂದು ಪಾವತಿಸಬೇಕೇ? ಈಗಾಗಲೇ ಕೋವಿಡ್‌ನಿಂದ ಜನ ಸಾಕಷ್ಟು ನೊಂದಿದ್ದಾರೆ. ಅಧಿಕಾರಿಗಳಿಗೆ ನೀಡಿರುವ ಗುರಿಯನ್ನು ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

ಸಿಂಧೂರಿ ವಿರುದ್ಧ ಹಕ್ಕುಚ್ಯುತಿ ಮಂಡನೆ: ಕೆ.ಆರ್.ನಗರ ಕ್ಷೇತ್ರದಲ್ಲಿ ಚುನಾಯಿತ ಪ್ರತಿನಿಧಿಗಳನ್ನು ಆಹ್ವಾನಿಸದೇ ಶಿಷ್ಟಾಚಾರ ಉಲ್ಲಂಘಿಸಿ, ಕಾರ್ಯಕ್ರಮ ನಡೆಸಲು ದಿನಾಂಕ ನಿಗದಿ ಮಾಡಿರುವ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ವಿಧಾನಸಭೆ ಅಧಿವೇಶನದಲ್ಲಿ ಹಕ್ಕುಚ್ಯುತಿ ಮಂಡಿಸುವುದಾಗಿ ಸಾ.ರಾ.ಮಹೇಶ್‌ ತಿಳಿಸಿದರು.

‘ಸಿಂಧೂರಿ ಅವರಿಗೆ ಪ್ರಚಾರದ ಗೀಳು ಇದ್ದರೆ ಜಿಲ್ಲಾಧಿಕಾರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆಗೆ ಸ್ಪರ್ಧಿಸಲಿ’ ಎಂದು ಸವಾಲು ಹಾಕಿದರು.

ದಾಖಲೆ ಬಿಡುಗಡೆ ಮಾಡುವೆ: ‘ಮೈಸೂರು ಜಿಲ್ಲಾಧಿಕಾರಿ ಆಗಿದ್ದ ಶರತ್‌ ಅವರು ತಮ್ಮ ವರ್ಗಾವಣೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಮೇಲ್ಮನವಿಯನ್ನು ಕೇಂದ್ರೀಯ ಆಡಳಿತಾತ್ಮಕ ನ್ಯಾಯಾಧಿಕರಣ (ಸಿಎಟಿ) ಪದೇಪದೇ ಮುಂದೂಡುತ್ತಿದೆ. ಈ ವಿಚಾರವಾಗಿ ಅನುಮಾನ ಮೂಡಿದ್ದು, ಈ ರೀತಿ ಏಕೆ ಆಗುತ್ತಿದೆ ಎಂಬುದನ್ನು ಕೆಲವೇ ದಿನಗಳಲ್ಲಿ ದಾಖಲೆ ಸಮೇತ ಬಹಿರಂಗಪಡಿಸುತ್ತೇನೆ’ ಎಂದರು.

‘ಬಿಎಸ್‌ವೈಗೂ ಎಚ್‌ಡಿಕೆ ಸ್ಥಿತಿ’

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೂ ಈಗ ಎಚ್‌.ಡಿ.ಕುಮಾರಸ್ವಾಮಿ ಪರಿಸ್ಥಿತಿ ಬಂದೊದಗಿದೆ ಎಂದು ಸಾ.ರಾ.ಮಹೇಶ್‌ ಹೇಳಿದರು.

‘ರಾಜ್ಯ ಬಿಜೆಪಿ ಸರ್ಕಾರದಲ್ಲಿ ಗೊಂದಲ ನಿರ್ಮಾಣವಾಗಿದ್ದು, ಯಡಿಯೂರಪ್ಪ ಅವರಿಗೆ ನೆಮ್ಮದಿಯೇ ಇಲ್ಲವಾಗಿದೆ. ತುಂಬಾ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಆಗಿದ್ದಾಗ ಕುಮಾರಸ್ವಾಮಿ ಕೂಡ ಇದೇ ರೀತಿಯ ಒತ್ತಡದಲ್ಲಿದ್ದರು. ಇಂಥ ಪರಿಸ್ಥಿತಿ ತಮಗೂ ನಿರ್ಮಾಣವಾಗಲಿದೆ ಎಂಬುದನ್ನು ಹಿಂದೆಯೇ ವಿಧಾನಸಭೆಯಲ್ಲಿ ಯಡಿಯೂರಪ್ಪ ಅವರಿಗೆ ಎಚ್ಚರಿಸಿದ್ದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು