ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನೆಗಳ ಸರಮಾಲೆಯೂ, ಹೊಸತನದ ಭಾಷ್ಯವೂ...

2018ರ ಪೂರ್ವಾರ್ಧದ ಪೂರ್ವಾಪರ
Last Updated 28 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

2018ರ ವರ್ಷ ಕಳೆದು 2019ರ ಹೊಸ್ತಿಲಲ್ಲಿ ನಿಂತಿರುವಂಥ ಸಂದರ್ಭದಲ್ಲಿ ಅವಲೋಕನ ಮಾಡುವುದಾದರೆ ಸಾಂಸ್ಕೃತಿಕ ನಗರಿ ಮೈಸೂರು ಕೂಡ ಹಲವಾರು ಪಲ್ಲಟಗಳಿಗೆ, ಬದಲಾವಣೆಗಳಿಗೆ, ಹೊಸತನಗಳಿಗೆ ಸಾಕ್ಷಿಯಾಗಿದೆ. ಈ ಹೊತ್ತಿನಲ್ಲಿ ಅರಮನೆ ನಗರಿಯ ಇತಿಹಾಸಕ್ಕೆ ಮತ್ತೊಂದು ಪುಟ ಸೇರಿಕೊಳ್ಳುತ್ತಿದೆ. ಹಲವು ಕಹಿ, ಸಿಹಿ ಘಟನೆಗಳ ಸಮ್ಮಿಲನವಾದ ಈ ವರ್ಷವೂ ಮೈಸೂರಿಗರ ಪಾಲಿಗೆ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ವರ್ಷವೇ ಆಗಿದೆ.

ಮೈಸೂರಿನ ಪಾಲಿಗೆ ಕೆಲವು ಅಂಶಗಳು ಖುಷಿ ನೀಡಿದರೆ ಕೆಲವು ಬೇಸರ ಮೂಡಿಸಿವೆ. ರಾಜ್ಯ ವಿಧಾನಸಭಾ ಚುನಾವಣೆಯ ಕಣ ಮೈಸೂರಿನಲ್ಲೂ ರಂಗೇರಿಸಿತ್ತು. ಜತೆಗೆ ಪಾಲಿಕೆ ಚುನಾವಣೆ, ವಿಧಾನಪರಿಷತ್‌ ಚುನಾವಣೆಯೂ ರಾಜಕೀಯ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದವು. ರಾಜಕೀಯದಲ್ಲೂ ಹಲವು ಪಲ್ಲಟಗಳನ್ನು ಕಂಡ ಮೈಸೂರು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನು ತವರು ನೆಲದಲ್ಲೇ ಸೋಲಿಸಿತು. ಹಳೆಯ ಮುಖಗಳನ್ನು ಸೋಲಿಸಿ ಮನೆಗೆ ಕಳುಹಿಸಿದ ಮೈಸೂರಿಗರು ವಿಧಾನಸೌಧಕ್ಕೆ ಹೊಸಬರನ್ನು ಆರಿಸಿ ಕಳುಹಿಸಿದರು.

ಅದಕ್ಕೆ ಪೂರ್ವಭಾವಿಯಾಗಿ ಬಿಜೆಪಿ ಪರಿವರ್ತನಾ ಯಾತ್ರೆ ಹಮ್ಮಿಕೊಂಡಿತ್ತು. ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರು ಬಂದಿದ್ದರು. ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಗೆ ಕೆಲವು ದಿನಗಳು ಬಾಕಿ ಇರುವಾಗಲೇ ನರೇಂದ್ರ ಮೋದಿ ಚುನಾವಣಾ ಪ್ರಚಾರ ಕಾರ್ಯಕ್ಕೆ ಮೈಸೂರಿಗೆ ಬಂದರು. ಪ್ರಧಾನಿಯಾದ ಬಳಿಕ ಎರಡನೇ ಬಾರಿ ಮೈಸೂರಿಗೆ ಬಂದು ಕಾರ್ಯಕರ್ತರಲ್ಲಿ ಹುರುಪು ತುಂಬಿದರು.

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರನ್ನು ಹುರಿದುಂಬಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರೂ ಭೇಟಿ ನೀಡಿದ್ದರು. ಪಾಲಿಕೆ ಆಡಳಿತದಲ್ಲಿ ಮಹತ್ವ ಪೂರ್ಣವಾದ ದಿನವೂ ಇದೇ ವರ್ಷ ನಡೆದಿದೆ. ಪಾಲಿಕೆಯಲ್ಲಿ ನಗದು ರಹಿತ ಆಡಳಿತವನ್ನು ಜಾರಿಗೊಳಿಸಲಾಯಿತು. ಹೊಸ ಮತದಾರರ ನೋಂದಣಿ ಸಂಬಂಧ ಜಿಲ್ಲಾಡಳಿತವು ಮಿಂಚಿನ ನೋಂದಣಿ ಹಮ್ಮಿಕೊಂಡಿತ್ತು. ಇದಕ್ಕೆ ಭರಪೂರ ಸ್ಪಂದನೆಯೂ ದೊರಕಿತ್ತು.

ವಿಧಾನಸಭಾ ಚುನಾವಣೆಗೆ ಜಿಲ್ಲಾಡಳಿತ ಕೈಗೊಂಡ ವಿಶಿಷ್ಟ ಕಾರ್ಯಕ್ರಮವಾಗಿ ಬುಡಕಟ್ಟು ಮತಗಟ್ಟೆ ಗಮನ ಸೆಳೆಯಿತು.
ಲೇಖಕ ಪ್ರಭುಶಂಕರ್‌ ಅವರು ಏಪ್ರಿಲ್‌ನಲ್ಲಿ ಕಣ್ಮರೆಯಾದುದು ಮೈಸೂರಿಗರಿಗೆ ಬೇಸರ ತರಿಸಿದ್ದು ನಿಜ. ಮೈಸೂರಿನ ಅಸ್ಮಿತೆಯಲ್ಲಿ ಒಂದಾಗಿರುವ ಕುಕ್ಕರಹಳ್ಳಿಯಲ್ಲೂ ನೀರು ಕಲುಷಿತಗೊಂಡು ಪೆಲಿಕಾನ್‌ಗಳು ಮೃತಪಟ್ಟವು. ಮೈಸೂರು ನಗರದ ಸಂಚಾರ ಪೊಲೀಸರು ನಮ್ಮ ಮಿತ್ರ ಶೀರ್ಷಿಕೆಯಡಿ ಪ್ರತ್ಯೇಕ ಲಾಂಛನವನ್ನು ಅಳವಡಿಸಿಕೊಂಡರು. ಸುಗಮ, ಸುರಕ್ಷಿತ, ಶಿಸ್ತಬದ್ಧ ಸಂಚಾರ ವ್ಯವಸ್ಥೆಯ ಸಂಕಲ್ಪದ ಹಿನ್ನೆಲೆಯಲ್ಲಿ ಈ ಲಾಂಛನ ರೂಪುಗೊಳಿಸಲಾಯಿತು.

ಮೈಸೂರಿನ ಪಾಲಿಕೆ ಇತಿಹಾಸದಲ್ಲೂ 2018 ಮರೆಯಲಾಗದ ದಿನ. ಏಕೆಂದರೆ ಮೇಯರ್‌ ಚುನಾವಣೆಗೆ ಕಾಂಗ್ರೆಸ್‌ನಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಭಾಗ್ಯವತಿ ಅವರನ್ನು ಪಾಲಿಕೆಯ ಬಿಜೆಪಿ, ಜೆಡಿಎಸ್‌ ಸದಸ್ಯರು ಬೆಂಬಲಿಸಿದರು. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಕ್ಷೇತ್ರದಲ್ಲೇ ಇಂಥ ಬೆಳವಣಿಗೆ ನಡೆದು ರಾಜ್ಯದಾದ್ಯಂತ ಗಮನ ಸೆಳೆದಿತ್ತು. ಬಳಿಕ ಅವರನ್ನು ಕಾಂಗ್ರೆಸ್‌ನಿಂದಲೂ ಉಚ್ಚಾಟಿಸಲಾಯಿತು.

ಪಡುವಾರಹಳ್ಳಿಯಲ್ಲಿ 4.32 ಎಕರೆಯಲ್ಲಿ ₹ 174.6 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಹಾಗೂ ಹಾಸ್ಟೆಲ್‌ ಕಟ್ಟಡಕ್ಕೂ ಜನವರಿ ಕೊನೆಯ ವೇಳೆಗೆ ಉದ್ಘಾಟನಾ ಭಾಗ್ಯ ಲಭಿಸಿತು. ಈ ಮೂಲಕ ಹಲವು ವರ್ಷಗಳ ಬೇಡಿಕೆ ಈಡೇರಿದಂತಾಯಿತು.

ಬಡವರಿಗೆ ರಿಯಾಯಿತಿ ದರದಲ್ಲಿ ಊಟ ಮತ್ತು ಉಪಾಹಾರ ಒದಗಿಸುವ ಮೈಸೂರಿನ ಮೊದಲ ಇಂದಿರಾ ಕ್ಯಾಂಟೀನ್‌ಗೂ ಇದೇ ಸಂದರ್ಭದಲ್ಲಿ ಚಾಲನೆ ದೊರಕಿತು. ಬಿಜೆಪಿಯಲ್ಲಿ ಮುಖಂಡರಾಗಿದ್ದ, ಅರಣ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಸಿ.ಎಚ್‌.ವಿಜಯಶಂಕರ್‌ ಅವರು ಕಾಂಗ್ರೆಸ್‌ ಸೇರ್ಪಡೆ ಆದುದು ಕೂಡ ಈ ವರ್ಷದ ವಿಶೇಷ. ಮೂಲ ಕಾಂಗ್ರೆಸಿಗರಾಗಿದ್ದ ಅವರು ಮತ್ತೆ ಮಾತೃಪಕ್ಷಕ್ಕೆ ಮರಳಿದರು. ಪ್ರತಿ ದಿನ ಮೈಸೂರು ಮೂಲಕ ಸಾಗುತ್ತಿದ್ದ ಬೆಂಗಳೂರು ಕಾರವಾರ ಹಾಗೂ ಬೆಂಗಳೂರು ಕಣ್ಣೂರು ರೈಲು ಮೂರು ದಿನ ಮಾತ್ರ ಮೈಸೂರಿಗೆ ಬರುವಂಥ ನಿರ್ಧಾರವೂ ಈ ಸಂದರ್ಭದಲ್ಲಿಯೇ ಆಯಿತು.

ಉಳ್ಳಾಲದ ರಾಣಿ ಅಬ್ಬಕ್ಕ ಉತ್ಸವವನ್ನು ಮೈಸೂರಿನಲ್ಲಿ ಆಯೋಜಿಸಿ ಹೊಸ ಭಾಷ್ಯ ಬರೆಯಲಾಯಿತು. ಕರಾವಳಿಯ ಸೊಗಡನ್ನು ಬಿಂಬಿಸುವ ವಿಶಿಷ್ಟವಾದ ಈ ಕಾರ್ಯಕ್ರಮವನ್ನು ರಾಣಿ ಅಬ್ಬಕ್ಕನ ಕಾರ್ಯಕ್ಷೇತ್ರದಿಂದ ಹೊರ ಭಾಗದಲ್ಲಿ ನೆರವೇರಿಸಿದುದಕ್ಕೆ ಮೈಸೂರು ಸಾಕ್ಷಿಯಾಗಿತ್ತು. ಪಾಲಿಕೆಯು 2018–19ರ ಸಾಲಿನ ₹ 712 ಕೋಟಿ ಮೊತ್ತದ ಬಜೆಟ್‌ ಮಂಡಿಸಿತು. ಒಳಚರಂಡಿ ಆಧುನೀಕರಣಕ್ಕೆ ಆದ್ಯತೆ ಎಂಬುದನ್ನೂ ಒತ್ತಿ ಹೇಳಿತ್ತು.

ಅಖಿಲ ಭಾರತ ಪ್ರಥಮ ಕನ್ನಡ ಸಾಂಸ್ಕೃತಿಕ ಸಮ್ಮೇಳನವೂ ಮೈಸೂರಿನಲ್ಲಿ 20018ರಲ್ಲಿ ಆಯೋಜನೆಗೊಂಡಿತ್ತು. ಸಮ್ಮೇಳನಾಧ್ಯಕ್ಷರಾಗಿ ಡಾ.ಪದ್ಮಾಶೇಖರ್‌ ಅವರು ಕಾರ್ಯನಿರ್ವಹಿಸಿದ್ದರು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮಂಡಿಸಿದ ತನ್ನ ಉಳಿತಾಯ ಬಜೆಟ್‌ನಲ್ಲಿ ಗುಂಪು ವಸತಿ ಯೋಜನೆಗೆ ಆದ್ಯತೆ ನೀಡುವುದಾಗಿಯೂ ಘೋಷಿಸಿತ್ತು.

ಮೈಸೂರು ಸೇರಿದಂತೆ ಸುತ್ತಲಿನ ಐದು ಜಿಲ್ಲೆಗಳ ರೋಗಿಗಳಿಗೆ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುವ ಉದ್ದೇಶದಿಂದ ಕೆಆರ್‌ಎಸ್‌ ರಸ್ತೆಯಲ್ಲಿ ನಿರ್ಮಿಸಿರುವ ಜಯದೇವ ಹೃದ್ರೋಗ ಆಸ್ಪತ್ರೆಯೂ ಇದೇ ವರ್ಷದಲ್ಲಿ ಚಾಲನೆ ಪಡೆದುಕೊಂಡಿತು. ₹ 22 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಆಸ್ಪತ್ರೆ 350 ಹಾಸಿಗೆ ಸೌಲಭ್ಯ ಹೊಂದಿದೆ. ಮಾರ್ಚ್‌ನಲ್ಲಿ ನಡೆದ ಮೈಸೂರು ವಿ.ವಿ ಘಟಿಕೋತ್ಸವದಲ್ಲಿ 27,502 ಪದವಿ, 575 ಮಂದಿಗೆ ಪಿಎಚ್‌.ಡಿ, 348 ಮಂದಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು. ಪದವೀಧರರಲ್ಲಿ ವಿದ್ಯಾರ್ಥಿನಿಯರದ್ದೇ ಸಿಂಹಪಾಲು ಎಂಬುದು ಗಮನಾರ್ಹ.

‌ಪಿಯು ಪರೀಕ್ಷೆಯಲ್ಲಿ ಜಿಲ್ಲೆಗೆ 17 ಸ್ಥಾನ ದೊರಕಿ, ಶೇ 66.77 ಫಲಿತಾಂಶ ದಾಖಲಾಯಿತು. ನಗರದ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದರು. ಪಿಯು ಫಲಿತಾಂಶದಲ್ಲಿ ಮೈಸೂರಿಗೆ ಮೊದಲ ಸ್ಥಾನ ಗಳಿಸಿಕೊಟ್ಟ ಎಸ್‌.ಅನುದೀಪ್, ಆಕಾಂಕ್ಷ್‌, ನಿಖಿತಾ ಶ್ರೀಕಾಂತ್‌ ಸಾಧಕರಾಗಿ ಮೆರೆದರು. ಮೈಸೂರು ಮೃಗಾಲಯಕ್ಕೆ ಮತ್ತೊಂದು ಆಕರ್ಷಣೆಯೂ 2018ರ ವರ್ಷದಲ್ಲಿ ಸೇರಿತು. ಅದು ಶ್ರೀಲಂಕಾದ ಹಸಿರು ಅನಕೊಂಡ. ಒಂದು ಗಂಡು ಹಾಗೂ ಹೆಣ್ಣು ಅನಕೊಂಡಗಳನ್ನು ಮೃಗಾಲಯದ ಪ್ರಾಣಿ ವಿನಿಮಯ ಕಾರ್ಯಕ್ರಮದಲ್ಲಿ ತರಲಾಯಿತು. ಮೃಗಾಲಯಕ್ಕೆ ಬಿಳಿ ಹುಲಿಯ ಆಗಮನವಾಗಿ ಆಕರ್ಷಣೆ ಹೆಚ್ಚಿತು. ನಾಲ್ಕು ಜೀಬ್ರಾಗಳೂ ಮೈಸೂರು ಮೃಗಾಲಯಕ್ಕೆ ಮೆರುಗು ನೀಡಿದವು. ಮೃಗಾಲಯದ ಖುಷಿ ಹೆಸರಿನ ಜಿರಾಫೆ ಹೆಣ್ಣು ಮರಿಗೆ ಜನ್ಮ ನೀಡಿತು. ನೀರಾನೆಯೂ ಮರಿಗೆ ಜನ್ಮ ನೀಡುವ ಮೂಲಕ ಹೊಸ ಅತಿಥಿಗಳ ಆಗಮನವಾಯಿತು.

ಮೈಸೂರು ವಿಶ್ವವಿದ್ಯಾನಿಲಯಕ್ಕೆ ಕೇವಲ 22 ದಿನಗಳ ಅವಧಿಗೆ ಪ್ರಭಾರಿ ಕುಲಪತಿಯಾಗಿ ಕಾರ್ಯನಿರ್ವಹಿಸಿದ ನಿಂಗಮ್ಮ ಬೆಟ್ಸೂರು ಅವರ ಅವಧಿಯೂ ದಾಖಲೆಯಾಗಿ ಬದಲಾಯಿತು. ಮೇ ತಿಂಗಳಲ್ಲಿ ರಂಗಾಯಣದಲ್ಲಿ ನಡೆದ ಚಿಣ್ಣರ ಮೇಳದಲ್ಲಿ ‘ಸಿಂಧೂತಾಯಿ ಮುಖಾಮುಖಿ’ ಕಾರ್ಯಕ್ರಮದಲ್ಲಿ ಅನಾಥ ಮಕ್ಕಳಿಗೆ ಆಶ್ರಯ ಕಲ್ಪಿಸಿದ ಸಿಂಧೂತಾಯಿ ಅವರು ಚಿಣ್ಣರಿಗೆ ಕೈತುತ್ತು ನೀಡಿ ಮನ ಸೆಳೆದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 82.9ರಷ್ಟು ಫಲಿತಾಂಶ ಬಂದು ಜಿಲ್ಲೆ 21ನೇ ಸ್ಥಾನದಿಂದ 11ನೇ ಸ್ಥಾನಕ್ಕೆ ಏರುವ ಮೂಲಕ ಸಾಧನೆ ಮಾಡಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್‌ ಪಡೆಯುವಲ್ಲಿ ಸದ್ವಿದ್ಯಾ ಪ್ರೌಢಶಾಲೆ ವಿದ್ಯಾರ್ಥಿ ಯಶಸ್‌ ಯಶಸ್ವಿಯಾದರು.

ಪೂರ್ವ ಮುಂಗಾರು ಅವಧಿಯಲ್ಲಿ ವಾಡಕೆಗಿಂತ ಹೆಚ್ಚು ಮಳೆ ಬಿದ್ದು, ರೈತರು ಸಂತಸಗೊಂಡರು. ವಾಡಿಕೆಗಿಂತ ಶೇ 60ರಷ್ಟು ಹೆಚ್ಚು ಮಳೆಯಾಗಿತ್ತು.

ದೇಶದ ಮೊದಲ ಸಾರ್ವಜನಿಕ ಬೈಸಿಕಲ್‌ ಹಂಚಿಕೆ ಯೋಜನೆ ಟ್ರಿನ್‌ ಟ್ರಿನ್‌ಗೆ ಆ್ಯಪ್‌ ಆಧಾರಿತ ಸೇವೆಯನ್ನು ಎಲ್ಲ ಬಳಕೆದಾರರಿಗೆ ವಿಸ್ತರಿಸುವ ಚಿಂತನೆಗೂ 2018 ಸಾಕ್ಷಿಯಾಯಿತು. 3 ಹೊಸ ಡಾಕಿಂಗ್‌ ಕೇಂದ್ರ ಆರಂಭಿಸುವ ಮೂಲಕ 52 ಸೈಕಲ್‌ ನಿಲ್ದಾಣಗಳು ಆರಂಭವಾದವು. ಕ್ರೀಡಾ ಕ್ಷೇತ್ರದಲ್ಲಿ ಮತ್ತೊಂದು ಸಾಧನೆಗೆ ಮೈಸೂರು ಸಾಕ್ಷಿಯಾಯಿತು. 23 ವರ್ಷದ ಬಳಿಕ ರಾಜ್ಯ ಸಬ್‌ ಜೂನಿಯರ್‌ ಈಜು ಚಾಂಪಿಯನ್‌ಷಿಪ್‌ಗೆ ಮೈಸೂರು ವೇದಿಕೆಯಾಯಿತು.

ವಿಧಾನಸಭಾ ಚುನಾವಣೆ ಪೂರ್ಣಗೊಂಡ ಕೆಲವು ದಿನಗಳ ಬಳಿಕ ಪಾಲಿಕೆ ಚುನಾವಣೆಯೂ ಬಂತು. ಈ ವೇಳೆ ಪಾಲಿಕೆ ವಾರ್ಡ್‌ಗಳ ಮರು ವಿಂಗಡಣೆ ನಡೆಯಿತು. ಜನಸಂಖ್ಯೆಗೆ ಅನುಗುಣವಾಗಿ ವಾರ್ಡ್‌ಗಳ ಮರು ವಿಂಗಡಣೆ ಆಯಿತು. 11 ವಾರ್ಡ್‌ಗಳನ್ನು ಕೈಬಿಟ್ಟು ಹೊಸ 11 ವಾರ್ಡ್‌ಗಳನ್ನು ರಚಿಸಲಾಯಿತು.

ನಗರದ ಐತಿಹಾಸಿಕ ಲಲಿತ್‌ಮಹಲ್‌ ಪ್ಯಾಲೇಸ್‌ ಹೋಟೆಲ್‌ ಅನ್ನು ಭಾರತೀಯ ಪ್ರವಾಸೋದ್ಯಮ ನಿಗಮವು ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಿತು. ಬಳಿಕ ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ಹೋಟೆಲನ್ನು ಜಂಗಲ್‌ ಲಾಡ್ಜಸ್‌ ಅಂಡ್ ರೆಸಾರ್ಟ್‌ಗೆ ವಹಿಸಲಾಯಿತು.

ಮೈಸೂರು ವಿಶ್ವವಿದ್ಯಾನಿಲಯವು ವಿದೇಶಿ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಯನ್ನು ರದ್ದು ಮಾಡಿ ಮಹತ್ತರ ತೀರ್ಮಾನ ಕೈಗೊಂಡಿತು. ವಿ.ವಿಯಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಕಡಿಮೆಯಾದ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಯಿತು. 2018ರಲ್ಲಿ ಸುರಿದ ವರ್ಷಧಾರೆಗೆ ನಗರ ತತ್ತರಿಸಿತು. ಭಾರಿ ವರ್ಷಧಾರೆಯಿಂದಾಗಿ ನೀರು ನುಗ್ಗಿ ಅವಾಂತರ ಉಂಟಾದ ಬಳಿಕ ಎಚ್ಚೆತ್ತುಕೊಂಡ ಪಾಲಿಕೆ ರಾಜಕಾಲುವೆಗಳಲ್ಲಿ ಕಸ ತೆರವಿಗೂ ಮುಂದಾಯಿತು. ಮೈಸೂರಿನಿಂದ ವಿವಿಧೆಡೆ ಸಂಚರಿಸುವ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಸೇರ್ಪಡೆಗೊಳಿಸಲಾಯಿತು. ಪ್ರತಿ ರೈಲಿಗೆ 2ರಿಂದ 7 ಹೆಚ್ಚುವರಿ ಬೋಗಿಗಳನ್ನು ಸೇರಿಸಲಾಯಿತು. ಹಲವಾರು ವಿದ್ಯಾರ್ಥಿಗಳಿಗೆ ಸಂಕಷ್ಟ ತಂದಿಟ್ಟಿದ್ದ ಕೆಎಸ್‌ಒಯುವಿಗೆ ಮಾನ್ಯತೆ ನೀಡಲು ಯುಜಿಸಿ ಒಪ್ಪಿಗೆ ನೀಡಿರುವುದು ಹಲವರಿಗೆ ಸಮಾಧಾನ ತಂದಿತು.

ಅರ್ಹತೆ ಇಲ್ಲದ ಕಾಲೇಜುಗಳ ಮಾನ್ಯತೆ ರದ್ದುಪಡಿಸಲು ಮೈಸೂರು ವಿವಿ ಶೈಕ್ಷಣಿಕ ಮಂಡಳಿ ಸಭೆ ತೀರ್ಮಾನಿಸಿತು.
ಯೋಗ ದಿನಾಚರಣೆಗೆ ರೇಸ್‌ ಕೋರ್ಸ್‌ ಮತ್ತೊಮ್ಮೆ ಸಾಕ್ಷಿಯಾಗಿ 45 ನಿಮಿಷಗಳಲ್ಲಿ 19 ಆಸನಗಳನ್ನು ಪ್ರದರ್ಶಿಸಲಾಯಿತು.
ಸ್ವಚ್ಛನಗರ ಮೈಸೂರಿಗೆ 3,539 ಅಂಕ ಸಿಕ್ಕಿತು. ದೇಶದ ಸ್ವಚ್ಛ ನಗರಗಳ ಪೈಕಿ ಒಟ್ಟಾರೆಯಾಗಿ 8ನೇ ಸ್ಥಾನ ಸಿಕ್ಕಿದೆ.
ಚಾಮುಂಡಿ ಬೆಟ್ಟದ ದೇವಾಲಯಕ್ಕೆ ಕುಂಭಾಭಿಷೇಕ ನೆರವೇರಿಸಲಾಯಿತು.

ಸಾರ್ವಜನಿಕರ ಅನುಕೂಲಕ್ಕಾಗಿ ಪೊಲೀಸ್‌ ಇಲಾಖೆ ಮೊಬೈಲ್‌ ಆ್ಯಪ್‌ ಆರಂಭಿಸಿತು. ಈ ಆ್ಯಪ್‌ನಲ್ಲಿ ಸಾರ್ವಜನಿಕರು ತುರ್ತು ಸಂದರ್ಭಕ್ಕೂ ತಮ್ಮ ಆತ್ಮೀಯರನ್ನು ಸಂಪರ್ಕಿಸುವ ವ್ಯವಸ್ಥೆ ಕಲ್ಪಿಸಲಾಯಿತು. ಈ ಮೂಲಕ ಪೊಲೀಸರು ಮತ್ತಷ್ಟು ಜನಸ್ನೇಹಿಯಾಗುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT