ಗುರುವಾರ , ಅಕ್ಟೋಬರ್ 22, 2020
22 °C

ರಾಮಕೃಷ್ಣರ ಜೀವನ ಕಥನ ‘ಸಮಚಿತ್ತದ ಸಮದರ್ಶಿ’ ಪುಸ್ತಕ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಗರದ ಅಶೋಕಪುರಂ ಮತ್ತು ಕೃಷ್ಣಮೂರ್ತಿಪುರಂ ಪ್ರದೇಶಗಳು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಸಾಮಾಜಿಕ, ಸಾಮರಸ್ಯದ ಹೋರಾಟದ ನೆಲೆಯಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್ ಹೇಳಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಅಶೋಕಪುರಂನ ವಿನಾಯಕ ಕ್ರೀಡಾ ಹಾಗೂ ಸಮಾಜ ಸೇವಾ ಸಂಘ ಮತ್ತು ಯುವಜನ ಸಂಘದ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ‘ಸಮಚಿತ್ತದ ಸಮದರ್ಶಿ’ (ರಾಮಕೃಷ್ಣರ ಜೀವನ ಕಥನ) ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಮಕೃಷ್ಣ, ಮ. ವೆಂಕಟರಾಂ ಮತ್ತು ಶ್ರೀನಿವಾಸಪ್ರಸಾದ್ ಅವರು ಅಶೋಕಪುರಂನಲ್ಲಿ ಆರ್‌ಎಸ್‌ಎಸ್‌ನ ಚಟುವಟಿಕೆಗೆ ಚಾಲನೆ ನೀಡಿದ್ದರು. ಹಲವರ ವಿರೋಧದ ನಡುವೆಯೂ ಸಂಘದ ಸಿದ್ಧಾಂತಗಳನ್ನು ಅಲ್ಲಿನ ಜನರಿಗೆ ಮನದಟ್ಟು ಮಾಡಿದ್ದರು ಎಂದರು.

ಆರ್‌ಎಸ್‌ಎಸ್‌ ಒಂದು ಜಾತಿಯ ಕಾರ್ಯಕರ್ತರನ್ನು ಮಾತ್ರ ನಿರ್ಮಾಣ ಮಾಡಿಲ್ಲ. ಜಾತಿಯ ಎಲ್ಲೆಯನ್ನು ಮೀರಿ ಕೆಲಸ ಮಾಡಿದೆ. ಈ ಪುಸ್ತಕ ಕೇವಲ ರಾಮಕೃಷ್ಣ ಅವರ ಜೀವನ ಚರಿತ್ರೆಯಾಗಿ ಉಳಿದಿಲ್ಲ. ಸಾಮಾಜಿಕ ಸಾಮರಸ್ಯಕ್ಕಾಗಿ ಬದುಕಿದ ವ್ಯಕ್ತಿಯ ಜೀವನದ ಕಥೆಯನ್ನು ಹೇಳುತ್ತದೆ. ಕರ್ನಾಟಕದ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಚರಿತ್ರೆಯ ಅಧ್ಯಯನಕ್ಕೆ ಇದು ಅತ್ಯುತ್ತಮ ದಾಖಲೆಯಾಗಿದೆ ಎಂದು ತಿಳಿಸಿದರು.

ಮೈಸೂರು ವಿಶ್ವವಿದ್ಯಾಲಯ ಕಾನೂನು ಶಾಲೆ, ನ್ಯಾಯಶಾಸ್ತ್ರ ವಿಭಾಗದ ನಿರ್ದೇಶಕ ಡಾ.ಸಿ.ಬಸವರಾಜು ಮಾತನಾಡಿ, ‘ಆರ್‌ಎಸ್‌ಎಸ್‌ ಮಾತ್ರ ವೈಯಕ್ತಿಕ ಲಾಭದ ಉದ್ದೇಶ ಇಟ್ಟುಕೊಳ್ಳದೆ, ಇಡೀ ಸಮಾಜದ ಏಳಿಗೆಗಾಗಿ ಕೆಲಸ ಮಾಡುತ್ತಿದೆ. ರಾಮಕೃಷ್ಣ ಅವರ ಜೀವನ ಕಥನ ಮುಂದಿನ ತಲೆಮಾರಿನ ಜನರಿಗೆ ದಾರಿದೀಪದಂತಿದೆ ಎಂದು ಹೇಳಿದರು.

ಕಳೆದ ಅಕ್ಟೋಬರ್‌ನಲ್ಲಿ ನಿಧನರಾದ ರಾಮಕೃಷ್ಣ ಅವರ ಬಗ್ಗೆ ಬರೆದ ಲೇಖನ ಮಾಲೆಯನ್ನು ‘ಸಮಚಿತ್ತದ ಸಮದರ್ಶಿ’ ಪುಸ್ತಕ ಒಳಗೊಂಡಿದೆ. ಅಶೋಕಪುರಂ ಗೋವಿಂದರಾಜು ಅವರು ಪ್ರಧಾನ ಲೇಖಕರಾಗಿದ್ದಾರೆ.

ಆರ್‌ಎಸ್‌ಎಸ್‌ ದಕ್ಷಿಣ ಪ್ರಾಂತದ ಸಂಘಚಾಲಕ ಮ.ವೆಂಕಟರಾಂ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್, ಮೈಸೂರಿನ ಅಧ್ಯಕ್ಷ ಡಾ.ವಿ.ರಂಗನಾಥ್, ವಿನಾಯಕ ಕ್ರೀಡಾ ಹಾಗೂ ಸಮಾಜ ಸೇವಾ ಸಂಸ್ಥೆ ಅಧ್ಯಕ್ಷ ಎಸ್‌.ಆನಂದ ಮೂರ್ತಿ, ಅಶೋಕಪುರಂ ಯುವಜನ ಸಂಘದ ಕಾರ್ಯದರ್ಶಿ ಯೋಗೀಶ್‌ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು