ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾಗೆ ಕಳ್ಳಸಾಗಣೆ ಶಂಕೆ: ಮೈಸೂರಿನಲ್ಲಿ ಹೆಚ್ಚಾಯ್ತು ಗಂಧದ ಮರಗಳ ಕಳವು

ಭದ್ರತೆ ಇರುವ ಕಡೆಯೇ ಗಂಧಚೋರರ ಕೈಚಳಕ
Last Updated 4 ಡಿಸೆಂಬರ್ 2019, 10:11 IST
ಅಕ್ಷರ ಗಾತ್ರ

ಮೈಸೂರು: ನಗರದಲ್ಲಿ ಗಂಧಚೋರರು ಭದ್ರತಾ ಸಿಬ್ಬಂದಿ ಕಾವಲಿರುವ ಪ್ರದೇಶಗಳಲ್ಲೇ ಗಂಧದ ಮರಗಳನ್ನು ಕಳವು ಮಾಡುವ ಮೂಲಕ ಪೊಲೀಸರಿಗೆ ಸೆಡ್ಡು ಹೊಡೆದಿದ್ದಾರೆ. ಇವರ ಪತ್ತೆಗೆ ಪೊಲೀಸರು ವಿಶೇಷ ತಂಡ ರಚಿಸುವ ಚಿಂತನೆ ನಡೆಸಿದ್ದಾರೆ.

ಮಾರ್ಚ್‌ ತಿಂಗಳಿನಲ್ಲಿ ಬಿಗಿಭದ್ರತೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿವಾಸದ ಆವರಣ ಹಾಗೂ ಚಾಮರಾಜೇಂದ್ರ ಮೃಗಾಲಯದಲ್ಲಿದ್ದ ಗಂಧದ ಮರಗಳನ್ನು ಕಳ್ಳರು ಕಳವು ಮಾಡಿದ್ದರು. ಮೇ ತಿಂಗಳಿನಲ್ಲಿ ಬೆಂಗಳೂರಿನಲ್ಲಿ 13 ಕಳ್ಳಸಾಗಾಣಿಕೆದಾರರನ್ನು ಹಿಡಿದು 4 ಟನ್‌ ಗಂಧದಮರಗಳನ್ನು ಪೊಲೀಸರು ವಶಪಡಿಸಿಕೊಂಡ ನಂತರ ನಗರದಲ್ಲೂ ಗಂಧದ ಮರದ ಕಳ್ಳತನ ಪ್ರಕರಣಗಳು ತಗ್ಗಿದ್ದವು. ಆದರೆ, ಈಗ ಮತ್ತೆ ಕಳ್ಳರ ತಂಡ ಶ್ರೀಗಂಧದ ಎಣ್ಣೆ ಕಾರ್ಖಾನೆ ಹಾಗೂ ಅರಣ್ಯ ಇಲಾಖೆಗೆ ಸೇರಿದ ಅರಣ್ಯಭವನದ ಆವರಣದಲ್ಲಿನ ಭಾರಿ ಗಾತ್ರದ ಮರಗಳನ್ನು ಕತ್ತರಿಸಿ ಕದ್ದೊಯ್ದಿವೆ.

ಚೀನಾದಲ್ಲಿ ನ್ಯೂಕ್ಲಿಯರ್ ರಿಯಾಕ್ಟರ್‌ಗಳನ್ನು ತಂಪುಗೊಳಿಸಲು ಗಂಧದಮರಗಳನ್ನು ಬಳಕೆ ಮಾಡಲಾಗುತ್ತಿದೆ. ಈ ಸಂಬಂಧ ಸಂಶೋಧನೆಗಳೂ ನಡೆಯುತ್ತಿವೆ. ಹಾಗಾಗಿ, ಚೀನಾದಲ್ಲಿ ಅತಿ ಹೆಚ್ಚಿನ ಬೇಡಿಕೆ ಗಂಧದ ಮರಗಳಿಗೆ ಸೃಷ್ಟಿಯಾಗಿದೆ ಎಂದು ಹೆಸರು ಹೇಳಲು ಬಯಸದ ಅಧಿಕಾರಿಯೊಬ್ಬರು ಹೇಳುತ್ತಾರೆ.

ಸಣ್ಣಸಣ್ಣ ತುಂಡುಗಳನ್ನಾಗಿ ಮಾಡಿ ತರಕಾರಿಗಳ ಮಧ್ಯೆ ಇಟ್ಟು ಸಾಗಣೆ ಮಾಡಲಾಗುತ್ತಿದೆ. ಕೆಲವು ಕಡೆ ಮೀನುಗಳ ಮಧ್ಯೆ ಇಟ್ಟು ರವಾನಿಸಲಾಗುತ್ತಿದೆ. ಇಂತಹ ಸಾಗಣೆಯನ್ನು ಪತ್ತೆ ಹಚ್ಚುವುದು ಚೆಕ್‌ಪೋಸ್ಟ್‌ಗಳ ಸಿಬ್ಬಂದಿಗಳಿಗೂ ಕಷ್ಟಕರವಾಗಿದೆ ಎಂದು ಗುಪ್ತಚರ ಇಲಾಖೆಯ ಸಿಬ್ಬಂದಿಯೊಬ್ಬರು ತಿಳಿಸುತ್ತಾರೆ.

ಈ ಮೊದಲು ಕೇವಲ ಸುಗಂಧ ದ್ರವ್ಯ, ಐಷಾರಾಮಿ ಬದುಕಿಗಷ್ಟೇ ಬಳಕೆಯಾಗುತ್ತಿದ್ದವು. ಸಿರಿವಂತರು ಮಾತ್ರ ಇಂತಹ ಉತ್ಪನ್ನಗಳನ್ನು ಖರೀದಿಸುತ್ತಿದ್ದರು. ಆದರೆ, ಈಗ ಚೀನಾದಲ್ಲಿ ನಡೆಯುತ್ತಿರುವ ಹೊಸ ಹೊಸ ರಹಸ್ಯ ಸಂಶೋಧನೆಗಳಿಗೆ ಬಳಕೆ ಆಗುತ್ತಿರುವುದು ಕಾಳಸಂತೆಯಲ್ಲಿ ಬೇಡಿಕೆ ಹೆಚ್ಚುವಂತೆ ಮಾಡಿದೆ.

ಲಿಂಗಾಂಬುಧಿ ಕೆರೆ ಆವರಣದಲ್ಲಿ ಗಂಧದ ಮರದ ಕಳವಿಗೆ ಯತ್ನಿಸಿದ ವ್ಯಕ್ತಿಯನ್ನು 2017ರ ಫೆ. 11ರಂದು ಅರಣ್ಯ ಇಲಾಖೆ ಸಿಬ್ಬಂದಿ ಗುಂಡು ಹಾರಿಸಿ ಕೊಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT