ಬುಧವಾರ, ಜನವರಿ 29, 2020
29 °C
ಗೋಪಾಲಕರಿಗೆ ಕಿಚ್ಚು ಹಾಯಿಸುವ ತವಕ, ಮಹಿಳೆಯರಿಗೆ ಎಳ್ಳು ಬೀರುವ ಸಂಭ್ರಮ

ಸುಗ್ಗಿ ಹಬ್ಬಕ್ಕೆ ಹೆಚ್ಚಾಯ್ತು ಹೂವಿನ ದರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಗರದಲ್ಲಿ ಸುಗ್ಗಿ ಹಬ್ಬ ಸಂಕ್ರಾಂತಿಗಾಗಿ ಸಾರ್ವಜನಿಕರು ಮಂಗಳವಾರ ಖರೀದಿ ಭರಾಟೆ ಜೋರಾಗಿತ್ತು.

ತಮಿಳುನಾಡಿನಿಂದ ಬಂದಿರುವ ಕರಿಕಬ್ಬು, ಎಳ್ಳುಬೆಲ್ಲದ ಮಿಶ್ರಣ, ಯಲಚಿಹಣ್ಣು, ಸಕ್ಕರೆ ಅಚ್ಚುಗಳನ್ನು ಹೆಚ್ಚಾಗಿ ಜನರು ಖರೀದಿಸಿದರು. ದೇವರಾಜ ಮಾರುಕಟ್ಟೆ, ಅಗ್ರಹಾರ, ನಂಜುಮಳಿಗೆ, ಸಯ್ಯಾಜಿರಾವ್ ರಸ್ತೆ ಸೇರಿದಂತೆ ಅನೇಕ ಕಡೆ ವ್ಯಾಪಾರಸ್ಥರು ಹಬ್ಬಕ್ಕೆ ಸಂಬಂಧಿಸಿದ ಪರಿಕರಗಳನ್ನು ತಂದಿರಿಸಿಕೊಂಡಿದ್ದರು.

ಎಳ್ಳುಬೆಲ್ಲದ ಮಿಶ್ರಣದ ಬೆಲೆ ಏಕರೂಪದಲ್ಲಿರದೇ ತರಹೇವಾರಿ ಇತ್ತು. ಕೆಲವೆಡೆ ಒಂದು ಕೆ.ಜಿಗೆ ₹ 240 ದಾಟಿತ್ತು. ಮತ್ತೆ ಹಲವೆಡೆ ಕೆ.ಜಿಗೆ ₹ 140 ಇತ್ತು. ಸರಿಸುಮಾರು ಒಂದು ನೂರು ರೂಪಾಯಿಗಳಷ್ಟು ಅಂತರ ಇತ್ತು. ಗುಣಮಟ್ಟ ಮತ್ತು ಬೇಡಿಕೆಯ ಆಧಾರದ ಮೇಲೆ ಬೆಲೆ ನಿಗದಿಯಾಗಿತ್ತು.

ತಮಿಳುನಾಡಿನಿಂದ ಮಧ್ಯವರ್ತಿಗಳ ಮೂಲಕ ಬಂದಿದ್ದ ಕರಿಕಬ್ಬುಗಳ ಬೆಲೆಗಳೂ ಗುಣಮಟ್ಟ ಮತ್ತು ಆಕಾರಕ್ಕೆ ತಕ್ಕಂತೆ ನಿಗದಿಯಾಗಿತ್ತು. ಇದರ ಜತೆಗೆ, ಸಾಮಾನ್ಯ ಕಬ್ಬಿನ ಜಲ್ಲೆಗಳೂ ಇದ್ದವು.

ಹೂಗಳ ದರ ಏರಿಕೆ: ಹಬ್ಬದ ಪ್ರಯುಕ್ತ ಹೂಗಳ ದರವೂ ಹೆಚ್ಚಾಗಿದೆ. ಕೆ.ಜಿಗೆ ₹ 120ಕ್ಕೆ ಮಾರಾಟವಾಗುತ್ತಿದ್ದ ಗುಲಾಬಿ ₹ 160ಕ್ಕೆ ಏರಿಕೆಯಾಗಿದೆ. ಇದೇ ರೀತಿ ಮಲ್ಲಿಗೆ ₹ 1,500ರಿಂದ ₹ 2 ಸಾವಿರ, ಕಾಕಡ ₹ 300ರಿಂದ ₹ 700, ಸೇವಂತಿಗೆ ₹ 120ರಿಂದ ₹ 160, ಕನಕಾಂಬರ ₹ 400ರಿಂದ ₹ 800ಕ್ಕೆ ಏರಿಕೆಯಾಗಿದೆ ಎಂದು ದೇವರಾಜ ಮಾರುಕಟ್ಟೆಯ ಹೂ ವ್ಯಾಪಾರಿ ಎಂ.ಡಿ.ಎಂಟರ್‌ಪ್ರೈಸೆಸ್‌ನ ಸಾದಿಕ್ ಷರೀಫ್ ‘‍ಪ್ರಜಾವಾಣಿ’ಗೆ ತಿಳಿಸಿದರು.

ಬಾಳೆಹಣ್ಣಿನ ದರ ಹೆಚ್ಚಳ: ಕಳೆದೊಂದು ತಿಂಗಳಿನಿಂದ ಕೆ.ಜಿ ₹ 40ರಲ್ಲಿ ಮಾರಾಟವಾಗುತ್ತಿದ್ದ ಏಲಕ್ಕಿ ಬಾಳೆಹಣ್ಣು ಇದೀಗ ₹ 60ಕ್ಕೆ ಹೆಚ್ಚಾಗಿದೆ. ಇನ್ನುಳಿದ ಹಣ್ಣುಗಳ ಬೆಲೆಗಳಲ್ಲಿಯೂ ಏರಿಕೆಯಾಗಿದೆ. ಹಲವು ದೇಗುಲಗಳು ಹಬ್ಬದ ಪ್ರಯುಕ್ತ ಸಿಂಗಾರಗೊಂಡಿವೆ. ವಿಶೇಷ ಪೂಜೆ ಪುನಸ್ಕಾರಗಳು ಜರುಗಲಿವೆ.

ಕುಂಬಳಕಾಯಿ, ಅವರೆಕಾಯಿ, ಸೋರೆಕಾಯಿ, ಬದನೆ, ಟೊಮೆಟೊ, ಕ್ಯಾರೆಟ್, ಬೀನ್ಸ್, ಹಸಿಮೆಣಸಿನಕಾಯಿ ಹೀಗೆ ಬಹುತೇಕ ತರಕಾರಿ ಬೆಲೆಗಳು ಸಗಟು ಮಾರುಕಟ್ಟೆಯಲ್ಲಿ ಏರಿಕೆ ಕಾಣದಿದ್ದರೂ, ಚಿಲ್ಲರೆ ಮಾರುಕಟ್ಟೆಯಲ್ಲಿ ಕಳೆದ ವಾರಕ್ಕೆ ಹೋಲಿಸಿದರೆ ತುಸು ಏರಿಕೆ ಕಂಡಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು