ಶನಿವಾರ, ಡಿಸೆಂಬರ್ 7, 2019
21 °C
ಕ್ಷೇತ್ರ ಬಿಟ್ಟು ಹೋಗುವ ವದಂತಿ ಸುಳ್ಳು: ಸ್ಪಷ್ಟನೆ

ನಾಮಪತ್ರ ಸಲ್ಲಿಕೆ ದಿನದಿಂದಲೂ ಕಿರುಕುಳ: ನೋವು ತೋಡಿಕೊಂಡ ಸಾ.ರಾ.ಮಹೇಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಲಿಗ್ರಾಮ: ‘ಕಳೆದ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ದಿನದಿಂದ ಶುರುವಾದ ಕಿರುಕುಳ ಸಚಿವನಾದ ಮೇಲೂ ನಿಲ್ಲಲಿಲ್ಲ. ಇದರಿಂದ ನಾನು ತುಂಬಾ ನೊಂದಿರುವೆ’ ಎಂದು ಶಾಸಕ ಸಾ.ರಾ.ಮಹೇಶ್‌ ನೋವು ತೋಡಿಕೊಂಡರು.

ಕೆ.ಆರ್.ನಗರ ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೆ.ಆರ್‌.ನಗರ ಕ್ಷೇತ್ರವನ್ನು ಬಿಟ್ಟು ಮತ್ತೊಂದು ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ವದಂತಿ ಹಬ್ಬಿದೆ. ಇದರಿಂದ ಮತ್ತಷ್ಟು ನೋವಾಗಿದೆ. ಮೈಸೂರು ಜಿಲ್ಲೆಯ ಮತ್ತೊಂದು ಕ್ಷೇತ್ರಕ್ಕೆ ಹೋಗಿ ಅಲ್ಲಿನ ಜನರ ಕೈಮುಗಿದು, ನನಗೆ ಮತ ನೀಡಿ ಎಂದು ಕೇಳುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಕೆ.ಆರ್‌.ನಗರ ಕ್ಷೇತ್ರವೇ ನನ್ನ ಕರ್ಮಭೂಮಿ. ನಾನು ಬದುಕಿರುವ ತನಕ ನನಗೆ ರಾಜಕೀಯ ನಾಯಕ ಎಂದರೆ, ಅದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ. ರಾಜಕೀಯ ಬೇಸರ ಎನಿಸಿದರೆ ಈ ಕ್ಷೇತ್ರದಿಂದ ದೂರ ಉಳಿದುಬಿಡುವೆ. ಆದರೆ, ಕುಮಾರಣ್ಣ ಅವರೊಂದಿಗೆ ಸ್ನೇಹಿತನಾಗಿ ಉಳಿಯುತ್ತೇನೆ’ ಎಂದು ಭಾವುಕರಾದರು.

‘ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಕ್ಷೇತ್ರದ ವಿವಿಧ ಅಭಿವೃದ್ಧಿಗೆ ₹700 ಕೋಟಿಗೂ ಅಧಿಕ ಅನುದಾನ ಬಿಡುಗಡೆ ಮಾಡಿದ್ದರು. ರಸ್ತೆ, ಚರಂಡಿ, ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ’ ಎಂದರು.

ಕೆ.ಆರ್.ನಗರ ತಾಲ್ಲೂಕಿನ ಪ್ರವಾಸಿ ಕೇಂದ್ರವಾದ ಚುಂಚನಕಟ್ಟೆ ಗ್ರಾಮದ ಅಭಿವೃದ್ಧಿಗೆ ₹10 ಕೋಟಿ ಬಿಡುಗಡೆಯಾಗಿದ್ದು, ಕಾಮಗಾರಿ ಪ್ರಾರಂಭಗೊಂಡಿದೆ. ಚುಂಚನಕಟ್ಟೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಡಾಂಬರೀಕರಣಕ್ಕೆ ₹100 ಕೋಟಿ ಬಿಡುಗಡೆಯಾಗಿದೆ ಎಂದು ತಿಳಿಸಿದರು.

ತಾಲ್ಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ₹45 ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ ಚರಂಡಿ ಕಾಮಗಾರಿ, ಮಲುಗನಹಳ್ಳಿ ಗ್ರಾಮದಲ್ಲಿ ಸಿಮೆಂಟ್ ರಸ್ತೆ ಕಾಮಗಾರಿ ಹಾಗೂ ಮಂಡೂರು ಗ್ರಾಮದಲ್ಲಿ ₹2 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮೈಮುಲ್ ಮಾಜಿ ಅಧ್ಯಕ್ಷ ಎ.ಟಿ.ಸೋಮಶೇಖರ್, ಎಪಿಎಂಸಿ ಅಧ್ಯಕ್ಷ ಕುಪ್ಪಳ್ಳಿ ಸೋಮು, ಡೇರಿ ಅಧ್ಯಕ್ಷ ಚಿಕ್ಕಬಸಪ್ಪ, ಉಪಾಧ್ಯಕ್ಷೆ ಗಾಯತ್ರಿ, ಮೈಮುಲ್ ಉಪ ವ್ಯವಸ್ಥಾಪ‍ಕ ಡಾ.ತಮ್ಮಣ್ಣೇಗೌಡ, ಹರ್ಷಕುಮಾರ್‌ ಗೌಡ, ಹೊಸೂರು ಕೀರ್ತಿ, ಮರೀಗೌಡ, ಪ್ರಭಾಕರ್, ಖಿಜರ್‌ಪಾಷ, ಐಯಾಜ್, ಬೆಟ್ಟಹಳ್ಳಿ ಯೋಗೇಶ್, ಶ್ರೀಧರ್ ಉಪಸ್ಥಿತರಿದ್ದರು.

150 ಹಾಲಿನ ಡೇರಿಗಳ ಪ್ರಾರಂಭ

‘ನಾನು ಶಾಸಕನಾದ ಮೇಲೆ ಕ್ಷೇತ್ರದಲ್ಲಿ 150ಕ್ಕೂ ಹೆಚ್ಚು ಹಾಲಿನ ಡೇರಿಗಳನ್ನು ಪ್ರಾರಂಭ ಮಾಡಲಾಗಿದೆ. ಇದರಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳೂ ಸೇರಿವೆ. ಮಹಿಳೆಯರು ಹೆಚ್ಚಾಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡರೆ ಕುಟುಂಬದ ಆರ್ಥಿಕ ಸ್ಥಿತಿ ಉತ್ತಮಗೊಳ್ಳುತ್ತದೆ. ಮಕ್ಕಳ ಶೈಕ್ಷಣಿಕ ಪ್ರಗತಿ ಉತ್ತಮಗೊಳ್ಳುತ್ತದೆ’ ಎಂದು ಸಾ.ರಾ.ಮಹೇಶ್‌ ಹೇಳಿದರು.

ಪ್ರತಿಕ್ರಿಯಿಸಿ (+)