ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂವಿಧಾನವನ್ನೇ ಪ್ರಣಾಳಿಕೆಯನ್ನಾಗಿ ಮಾಡಿಕೊಂಡಿರುವ ಬಿಎಸ್ಪಿಯ ಕೈ ಹಿಡಿಯಲಿದ್ದಾರೆ’

ಮೈಸೂರು–ಕೊಡಗು ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ಬಿ.ಚಂದ್ರ ವಿಶ್ವಾಸ
Last Updated 25 ಏಪ್ರಿಲ್ 2019, 9:14 IST
ಅಕ್ಷರ ಗಾತ್ರ

ಮೈಸೂರು: ‘ಜನತೆ ಆರೇಳು ದಶಕಗಳಿಂದ ಕಾಂಗ್ರೆಸ್‌ ಹಾಗೂ ಬಿಜೆಪಿಯ ದುರಾಡಳಿತ ಕಂಡು ಬೇಸರಗೊಂಡಿದ್ದಾರೆ. ‘ಗರೀಬಿ ಹಠಾವೊ ದೇಶ್‌ ಬಚಾವೊ’, ‘ಅಚ್ಚೇ ದಿನ್‌ ಆಯೇಗಾ’, ‘ಸಬ್ ಕಾ ಸಾಥ್‌ ಸಬ್ ಕಾ ವಿಕಾಸ್’ ಎಂದು ಸುಳ್ಳು ಹೇಳಿಕೊಂಡು ಅಧಿಕಾರ ಹಿಡಿದಿರುವವರನ್ನು ಕೈಬಿಡಲಿರುವ ಜನರು, ಸಂವಿಧಾನವನ್ನೇ ಪ್ರಣಾಳಿಕೆಯನ್ನಾಗಿ ಮಾಡಿಕೊಂಡಿರುವ ಬಿಎಸ್ಪಿಯ ಕೈ ಹಿಡಿಯಲಿದ್ದಾರೆ...’.

ಹೀಗೆ, ಗೆಲುವಿನ ಭರವಸೆಯನ್ನು ವ್ಯಕ್ತಪಡಿಸಿದ್ದು ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ಬಿ.ಚಂದ್ರ. ‘ಬಿಎಸ್ಪಿ ಸಮಾವೇಶಕ್ಕೆ ಪಕ್ಷದ ರಾಷ್ಟ್ರ ಘಟಕದ ಅಧ್ಯಕ್ಷರಾದ ಮಾಯಾವತಿ ಅವರು ಬಂದಿದ್ದಾಗ ಸಾವಿರಾರು ಜನರು ಸ್ವಯಂ ಪ್ರೇರಿತರಾಗಿ ಸೇರಿದ್ದರು. ಅವರ‍್ಯಾರೂ ಆಮಿಷಗಳಿಗೆ ಈಡಾಗಿ ಬಂದವವರಲ್ಲ. ಇದು ಬಿಜೆಪಿ ಹಾಗೂ ಮೈತ್ರಿ ಅಭ್ಯರ್ಥಿಗಳಲ್ಲಿ ಭಯ ಹುಟ್ಟಿಸಿದೆ. ಬಿಎಸ್ಪಿಯನ್ನು ಭಯ ಮಿಶ್ರಿತ ಗೌರವದಿಂದ ಕಾಣಲು ಶುರು ಮಾಡಿಕೊಂಡಿದ್ದಾರೆ’ ಎಂದು ನಗೆ ಬೀರಿದರು.

ಚುನಾವಣೆಯಲ್ಲಿ ಬಿಎಸ್ಪಿ ಪ್ರಬಲ ಸ್ಪರ್ಧೆ ಒಡ್ಡಿದೆಯೇ?

ಖಂಡಿತಾ ಒಡ್ಡಿದೆ. ‘ಅದೆಂತಾ ಬಿಎಸ್ಪಿ, ಅದು ಲೆಕ್ಕಕ್ಕಿಲ್ಲ’ ಎಂದು ಯೋಚನೆ ಮಾಡುತ್ತಿದ್ದ ಪಕ್ಷಗಳಿಗೆ ಮಾಯಾವತಿ ಬಂದು ಹೋದ ಮೇಲೆ ತಲೆಬಿಸಿಯಾಗಿದೆ. 8 ವಿಧಾನಸಭಾ ಕ್ಷೇತ್ರಗಳಲ್ಲಿ ಮೈಸೂರಿಗೆ ಮಾತ್ರ ಮಾಯಾವತಿ ಬಂದಿದ್ದು. ನಮ್ಮ ಶಕ್ತಿ ಪ್ರದರ್ಶನ ಮೈಸೂರಿನಲ್ಲೇ ಆಯಿತು. ಬೇರೆಯವರ ರೀತಿ ದುಡ್ಡು ಕೊಟ್ಟು, ಬಸ್‌ ಮಾಡಿ, ಊಟ ಕೊಟ್ಟು ಕರೆಸಿಕೊಂಡಿದ್ದಲ್ಲ. ಎಲ್ಲರೂ ಸ್ವಯಂ ಸೇವಕರು. ಇದನ್ನು ಎಲ್ಲರೂ ಕಂಡು ಚಕಿತರಾಗಿದ್ದಾರೆ. ನಾವು ಈ ಎರಡೂ ಪಕ್ಷಗಳಿಗೆ ಕಡಿಮೆ ಇಲ್ಲದಂತೆ ಪ್ರಚಾರ ಕೈಗೊಂಡಿದ್ದೇವೆ. ಹಳ್ಳಿ ಹಳ್ಳಿ ತಿರುಗಾಡಿದ್ದೇವೆ. ಹಾಗಾಗಿ, ಈ ಚುನಾವಣೆ ತ್ರಿಕೋನ ಸ್ಪರ್ಧೆ ಆಗುವುದರಲ್ಲಿ ಎರಡನೇ ಮಾತಿಲ್ಲ.

ಪಕ್ಷದ ಸಾಮರ್ಥ್ಯ ಹೇಗಿದೆ?

ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಬಿಎಸ್ಪಿ ಶಕ್ತಿ ಅದ್ಭುತವಾಗಿದೆ. ತಳಮಟ್ಟದಿಂದ ಸಂಘಟನೆ ಮಾಡಿದ್ದೇವೆ. ನಮ್ಮದು ಮೂರನೇ ದೊಡ್ಡ ರಾಷ್ಟ್ರೀಯ ಪಕ್ಷ. ಅಲ್ಲದೇ, ವಿದ್ಯುನ್ಮಾನ ಮತಯಂತ್ರದಲ್ಲಿನ ಪಟ್ಟಿಯಲ್ಲಿ ನನಗೆ ಮೊದಲ ಕ್ರಮ ಸಂಖ್ಯೆ ಸಿಕ್ಕಿದೆ. ಇದಕ್ಕಾಗಿ ಎಷ್ಟೋ ಪಕ್ಷಗಳ ಅಭ್ಯರ್ಥಿಗಳು ಏನೇನೊ ಕಸರತ್ತು ಮಾಡುತ್ತಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಜೆಡಿಎಸ್‌ ಮತಗಳನ್ನೇ ನಂಬಿಕೊಂಡಿದ್ದಾರೆ. ‘ಮತಗಳು ನಮಗೆ ನಮಗೆ’ ಎಂದು ಕನಸು ಕಾಣುತ್ತಿದ್ದಾರೆ. ಈ ಚುನಾವಣೆಯಲ್ಲಿ ಈ ಇಬ್ಬರನ್ನೂ ತಿರಸ್ಕರಿಸುವ ಜೆಡಿಎಸ್ ಮತಗಳು ಬಿಎಸ್ಪಿಗೆ ಬೀಳಲಿವೆ.

ನನಗೆ ಜೆಡಿಎಸ್‌ನಲ್ಲಿರುವ ಸ್ನೇಹಿತರು ಅಸಂಖ್ಯ. ಜೆಡಿಎಸ್‌ನ ಎಲ್ಲ ಒಳಗುಟ್ಟುಗಳು ತಿಳಿದಿರುವ, ಎಲ್ಲ ಕಾರ್ಯಕರ್ತರು ಪರಿಚಿತರಿರುವ ಕಾರಣದಿಂದ ಮತಗಳನ್ನು ಪಡೆದುವುದು ಹೇಗೆಂದು ಗೊತ್ತಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡರು ಗೆಲ್ಲಲು ನಾವೇ ಕಾರಣ. ನಮ್ಮ ಮೇಲೆ ಅವರಿಗೆ ಋಣ ಇದೆ. ಕಾಂಗ್ರೆಸ್‌ ಹಾಗೂ ಬಿಜೆಪಿಯವರು ಜೆಡಿಎಸ್ ಮತಗಳನ್ನು ನಂಬಿಕೊಂಡಿರಬೇಕಾದರೆ ನಾನೇಕೆ ನಂಬಿಕೊಳ್ಳಬಾರದು? ಜೆಡಿಎಸ್‌ನ ಕಾರ್ಯಕರ್ತರು ನನ್ನೊಂದಿಗೆ ಹೇಳಿಕೊಂಡಿದ್ದಾರೆ; ಜೆಡಿಎಸ್‌ ಮತಗಳು ನನಗೇ ಎಂದು.

ಪ್ರಬಲರ ಮಧ್ಯೆ ನಿಮ್ಮ ಧ್ವನಿ ಕೇಳುವುದೇ?

ಪ್ರಬಲರು ಎನ್ನುವುದೇ ಮೊದಲನೆಯದಾಗಿ ಸುಳ್ಳು. ಏಕೆಂದರೆ, ಪ್ರತಾಪ ಸಿಂಹ ಅವರು ಐದು ವರ್ಷದಲ್ಲಿ ಯಾರನ್ನೂ ಭೇಟಿ ಮಾಡಿಲ್ಲ. ಯಾರಿಗೂ ಸ್ಪಂದಿಸಿಲ್ಲ. ಕೊಡಗಿನಲ್ಲಿ ವಿರೋಧ ಕಟ್ಟಿಕೊಂಡಿದ್ದಾರೆ. ವಿರೋಧ ಇದ್ದರೂ ಕೊಡಗಿಗೆ ರೈಲು ತಂದರು. ಮಾತೆತ್ತಿದರೆ ವಿಮಾನ ನಿಲ್ದಾಣ, ರಸ್ತೆ, ರೈಲು ಎನ್ನುತ್ತಾರೆ. ಅದರಲ್ಲೂ ಬಹುತೇಕ ಸುಳ್ಳೇ. ಇನ್ನು ವಿಜಯಶಂಕರ್‌ ವಿಚಾರಕ್ಕೆ ಬರುವುದಾದರೆ, ಅವರಿಗೆ ತತ್ವ – ಸಿದ್ಧಾಂತ ಎಲ್ಲಿದೆ? ಇಷ್ಟು ವರ್ಷ ಬಿಜೆಪಿಗೆ ಮತ ಹಾಕಿ ಎಂದು ಕೇಳಿ ಈಗ ಕಾಂಗ್ರೆಸ್ಸಿಗೆ ಮತ ಹಾಕಿ ಈಗ ಎಂದು ಬೇಡುತ್ತಿದ್ದಾರೆ. ವಿಜಯಶಂಕರ್‌ ಕಾಂಗ್ರೆಸ್ಸಿಗೆ ಬಂದಿರುವುದು ಅಧಿಕಾರದಾಸೆಗೆ.

ಗೆಲ್ಲುವಷ್ಟು ಮತಗಳು ಬರುತ್ತವೆಯೇ?

ಗೆಲ್ಲಲು ಬೇಕಿರುವುದು ಮೂರೂವರೆ ಲಕ್ಷ ಮತಗಳು. ಅಷ್ಟು ಮತಗಳು ನಮಗೆ ಸುಲಭವಾಗಿ ಸಿಗುತ್ತವೆ. ಎಲ್ಲೆಡೆ ಭೇಟಿ ಮಾಡಿದಾಗ ಜನ ಹೇಳಿರುವುದು ಏನೆಂದರೆ, ‘ಯಾವ ಸ್ಪರ್ಧಿಯೂ ಇಲ್ಲಿಗೆ ಬಂದಿಲ್ಲ. ನೀನು ಬಂದಿದ್ದೀಯ. ನಿನಗೇ ನಮ್ಮ ಮತ ಹಾಕುತ್ತೇವೆ’ ಎಂದು. ಎಲ್ಲ ಬಸ್‌ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ನಮ್ಮ ಕರಪತ್ರ ಹಂಚಿದ್ದೇವೆ. ಫೇಸ್‌ಬುಕ್‌ ಪುಟ ತೆರೆದಿದ್ದೇವೆ. ವಾಟ್ಸ್‌ಆ್ಯಪ್ ಗ್ರೂಪ್‌ ಮಾಡಿಕೊಂಡಿದ್ದೇವೆ. ನಾನೊಬ್ಬನೇ ಒಂದು ದಿನಕ್ಕೆ 1 ಸಾವಿರ ಎಸ್‌ಎಂಎಸ್‌ ಕಳುಹಿಸುತ್ತಿದ್ದೇನೆ. 1 ಸಾವಿರ ಕರೆ ಮಾಡುತ್ತೇನೆ. ಸ್ನೇಹಿತರು ಇದೇ ಕೆಲಸ ಮಾಡುತ್ತಿದ್ದಾರೆ. ‘ಬಲ್ಕ್‌’ ಎಸ್‌ಎಂಎಸ್‌ ಸೇವೆ ಪಡೆದುಕೊಂಡಿದ್ದೇನೆ. ಖಾಸಗಿ, ಸರ್ಕಾರಿ ಸಂಸ್ಥೆಗಳಿಗೆ ಭೇಟಿ ನೀಡಿದ್ದೇನೆ.

ನೀವು ಹೆಚ್ಚು ಮತ ಪಡೆದರೆ ಎದುರಾಳಿಗಳಲ್ಲಿ ಯಾರಿಗೆ ಲಾಭವಾಗುವುದು?

ಯಾರಿಗೇಕೆ ಲಾಭವಾಗಬೇಕು. ಈ ಬಾರಿ ಗೆಲ್ಲುವುದು ನಾವೇ. ಲಾಭವೆಲ್ಲಾ ನಮಗೇ. ಏಕೆಂದರೆ, ಜೆಡಿಎಸ್‌, ಬಿಜೆಪಿ, ಕಾಂಗ್ರೆಸ್ಸಿನಿಂದಲೇ ನಮಗೆ ಮತಗಳು ಬರುತ್ತಿವೆ. ಹಾಗಾಗಿ ನಾನೇ ಗೆಲ್ಲುವುದು. ಸ್ಪರ್ಧೆಯಂತೂ ಬಿರುಸಾಗಿದೆ. ನಾವು ಗೆಲ್ಲಬೇಕು ಎನ್ನುವುದಷ್ಟೇ ನಮ್ಮ ಆಶಯ. ಬೇರೆಯವರಿಗೆ ಆಗುವ ಲಾಭ – ನಷ್ಟಗಳ ಲೆಕ್ಕಾಚಾರವನ್ನೇ ನಾವು ಮಾಡಿಲ್ಲ.

ನಿಮ್ಮ ಸ್ಥಳೀಯ ಪ್ರಣಾಳಿಕೆ ಏನು? ಅಭಿವೃದ್ಧಿಯ ಆದ್ಯತೆಯೇನು?

ನಮಗೆ ಬಿಜೆಪಿ, ಕಾಂಗ್ರೆಸ್‌ನಂತೆ ಪ್ರಣಾಳಿಕೆ ಇಲ್ಲ. ಸಂವಿಧಾನದ ಯಥಾವತ್‌ ಜಾರಿಯೇ ನಮ್ಮ ಪ್ರಣಾಳಿಕೆ. ಸುಳ್ಳು ಹೇಳಲು ನಮಗೆ ಸಾಧ್ಯವಿಲ್ಲ. ಸಂವಿಧಾನದಲ್ಲಿರುವ ಆಶಯಗಳನ್ನು ಜನರಿಗಾಗಿ ಜಾರಿಗೊಳಿಸಿದರೆ, ಸೌಲಭ್ಯಗಳನ್ನು ತಲುಪಿಸಿದರೆ ಸಾಕು. ಹಾಗಾಗಿ, ಸಂವಿಧಾನವೇ ನಮ್ಮ ಪ್ರಣಾಳಿಕೆ. ಮೂಲಸೌಕರ್ಯಗಳನ್ನು ಕಲ್ಪಿಸುವುದು, ಗ್ರಾಮೀಣಾಭಿವೃದ್ಧಿ, ನಿರುದ್ಯೋಗ ಸಮಸ್ಯೆ ನಿವಾರಣೆ ಆದ್ಯತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT