ಮಂಗಳವಾರ, ಆಗಸ್ಟ್ 20, 2019
25 °C
ಸಿಎಫ್‌ಟಿಆರ್‌ಐನಲ್ಲಿ ವಿಜ್ಞಾನ ಪತ್ರಿಕೋದ್ಯಮ ಹಾಗೂ ವಿಜ್ಞಾನ ಸಂವಹನ ಸಮ್ಮೇಳನ

‘ವಿಜ್ಞಾನಕ್ಕಿಂತ ಸುಳ್ಳು ವೇಗವಾಗಿ ಹರಡುತ್ತಿದೆ’

Published:
Updated:
Prajavani

ಮೈಸೂರು: ‘ಸುಳ್ಳು ಸುದ್ದಿಗಳು ಶರವೇಗದಲ್ಲಿ ಜನರನ್ನು ತಲುಪುತ್ತಿವೆ. ಆದರೆ ವಿಜ್ಞಾನ ತುಂಬಾ ನಿಧಾನವಾಗಿ ತಲುಪುತ್ತಿದೆ. ಇದಕ್ಕೆ ತಂತ್ರಜ್ಞಾನ ವೇಗವಾಗಿ ಅಭಿವೃದ್ಧಿಗೊಳ್ಳುತ್ತಿರುವುದೇ ಕಾರಣವಾಗಿದೆ’ ಎಂದು ವಿಜ್ಞಾನ ಲೇಖಕ ನಾಗೇಶ ಹೆಗಡೆ ಅಭಿಪ್ರಾಯಪಟ್ಟರು.

ನಗರದ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ವಿಜ್ಞಾನ ಪತ್ರಿಕೋದ್ಯಮ ಹಾಗೂ ವಿಜ್ಞಾನ ಸಂವಹನ ಸಮ್ಮೇಳನ’ ಉದ್ಘಾಟಿಸಿ ಮಾತನಾಡಿದ ಅವರು, ‘ವಿಜ್ಞಾನದ ಸತ್ಯ ಸಂಶೋಧನೆ ಜರೂರಾಗಿ ಜನರಿಗೆ ತಲುಪುವಂತಾಗಬೇಕು’ ಎಂದರು.

‘ಸಾಮಾಜಿಕ ಜಾಲತಾಣ, ತಂತ್ರಜ್ಞಾನ ಅಭಿವೃದ್ಧಿಗೂ ಮುನ್ನವೇ ಗಣೇಶ ಹಾಲು ಕುಡಿಯುತ್ತಾನೆ ಎಂಬ ಸುಳ್ಳು ಸುದ್ದಿ ಅತ್ಯಂತ ವೇಗವಾಗಿ ಹರಡಿತ್ತು. ಹಲ ಖ್ಯಾತನಾಮರು ಕೈಯಲ್ಲಿ ಹಾಲಿನ ಬಟ್ಟಲಿಡಿದು ಸರತಿಯಲ್ಲಿ ನಿಂತಿದ್ದರು. ವೈಜ್ಞಾನಿಕ ಸತ್ಯವನ್ನು ಯಾರೂ ನಂಬಲಿಲ್ಲ. ಈ ಬಗ್ಗೆ ಹೇಳಿದರೂ ಜನ ಕೇಳುವುದಿಲ್ಲ. ಧಾರ್ಮಿಕ ವಿಚಾರಗಳು ಜನರನ್ನು ವೇಗವಾಗಿ ತಲುಪುತ್ತವೆ’ ಎಂದು ತಿಳಿಸಿದರು.

‘ಮಂಗಳನ ಮೇಲ್ಮೈನಲ್ಲಿ ಮಿಥೇನ್ ಅಂಶ ಇದೆಯೇ ಎಂಬುದರ ಪತ್ತೆಗೆ ಗಗನನೌಕೆ ಕಳುಹಿಸಲಾಗಿದೆ. ಆದರೆ ಇದೇ ಮಿಥೇನ್‌ ಅನಿಲವನ್ನು ಚರಂಡಿಯೊಳಗಿಳಿದ ಪೌರಕಾರ್ಮಿಕರು ಸೇವಿಸಿ ಮೃತಪಡುತ್ತಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಆಡಳಿತ ಮುಂದಾಗಿಲ್ಲ’ ಎಂದು ಹೆಗಡೆ ವಿಷಾದಿಸಿದರು.

ಇಂಡಿಯಾ ಸೈನ್ಸ್ ವೈರ್ ಸಂಸ್ಥೆಯ ನಿರ್ವಹಣಾ ಸಂಪಾದಕ ದಿನೇಶ್ ಸಿ.ಶರ್ಮಾ ಮಾತನಾಡಿ, ‘ನಮ್ಮಲ್ಲಿ ಕೆಲವು ವಿರೋಧಾಭಾಸಗಳಿವೆ. ಅವುಗಳೆಂದರೆ ಚಂದ್ರಯಾನ, ಮಂಗಳಯಾನದಿಂದ ಏನು ಉಪಯೋಗ ? ಪೌರ ಕಾರ್ಮಿಕರು ದುಃಸ್ಥಿತಿಯಲ್ಲಿದ್ದಾರೆ ಎನ್ನುವ ಆರೋಪದ ಬದಲು; ವಿಜ್ಞಾನವನ್ನು ಜನ ಸಾಮಾನ್ಯರಿಗೆ ತಲುಪಿಸಲು ಪ್ರಯತ್ನಿಸಬೇಕು. ಸಂವಹನ ವಿಜ್ಞಾನದ ಮೂಲಕ ಅರಿವು ಮೂಡಿಸುವುದರ ಬಗ್ಗೆ ನಮಗೆ ನಾವೇ ಪ್ರಶ್ನೆ ಹಾಕಿಕೊಳ್ಳಬೇಕು’ ಎಂದರು.

ಸಿಎಫ್‌ಟಿಆರ್‌ಐನ ವಿಜ್ಞಾನ ಸಂವಹನ ವೇದಿಕೆಯ ಟೀ ಶರ್ಟ್ ಬಿಡುಗಡೆ ಮಾಡಲಾಯಿತು. ಉಪ್ಪಿನ ಕುರಿತಾದ ವೈಜ್ಞಾನಿಕ ಅಂಶಗಳನ್ನೊಳಗೊಂಡ ಭಿತ್ತಿಚಿತ್ರವನ್ನು ಸಹ ಇದೇ ಸಂದರ್ಭ ಬಿಡುಗಡೆ ಮಾಡಲಾಯಿತು.

ಆರ್‌.ಸುಬ್ರಮಣಿಯನ್, ಡಾ.ಶ್ರೀದೇವಿ ಎ.ಸಿಂಗ್ ಉಪಸ್ಥಿತರಿದ್ದರು. ವಿಜ್ಞಾನಿ ಕೊಳ್ಳೇಗಾಲ ಶರ್ಮಾ ವಂದಿಸಿದರು.

Post Comments (+)