ಮರೆಯಾದ ವಿಜ್ಞಾನ ಲೇಖಕಿ‌ ಮಯೂರಾ

7

ಮರೆಯಾದ ವಿಜ್ಞಾನ ಲೇಖಕಿ‌ ಮಯೂರಾ

Published:
Updated:
Deccan Herald

ಮೈಸೂರು: ವಿಜ್ಞಾನವನ್ನು ಕಲಿಯಬೇಕಾದರೆ ಇಂಗ್ಲೀಷ್‌ನಿಂದ ಮಾತ್ರ ಸಾಧ್ಯ ಎನ್ನುವ ಕಾಲಘಟ್ಟದಲ್ಲಿ ಬರವಣಿಗೆ ಆರಂಭಿಸಿದವರು ಮಯೂರಾ. ಕನ್ನಡದಲ್ಲೂ ವಿಜ್ಞಾನವನ್ನು ಹೇಳಬಹುದು. ಇಂಗ್ಲೀಷ್‌ನ ಹಂಗು ಬೇಕಿಲ್ಲ ಎನ್ನುವುದನ್ನು ಸಾಧಿಸಿ ತೋರಿಸಿದ ಮಹನೀಯರಲ್ಲಿ ಇವರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ.

1936ರಲ್ಲಿ ಮೈಸೂರಿನಲ್ಲಿ ಜನಿಸಿದ ಇವರು ಕನ್ನಡ ಮಾಧ್ಯಮದಲ್ಲೇ ಪ್ರೌಢಶಾಲಾ ವಿದ್ಯಾಭ್ಯಾಸ ಪೂರೈಸಿ, ನಂತರ ಪಿಯು ಹಂತದಲ್ಲಿ ವಿಜ್ಞಾನ ಆಯ್ದುಕೊಂಡರು. ಮೈಸೂರು ವಿ.ವಿಯಿಂದ ಎಂ.ಎಸ್ಸಿ ಪದವಿ ಪಡೆದು 37 ವರ್ಷಗಳ ಕಾಲ ಭೌತಶಾಸ್ತ್ರ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿದರು. ಅನೇಕ ವಿಜ್ಞಾನ ಪತ್ರಿಕೆಗಳಿಗೆ ಇವರು ಹಲವು ಲೇಖನಗಳನ್ನು ಬರೆಯುವ ಮೂಲಕ ಕನ್ನಡದಲ್ಲಿ ವಿಜ್ಞಾನವನ್ನು ಪಸರಿಸಿದರು. ಮಕ್ಕಳಿಗಾಗಿ ನಾಟಕ ಬರೆದು ಪ್ರಯೋಗಗಳನ್ನೂ ಮಾಡಿದ್ದಾರೆ. ಇವರ ಹಲವು ನಾಟಕಗಳು ಆಕಾಶವಾಣಿಯಲ್ಲಿ ಬಿತ್ತರಗೊಂಡಿವೆ. ಇವರೇ ಏನೆ ಬರೆದರೂ ಅದರಲ್ಲಿ ವಿಜ್ಞಾನ ಅಥವಾ ವಿಜ್ಞಾನಿಗಳ ಕುರಿತೇ ಬರೆಯುತ್ತಿದ್ದದ್ದು ವಿಶೇಷ ಎನಿಸಿತ್ತು.

ವಿಜ್ಞಾನ ಬೋಧಕರ 3ನೇ ರಾಷ್ಟ್ರೀಯ ಸಮ್ಮೇಳನದ ಸ್ಮರಣ ಸಂಚಿಕೆಯ ಸಂಪಾದಕಿಯಾಗಿ ಇವರು ಸೇವೆ ಸಲ್ಲಿಸಿದ್ದರು. ಇವರ ಸ್ಟೀಫನ್ ಹಾಕಿಂಗ್, ಬದುಕು ಬರಹ ಮತ್ತು ವಿಚಾರ ಕೃತಿಗೆ ಇನ್ಫೊಸಿಸ್ ಫೌಂಡೇಷನ್ ಸಾಹಿತ್ಯ ಪ್ರಶಸ್ತಿ, ಬಿ.ರಂಗನಾಯಕಮ್ಮ ಕೃತಿಗೆ ಬಿಎಂಶ್ರೀ ಪ್ರತಿಷ್ಠಾನದ ಸಾವಿತ್ರಮ್ಮ ದತ್ತಿ ಪ್ರಶಸ್ತಿಗಳು ಸಂದಿವೆ.

ಹೆಚ್ಚು ಪ್ರಚಾರದಿಂದ ದೂರ ಉಳಿದ ಇವರು 13 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸರ್ ಐಸಾಕ್ ನ್ಯೂಟನ್, ಅಲೆಕ್ಸಾಂಡರ್ ಗ್ರಹಾಂ ಬೆಲ್, ಥಾಮಸ್ ಅಲ್ವ ಎಡಿಸನ್, ಆಲ್ಬರ್ಟ್ ಏಬ್ರಹಾಂ ಮೈಕೇಲ್ಸನ್, ಫಿನ್ಲೆ ಮೋರ್ಸ್, ಶಬ್ದಶಾಸ್ತ್ರ, ಆಲ್ಫ್ರೆಡ್ ನೋಬೆಲ್, ಸತ್ಯೇಂದ್ರನಾಥ ಬೋಸ್, ರಿಚರ್ಡ್ ಫೈನ್‌ಮನ್, ಸ್ಟೀಫನ್ ಹಾಕಿಂಗ್ ಬದುಕು ಬರಹ ಮತ್ತು ವಿಚಾರ, ಗ್ರಹಣ, ಅರಿವು ಹಾಗೂ ಬಿ.ರಂಗನಾಯಕಮ್ಮ ಪ್ರಥಮ ಏರೊನಾಟಿಕಲ್ ಎಂಜಿನಿಯರ್ ಇವರ ಕೃತಿಗಳು.

***

ಮೈಸೂರು: ವಿಜ್ಞಾನ ಲೇಖಕಿ ಪ್ರೊ.ಬಿ.ಎಸ್.ಮಯೂರಾ (82) ಮಂಗಳವಾರ ಬೆಂಗಳೂರಿನಲ್ಲಿ ನಿಧನರಾದರು. ಅಂತ್ಯಕ್ರಿಯೆ ಬುಧವಾರ ಮೈಸೂರಿನಲ್ಲಿ ನೆರವೇರಿತು.

ಕನ್ನಡದಲ್ಲಿ ವಿಜ್ಞಾನ ಓದುಗರನ್ನು ಹೆಚ್ಚಿಸಿದ ಲೇಖಕರಲ್ಲಿ ಪ್ರಮುಖರು. ಮಹಾರಾಣಿ ಕಾಲೇಜಿನಲ್ಲಿ ಭೌತಶಾಸ್ತ್ರ ಪ್ರಾಧ್ಯಾ‍ಪಕಿಯಾಗಿ ಸೇವೆಸಲ್ಲಿಸಿ ನಿವೃತ್ತರಾಗಿದ್ದರು.

ರಾಜ್ಯ ವಿಜ್ಞಾನ ಪರಿಷತ್ತಿನ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದು, ಕನ್ನಡ ಗಣಕ ಪರಿಷತ್ತಿನಲ್ಲೂ ಕೆಲಸ ಮಾಡಿದ್ದಾರೆ. ಇವರಿಗೆ ಸೋದರಿಯರಾದ ಬಿ.ಎಸ್.ರುಕ್ಕಮ್ಮ, ಪದ್ಮಾ, ಲಲಿತಾ, ಪ್ರಭಾ ಸಂಪತ್ ಇದ್ದಾರೆ.

 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 8

  Sad
 • 0

  Frustrated
 • 0

  Angry

Comments:

0 comments

Write the first review for this !