ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ಸಾಹಿತ್ಯ ರಚನೆಗೆ ಬೇಕು ಪ್ರೋತ್ಸಾಹ

‘ವಿಜ್ಞಾನ ದೀಪಕ ಪ್ರೊ.ಜೆ.ಆರ್.ಲಕ್ಷ್ಮಣರಾವ್’ ಕೃತಿ ಬಿಡುಗಡೆ
Last Updated 13 ಜನವರಿ 2019, 19:32 IST
ಅಕ್ಷರ ಗಾತ್ರ

ಮೈಸೂರು: ವಿಜ್ಞಾನ ಸಾಹಿತ್ಯ ರಚನೆಗೆ ಸರ್ಕಾರಗಳು ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಕುವೆಂಪು ವಿ.ವಿ ವಿಶ್ರಾಂತ ಕುಲಪತಿ ಪ್ರೊ.ಪಿ.ವೆಂಕಟರಾಮಯ್ಯ ತಿಳಿಸಿದರು.

ಬ್ರೇಕ್‌ ಥ್ರೂ ಸೈನ್ಸ್ ಸೊಸೈಟಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ವಿಜ್ಞಾನ ದೀಪಕ ಪ್ರೊ.ಜೆ.ಆರ್. ಲಕ್ಷ್ಮಣರಾವ್’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸರ್ಕಾರಗಳು ವಿವಿಧ ಯೋಜನೆಗಳಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತದೆ. ಸಾಹಿತ್ಯ ಸಮ್ಮೇಳನಗಳಿಗೂ ಹೆಚ್ಚಿನ ಹಣ ವ್ಯಯ ಮಾಡುತ್ತದೆ. ಸಮ್ಮೇಳನಗಳನ್ನು ಎರಡು ವರ್ಷಕ್ಕೆ ಒಮ್ಮೆ ನಡೆಸಿ, ಉಳಿಯುವ ಹಣವನ್ನು ವಿಜ್ಞಾನ ಸಾಹಿತ್ಯ ರಚನೆಗೆ ನೀಡಿದರೆ ಸಾಕಷ್ಟು ಉತ್ತೇಜನ ನೀಡಿದಂತೆ ಆಗುವುದು ಎಂದು ಅವರು ಹೇಳಿದರು.

‘ಸಾಹಿತ್ಯ ಸಮ್ಮೇಳಗಳನ್ನು ನಡೆಸಬೇಕು. ಅದರಿಂದ ನಾಡಿನ ಭಾಷೆ ಉಳಿವಿಗೆ ಸಹಕಾರವಾಗುತ್ತದೆ. ಆದರೆ, ವಿಜ್ಞಾನ ಸಾಹಿತ್ಯಕ್ಕೂ ಪ್ರೋತ್ಸಾಹ ನೀಡಬೇಕು ಎನ್ನುವುದು ನಮ್ಮ ಬೇಡಿಕೆ’ ಎಂದು ಅವರು ಮನವಿ ಮಾಡಿದರು.

ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದು ಒಳ್ಳೆಯ ಚಿಂತನೆಯೇ. ಆದರೆ, ವಿಜ್ಞಾನವನ್ನು ಮಾತೃಭಾಷೆಯಲ್ಲಿ ಕಲಿಸಬೇಕು ಎನ್ನುವುದಾದರೆ ಮೊದಲು ಮಾತೃಭಾಷೆಯಲ್ಲಿ ಪಠ್ಯ ಸಿದ್ಧವಾಗಬೇಕು. ಇಲ್ಲವಾದಲ್ಲಿ ಶಿಕ್ಷಕರಿಗೆ ಪಾಠಮಾಡಲು ಸಾಧ್ಯವಾಗದು. ಅಂತೆಯೇ, ಪ್ರೊ.ಜೆ.ಆರ್.ಲಕ್ಷ್ಮಣರಾವ್ ಅವರು ಭವಿಷ್ಯದಲ್ಲಿ ವಿಜ್ಞಾನ ಸಾಹಿತ್ಯ ರಚಿಸುವವರಿಗೆ, ಶಿಕ್ಷಕರಿಗೆ ಅನುಕೂಲವಾಗಲೆಂದು ವಿಜ್ಞಾನ ಸಂಬಂಧಿ ಇಂಗ್ಲಿಷ್- ಕನ್ನಡ ನಿಘಂಟು ರಚಿಸಿದರು. ಹೊಸ ಹೊಸ ಪದಗಳನ್ನು ಕನ್ನಡಕ್ಕೆ ನೀಡಿದರು. ಹಾಗಾಗಿ, ವಿಜ್ಞಾನಕ್ಕೆ ಲಕ್ಷ್ಮಣರಾವ್‌ ಅವರ ಕೊಡುಗೆ ಅಪಾರ ಎಂದು ಸ್ಮರಿಸಿದರು.

ವಿಜ್ಞಾನ ಪರಿಷತ್ ಹುಟ್ಟುಹಾಕಿದ ಲಕ್ಷ್ಮಣರಾವ್‌ ಅವರು ‘ವಿಜ್ಞಾನ ಕರ್ನಾಟಕ’ ತ್ರೈಮಾಸಿಕ ಹೊರತಂದರು. ಎಡಪಂಥೀಯ ಚಿಂತನೆಗಳನ್ನು ಮೈಗೂಡಿಸಿಕೊಂಡು ಸರ್ವರಿಗೂ ಸಮಪಾಲು, ಸಮಬಾಳು ತತ್ವ ಪ್ರತಿಪಾದಿಸಿದರು ಎಂದು ವಿಶ್ಲೇಷಿಸಿದರು.

ಪ್ರೊ.ಆರ್.ಎಸ್.ಆನಂದಮೂರ್ತಿ ಅವರು ಸಿತಾರ್ ನುಡಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಜೆಆರ್‌ಎಲ್ ಅವರ ಪುತ್ರ ಜೆ.ಎಲ್.ಅನಿಲ್ ಕುಮಾರ್ ಕೃತಿ ಕುರಿತು ಮಾತನಾಡಿದರು. ಪ್ರೊ.ಎ.ವಿ.ಗೋವಿಂದರಾವ್ ಅಧ್ಯಕ್ಷತೆವಹಿಸಿದ್ದರು. ಬ್ರೇಕ್‌ಥ್ರೂ ಸೈನ್ಸ್ ರಾಜ್ಯ ಘಟಕದ ಅಧ್ಯಕ್ಷ ಜಿ.ಸತೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT