ಶುಕ್ರವಾರ, ಜುಲೈ 1, 2022
22 °C
ಎಕರೆಗೆ 168 ಟನ್ ಕಬ್ಬು ಬೆಳೆದ ಸಂಜೀವ್ ಮಾನೆ ಅವರಿಂದ ರೈತರಿಗೆ ಮಾರ್ಗದರ್ಶನ

ವೈಜ್ಞಾನಿಕ ಬೇಸಾಯದಿಂದ ಇಳುವರಿ ಹೆಚ್ಚಳ: ಸಂಜೀವ್‌ ಮಾನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ನಾನೂ ಮೊದಲು ಎಕರೆಗೆ 20ರಿಂದ 22 ಟನ್‌ನಷ್ಟೇ ಕಬ್ಬು ಬೆಳೆಯುತ್ತಿದ್ದೆ. ಆದರೆ, ವೈಜ್ಞಾನಿಕ ಬೇಸಾಯ ಪದ್ಧತಿಯನ್ನು ಅನುಸರಿಸಿದ್ದರಿಂದ ಈಗ 168 ಟನ್ ಬೆಳೆಯುತ್ತಿದ್ದೇನೆ’ ಎಂದು ಮಹಾರಾಷ್ಟ್ರದ ಪ್ರಗತಿಪರ ಕೃಷಿಕ ಸಂಜೀವ್‌ ಮಾನೆ ತಿಳಿಸಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘ, ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ರೈತಮಿತ್ರ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಇಲ್ಲಿನ ಚೇತನ್ ಗಾರ್ಡನ್ ಹೋಟೆಲ್‌ನಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಭಾಗೀಯ ಮಟ್ಟದ ಕಬ್ಬು ಬೆಳೆಗಾರರ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಒಂದು ಎಕರೆಗೆ 200 ಟನ್ ಬೆಳೆಯಬೇಕು ಎಂಬ ಗುರಿಯನ್ನಿರಿಸಿಕೊಂಡು ಮಹಾರಾಷ್ಟ್ರದ ಕೇಂದ್ರೀಯ ಕಬ್ಬು ಬೆಳೆ ಸಂಶೋಧನಾ ಕೇಂದ್ರ ಹಾಗೂ ಸ್ಥಳೀಯ ಕೃಷಿ ವಿಜ್ಞಾನಿಗಳ ಸಲಹೆ, ಮಾರ್ಗದರ್ಶನ ಪಡೆದು ಕಬ್ಬನ್ನು ಬೆಳೆಯುತ್ತಾ ಹೋದಂತೆ ಇಳುವರಿ 45 ಟನ್‌ಗೆ ಏರಿಕೆಯಾಯಿತು. ನಂತರ, ಇದು 168 ಟನ್ ತಲುಪಿತು. ಈಗಲೂ 200 ಟನ್‌ ಮುಟ್ಟಬೇಕು ಎಂಬ ಗುರಿಯೆಡೆಗೆ ಪ್ರಯತ್ನ ಮಾಡುತ್ತಿದ್ದೇನೆ’ ಎಂದು ತಿಳಿಸಿದರು.

‘ನಾನೊಬ್ಬ ಸಾಮಾನ್ಯ ರೈತ. ಆದರೆ, 13ಕ್ಕೂ ಅಧಿಕ ತಜ್ಞರ ಸಲಹೆಯಂತೆ ಹಲವು ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿದ್ದರಿಂದ ಯಶಸ್ಸು ಸಿಕ್ಕಿದೆ. ಎಲ್ಲ ರೈತರೂ ಇದೇ ಬಗೆಯಲ್ಲಿ ವೈಜ್ಞಾನಿಕ ಕೃಷಿಯನ್ನು ಅನುಸರಿಸಬೇಕು’ ಎಂದು ಕರೆ ನೀಡಿದರು.

‘25 ವರ್ಷಗಳ ಪ್ರಯತ್ನಕ್ಕೆ 64 ಪುರಸ್ಕಾರಗಳು ಸಿಕ್ಕಿವೆ. ಇದರಲ್ಲಿ ಮಹಾರಾಷ್ಟ್ರ ಸರ್ಕಾರ ಕೊಟ್ಟ ‘ಕೃಷಿ ರತ್ನ’ ಪ್ರಶಸ್ತಿ ಮಹತ್ವದ್ದು’ ಎಂದು ಸಂತಸ ವ್ಯಕ್ತಪಡಿಸಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ‘ಸಂಜೀವ್ ಮಾನೆ ಅವರ ಸಾಧನೆ ದೊಡ್ಡದು. ಅವರನ್ನು ಅಮೆರಿಕದ ಅಧ್ಯಕ್ಷರಾಗಿದ್ದ ಬರಾಕ್ ಒಬಮಾ ಅವರೇ ಸನ್ಮಾನಿಸಿದ್ದಾರೆ. ಅವರಂತೆ ಎಲ್ಲರೂ ಆಗಬೇಕಾದರೆ, ವೈಜ್ಞಾನಿಕ ಪದ್ಧತಿಯಲ್ಲಿ ಬೇಸಾಯ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ಕಬ್ಬು ಕಲ್ಪವೃಕ್ಷವಿದ್ದಂತೆ, ಎಲ್ಲಾ ರೀತಿಯ ಉತ್ಪನ್ನಗಳನ್ನು ಇದರಿಂದ ತಯಾರಿಸಲಾಗುತ್ತಿದ್ದರೂ ರೈತರಿಗೆ ಮಾತ್ರ ನ್ಯಾಯಯುತ ಬೆಲೆ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರ ಹನಿ ನೀರಾವರಿಗೆ ಸಹಾಯಧನ ಕಡಿಮೆ ಮಾಡಿರುವುದು ಸರಿಯಲ್ಲ. ಎಲ್ಲ ರೈತರಿಗೂ ಏಕ ರೀತಿಯಲ್ಲಿ ಶೇ 90ರಷ್ಟು ಸಹಾಯಧನ ನೀಡಬೇಕು ಎಂದು ಒತ್ತಾಯಿಸಿದರು.

ಮಹಾರಾಷ್ಟ್ರದಲ್ಲಿ ಕಬ್ಬಿನ ಹಣ ಪಾವತಿಗೆ ಎರಡು ಕಂತು ಯೋಜನೆಯನ್ನು ಜಾರಿಗೆ ತರಲಾಗಿದೆ. ಇದನ್ನು ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಜಾರಿಗೆ ತರಬಾರದು. ಒಂದು ವೇಳೆ ಜಾರಿಗೆ ತಂದರೆ ಅದು ರೈತರ ಮರಣಶಾಸನವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ಸಂಜೀವ್ ಮಾನೆ ಅವರನ್ನು ಸನ್ಮಾನಿಸಲಾಯಿತು.

ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ವೀರನಗೌಡ ಪಾಟೀಲ, ಪದಾಧಿಕಾರಿಗಳಾದ ಎಂ.ಬಿ.ಚೇತನ್, ಬಾಳಪ್ಪ ಬಸಪ್ಪ ಬೆಳಕೋಡ್, ಕೃಷಿ ವಿಜ್ಞಾನಿಗಳಾದ ಪ್ರೊ.ಸ್ವಾಮಿಗೌಡ, ಡಾ.ಕೇಶವಯ್ಯ, ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಮಂಡ್ಯ ಘಟಕದ ಮುಖ್ಯಸ್ಥ ರಾಘವೇಂದ್ರ ಜೈನ್, ಮುಖಂಡರಾದ ಗಿರೀಶ್ ಹಾಲಪ್ಪ, ದೇವಕುಮಾರ್, ಕೆ.ಶಂಕರ, ಹತ್ತಳ್ಳಿ ದೇವರಾಜ್,  ಹಳ್ಳಿಕೆರೆಹುಂಡಿ ಭಾಗ್ಯರಾಜ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು